ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬಹುಜನರ ಬೇಡಿಕೆಯಾಗಿದ್ದ ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಝಡ್‌ಆರ್‌ಆರ್ (ಝೋನಲ್ ರೆಗ್ಯೂಲೇಶನ್ ರೂಲ್ಸ್) ನಿಯಮವನ್ನು ಸರಕಾರ ಬದಲಾವಣೆ ಮಾಡಿದೆ. ಈ ಬಗ್ಗೆ ಸರಕಾರ ಸೋಮವಾರ ನೋಟಿಫಿಕೇಶನ್ ಹೊರಡಿಸಿ ಆದೇಶ ಹೊರಡಿಸಿದೆ.
ಇನ್ನು ಸಾರ್ವಜನಿಕ ಆಕ್ಷೇಪಣೆಗೆ 30 ದಿನಗಳ ಕಾಲಾವಕಾಶವಿದ್ದು, ಬಳಿಕ ಸರಕಾರ ಇದನ್ನು ಕಾನೂನು ಆಗಿ ಪರಿಷ್ಕರಿಸಲಿದೆ. ನಗರ ವ್ಯಾಪ್ತಿಯ ತುಂಡು ಭೂಮಿ ಕೃಷಿ ವಲಯದಲ್ಲಿ ವಸತಿ ಉದ್ದೇಶಕ್ಕೆ 10 ಸೆಂಟ್ಸ್ ಒಳಗೆ ಮನೆ ನಿರ್ಮಿಸುವವರು ಬೆಂಗಳೂರಿಗೆ ಹೋಗದೆ ಪ್ರಾಧಿಕಾರದ ಮಟ್ಟದಲ್ಲಿ ಅನುಮತಿ ಪಡೆಯಬಹುದು.
ನಗರ ಭಾಗದಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ಮನೆ ನಿರ್ಮಾಣಕ್ಕೆ ಕಾಯುತ್ತಿದ್ದರು. ಈಗಾಗಲೇ ಮುಂಗಡ ಪಾವತಿಸಿದವರು, ವಲಯದ ತಿಳಿವಳಿಕೆ ಇಲ್ಲದೆ ಜಾಗ ಖರೀದಿಸಿದವರು ನಿಟ್ಟುಸಿರು ಬಿಡುವಂತಾಗಿದೆ. ಪ್ರಾಧಿಕಾರದಲ್ಲಿ ಮಟ್ಟದಲ್ಲಿ ಅನುಮತಿ ಪಡೆಯಲು ಬಡ, ಮಧ್ಯಮ ವರ್ಗದವರು ತೀರಾ ಸಂಕಷ್ಟಕ್ಕೆ ಸಿಲುಕಿದ್ದರು. ಅನುಕೂಲವಂತರು ಬೆಂಗಳೂರಿಗೆ ತೆರಳಿ ದಲ್ಲಾಳಿಗಳ ಮೂಲಕ ಸರಕಾರದ ಮಟ್ಟದಲ್ಲಿ ವಲಯ ಬದಲಾವಣೆ ಮಾಡಿಸಿಕೊಂಡು ಬರುತ್ತಿದ್ದರು. ಇದೀಗ ಸರಕಾರ ಈ ಸಮಸ್ಯೆಗೆ ಮುಕ್ತಿ ದೊರಕಿಸಿಕೊಟ್ಟಿದೆ. 2016ರ ಹಿಂದೆ ಪ್ರಾಧಿಕಾರದ ಮಟ್ಟದಲ್ಲಿಯೇ ಅನುಮತಿ ನೀಡುವ ಕೆಲಸವಾಗುತ್ತಿತ್ತು. ಅನಂತರ ಸರಕಾರ ಈ ನಿಯಮಾವಳಿಗೆ ತಡೆ ನೀಡಿ ಸರಕಾರ ಮಟ್ಟದಲ್ಲಿ ಭೂ ಪರಿವರ್ತನೆ ಆಗಬೇಕು ಎಂಬ ನಿಯಮ ಜಾರಿಗೆ ತಂದಿದ್ದು, ಉಡುಪಿ ನಗರದಂತಹ ತುಂಡು ಭೂಮಿ ಪ್ರದೇಶಗಳಿಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು.
