Advertisement

Udupi: ಧಾರಾಕಾರ ಮಳೆ; ಹಲವೆಡೆ ಹಾನಿ: ಶಾಲಾ, ಕಾಲೇಜಿಗೆ ರಜೆ ಇಲ್ಲ

11:56 PM Jun 26, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ಬುಧವಾರ ಧಾರಾಕಾರ ಮಳೆಯಾಗಿದ್ದು, ಕುಂದಾಪುರ, ಕಾರ್ಕಳ, ಬ್ರಹ್ಮಾವರ ಭಾಗದಲ್ಲಿ ಅತ್ಯಧಿಕ ಮಳೆಯಾಗಿದೆ. ಹಲವೆಡೆ ಹಾನಿ, ಕೃತಕ ನೆರೆಯಿಂದಾಗಿ ಜನರು ತೊಂದರೆಗೊಳಪಟ್ಟರು.

Advertisement

ಉಡುಪಿ, ಬ್ರಹ್ಮಾವರ ತಾಲೂಕಿನಲ್ಲಿ 11ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದ್ದು, ಮಂಗಳವಾರ ತಡರಾತ್ರಿ, ಗುರುವಾರ ಇಡೀ ದಿನ ನಿರಂತರ ಮಳೆ ಸುರಿದಿದೆ. ಗಾಳಿ-ಮಳೆಗೆ ಹಲವೆಡೆ ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಮಣಿಪಾಲ, ಉಡುಪಿ ಮೊದಲಾದ ಕಡೆ ಗಂಟೆಗಟ್ಟಲೆ ವಿದ್ಯುತ್‌ ಇರಲಿಲ್ಲ.

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಮಳೆ ನೀರು ಸರಾಗವಾಗಿ ಸಾಗದ ಪರಿಣಾಮ ಕರಾವಳಿ ಬೈಪಾಸ್‌, ಕುಂಜಿಬೆಟ್ಟು, ಎಂಜಿಎಂ, ಬ್ರಹ್ಮಾವರ, ಸಂತೆಕಟ್ಟೆ, ಮಲ್ಪೆ ಭಾಗದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಜಿಲ್ಲೆಯ ಕಡೆಕಾರು, ಶಿವಳ್ಳಿ, ಅಲೆವೂರು, ಪಡುತೋನ್ಸೆ, ಮಾಳ, 52 ಹೇರೂರು, ವಂಡಾರು, ಹಾವಂಜೆ, ನಂಚಾರು, ಹೆಗ್ಗುಂಜೆ, ಕಳೂ¤ರು ಭಾಗದಲ್ಲಿ 11 ಮನೆಗಳಿಗೆ ಹಾನಿಯಾಗಿದೆ. ಹಿಲಿಯಾಣದಲ್ಲಿ ವನಜಾ ಅವರ ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದೆ.

ವಿದ್ಯುತ್‌ ವ್ಯತ್ಯಯ
ಎರಡು ದಿನಗಳಿಂದ ಉಡುಪಿ, ಮಣಿಪಾಲ ಭಾಗದಲ್ಲಿ ಗಂಟೆಗಟ್ಟಲೆ ವಿದ್ಯುತ್‌ ಕೈಕೊಟ್ಟಿದ್ದು, ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಮಣಿಪಾಲದಲ್ಲಿ ಬುಧವಾರ ಬೆಳಗ್ಗೆ 9.30ರಿಂದ ಬೆಳಗ್ಗೆ 11 ಗಂಟೆ ವರೆಗೆ ವಿದ್ಯುತ್‌ ಪೂರೈಕೆ ಇರಲಿಲ್ಲ.

ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5ರ ವರೆಗೂ ದಿನಪೂರ್ತಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಜಿಲ್ಲೆಯ ಇತರ ಭಾಗಗಳಲ್ಲೂ ವಿದ್ಯುತ್‌ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ದಿನೇಶ್‌ ಉಪಾಧ್ಯ ಅವರು, ಮೂರ್ನಾಲ್ಕು ದಿನಗಳಿಂದ ಗಾಳಿ ಮಳೆಗೆ ಹಲವೆಡೆ ಹೆಚ್ಚಿನ ಹಾನಿ ಸಂಭವಿಸಿದ್ದು, 102 ವಿದ್ಯುತ್‌ ಕಂಬಗಳು ಹಾನಿಗೊಳಗಾಗಿದೆ. 8 ವಿದ್ಯುತ್‌ ಪರಿವರ್ತಕ, 1.6 ಕಿ. ಮೀ. ವಿದ್ಯುತ್‌ ಲೈನ್‌ಗೆ ಹಾನಿಯಾಗಿದ್ದು, 17.8 ಲಕ್ಷ ರೂ. ನಷ್ಟ ಸಂಭವಿಸಿದೆ. ರಿಪೇರಿ ಕಾರ್ಯ ತುರ್ತಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

ಉಡುಪಿ: ಶಾಲಾ, ಕಾಲೇಜಿಗೆ ರಜೆ ಇಲ್ಲ
ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಸದ್ಯದ ಮಟ್ಟಿಗೆ ಪ್ರವಾಹ ಭೀತಿ ಅಥವಾ ಪ್ರಕೃತಿ ವಿಕೋಪದಂತಹ ಪರಿಸ್ಥಿತಿ ಇಲ್ಲ. ಅದಾಗ್ಯೂ ಸ್ಥಳೀಯವಾಗಿ ರಜೆ ಘೋಷಣೆ ಮಾಡಬೇಕಾಗಿ ಬಂದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರರು ಈ ಸಂಬಂಧ ಕ್ರಮ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next