ಉಡುಪಿ: ಬಜೆ ಡ್ಯಾಂನಿಂದ ಪ್ರತಿನಿತ್ಯ 10ರಿಂದ 11 ಎಂಎಲ್ಡಿಯಷ್ಟು ನೀರನ್ನು ಉಡುಪಿ ನಗರಕ್ಕೆ ಹಾಯಿಸುತ್ತಿರುವುದರಿಂದ ನಗರ ಪ್ರಸ್ತುತ ಉಲ್ಬಣ ಸ್ಥಿತಿಯಿಂದ ಹೊರಬಂದಿದೆ.
ಹೆಚ್ಚಿನ ಪ್ರದೇಶಗಳಿಗೆ ನಗರಸಭೆಯ ವಿತರಣಾ ಜಾಲದ ಮೂಲಕವೇ ನೀರು ಒದಗಿಸಲಾಗುತ್ತಿದೆ. ಕೆಲವೇ ಎತ್ತರದ ಪ್ರದೇಶದ ಮನೆಗಳು, ಕೆಲವು ವಸತಿ ಸಂಕೀರ್ಣ, ಖಾಸಗಿ ಸಂಕೀರ್ಣಗಳನ್ನು ಹೊರತುಪಡಿಸಿದರೆ ಉಳಿದಂತೆ ವಸತಿಗಳಿಗೆ ನೀರು ತಲುಪಿಸುವಲ್ಲಿ ನಗರಸಭೆ ಬಹುತೇಕ ಯಶಸ್ವಿಯಾಗುತ್ತಿದೆ.
ಬಜೆ ಡ್ಯಾಂನ ಜಾಕ್‌ವೆಲ್ ಬಳಿ ಶಾಸಕ ಕೆ. ರಘುಪತಿ ಭಟ್ಸೂಚನೆಯಂತೆ ನಡೆದ ಹೂಳೆತ್ತುವಕಾಮಗಾರಿ ಶುಕ್ರವಾರ ಅಂತ್ಯಗೊಂಡಿತು. ಶೀರೂರಿನ ಹಳ್ಳದಲ್ಲಿ ಈಗಾಗಲೇ ನೀರು ಖಾಲಿಯಾಗಿದೆ. ಮಾಣೈನಲ್ಲಿಯೂ ಶುಕ್ರವಾರ ಬಹುತೇಕ ಖಾಲಿಯಾಗುವ ಹಂತಕ್ಕೆ ಬಂದಿತ್ತು. ಮಾಣೈನಲ್ಲಿ ಪಂಪ್‌ಗ್ಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಭಂಡಾರಿಬೆಟ್ಟು ಗುಂಡಿ ಹಾಗೂ ಪುತ್ತಿಗೆಯ ಹಳ್ಳಗಳಿಂದ ನೀರು ಪಂಪಿಂಗ್ ಮುಂದುವರಿಯಲಿದೆ. ‘ಒಟ್ಟಾರೆಯಾಗಿ ಮುಂದಿನ 15ರಿಂದ18 ದಿನ ನೀರು ಲಭ್ಯವಾಗಲಿದೆ’ ಎಂದು ಶಾಸಕರು ಶುಕ್ರವಾರ ಸಂಜೆ ಹೇಳಿಕೆ ನೀಡಿದ್ದಾರೆ.
ಕರೆಗಳ ಸಂಖ್ಯೆ ಇಳಿಕೆ
ನೀರಿಗಾಗಿ ನಗರಸಭೆಗೆ ಬರುತ್ತಿರುವ ದೂರು ಕರೆಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. ಟ್ಯಾಂಕರ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಪ್ರಸ್ತುತ ಎತ್ತರದ ಕೆಲವು ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲಾಗುತ್ತಿದೆ.
‘ತಗ್ಗು ಪ್ರದೇಶದಲ್ಲಿರುವವರು ತಮ್ಮ ಮನೆಗೆ ಬೇಕಾದಷ್ಟು ನೀರು ಸಂಗ್ರಹವಾದ ಅನಂತರ ಸಂಪರ್ಕ ಬಂದ್ ಮಾಡಬೇಕು. ಆಗ ಮಾತ್ರವೇ ಎತ್ತರದ ಎಲ್ಲ ಮನೆಗಳಿಗೂ ತಲುಪಲು ಸಾಧ್ಯ. ಜನರು ಸಹಕರಿಸಬೇಕು’ ಎಂದು ನಗರಸಭೆ ಅಧಿಕಾರಿಗಳು ಮನವಿ ಮಾಡಿದ್ದಾರೆ.