ಸರಕಾರದ ನೂತನ ಆದೇಶದ ಪ್ರಕಾರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿ 10 ಸೆಂಟ್ಸ್ ಜಾಗದಲ್ಲಿ 3000 ಚದರ ಅಡಿ ವರೆಗೆ ವಾಸ್ತವ್ಯ ಮನೆ ನಿರ್ಮಿಸಬಹುದು. ಆದರೆ ಒಂದು ಎಕ್ರೆ ಭೂಮಿ ಇದ್ದರೆ ಅದನ್ನು ತುಂಡು ಮಾಡಿ ಹಲವಾರು ಮನೆಗಳನ್ನು ನಿರ್ಮಿಸುವಂತಿಲ್ಲ. ಅದು ಬೇರೊಂದು ರೀತಿಯ 45/55 ಲೇಔಟ್ ಕಾನೂನಿಗೆ ಒಳಪಡುತ್ತದೆ. ಸಾವಿರಾರು ಮಂದಿ ಮನೆ ನಿರ್ಮಾಣಕ್ಕೆ ಅವಕಾಶ ಕೊಡುವಂತೆ ಪ್ರಾಧಿಕಾರದ ಕಚೇರಿಗೆ ಬರುತ್ತಿದ್ದರು. ಇದೀಗ ಶಾಸಕರ ಪ್ರಯತ್ನದಿಂದಾಗಿ ಸರಕಾರ ಜನರ ಬೇಡಿಕೆಯನ್ನು ಈಡೇರಿಸಿದೆ ಎಂದು ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ ತಿಳಿಸಿದ್ದಾರೆ.
ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಕೃಷಿ ವಲಯದಿಂದ ವಸತಿ ವಲಯಕ್ಕೆ ವಲಯ ಬದಲಾವಣೆಗೆ ಅವಕಾಶ ಕಲ್ಪಿಸುವ ಅವಶ್ಯಕತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಅಧಿವೇಶನದಲ್ಲಿ ಚರ್ಚಿಸಿ, ಭರವಸೆ ಸಮಿತಿ ಸಭೆಯಲ್ಲಿಯೂ ಈ ಬಗ್ಗೆ ತೀರ್ಮಾನಗಳನ್ನು ಕೈಗೊಂಡಿದ್ದೆವು. ಸರಕಾರ ಮನವಿಯನ್ನು ಪುರಸ್ಕರಿಸಿದೆ. ಉಡುಪಿ ಜನತೆ ಪರವಾಗಿ ಮುಖ್ಯಮಂತ್ರಿಗೆ, ನಗರಾಭಿವೃದ್ಧಿ ಸಚಿವರಿಗೆ ಕೃತಜ್ಞತೆ.
-ಕೆ.ರಘುಪತಿ ಭಟ್, ಶಾಸಕರು
ಸಾಕಷ್ಟು ವರ್ಷಗಳ ಜನರ ಬೇಡಿಕೆಗೆ ಸರಕಾರ ಪೂರಕವಾಗಿ ಸ್ಪಂದಿಸಿದೆ. ಇಲಾಖೆ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ ಶಾಸಕ ಕೆ.ರಘುಪತಿ ಭಟ್ ಮತ್ತು ಸರಕಾರಕ್ಕೆ ವಿಶೇಷ ಕೃತಜ್ಞತೆಗಳು. ಜನರಿಗೆ ಹೆಚ್ಚು ಕಾಯಿಸದೆ ಮನೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗುವುದು.
– ಮನೋಹರ್ ಎಸ್. ಕಲ್ಮಾಡಿ, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