ಮುಸುಕುಧಾರಿಗಳು ಮಾರಕಾಯುಧಗಳೊಂದಿಗೆ ತೆರಳಿ ಕಳ್ಳತನ ಮಾಡಿದ ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ಇನ್ನೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
Advertisement
ಸಿಸಿಟಿವಿ ದೃಶ್ಯಾವಳಿಯಿಂದ ಘಟನೆ ಬೆಳಕಿಗೆ ಬಂದಿದ್ದು, ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಫ್ಲ್ಯಾಟ್‌ನ ಒಳಗೆ ನುಗ್ಗಿ ಕಳ್ಳತನ ಯತ್ನಿಸುತ್ತಿರುವ ಬಗ್ಗೆ ತಿಳಿದು ಬಂದಿತ್ತು. ಆರೋಪಿಗಳ ಪತ್ತೆಗಾಗಿ ಉಡುಪಿ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಸಿಸಿಟಿವಿ ಸಹಿತ ಇತರ ತಾಂತ್ರಿಕ ಪರಿಶೀಲನೆ ನಡೆಯುತ್ತಿದ್ದು, ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆ ಬಿಗುಗೊಳಿಸಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮನೆ ಕಳ್ಳತನ ಮತ್ತು ಚೈನ್ ಸ್ನ್ಯಾಚಿಂಗ್ ಗಣನೀಯ ಕಡಿಮೆಯಾಗಿದೆ. 2022ರಲ್ಲಿ 16 ಕೊಲೆ, ಸರಕಳ್ಳತನ 8, ಹಗಲು ಮನೆ ಕಳ್ಳತನ 15, ರಾತ್ರಿ ಮನೆಕಳ್ಳತನ 96, 2023ರಲ್ಲಿ 12 ಕೊಲೆ, ಸರಕಳ್ಳತನ 10, ಹಗಲು ಮನೆ ಕಳ್ಳತನ 17, ರಾತ್ರಿ ಮನೆಕಳ್ಳತನ 80, ಈ ವರ್ಷ 2024 ರ ಜು.31 ರವರೆಗೆ 2 ಕೊಲೆ, ಸರಕಳ್ಳತನ 2, ಹಗಲು ಮನೆ ಕಳ್ಳತನ 11, ರಾತ್ರಿ ಮನೆಕಳ್ಳತನ 43 ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ಡಾ. ಅರುಣ್ ತಿಳಿಸಿದ್ದಾರೆ.