ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು ಪರವಾನಿಗೆ ಅವಧಿ ಫೆ.3ಕ್ಕೆ ಮುಗಿಯಲಿದೆ. ಪರವಾನಿಗೆ ನವೀಕರಣ ಹಾಗೂ ಹೊಸ ಪರವಾನಿಗೆ ನೀಡುವ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ.
ಈಗಾಗಲೇ 10 ಮರಳು ದಿಬ್ಬಗಳ ಪ್ರಸ್ತಾವನೆಯನ್ನು ಕೆಎಸ್‌ಝೆಡ್‌ಎಂಎಗೆ ಸಲ್ಲಿಸಲಾಗಿದೆ. ಅಂಗೀಕಾರವಾದರೆ ಶೀಘ್ರದಲ್ಲೇ ಹೊಸ ಪರವಾನಿಗೆ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾನಿj ನಾಯಕ್ ತಿಳಿಸಿದ್ದಾರೆ.
ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯ ಎಂಟು ದಿಬ್ಬಗಳಲ್ಲಿದ್ದ 7,96,55,03 ಮೆ.ಟನ್ ಮರಳು ತೆರವಿಗೆ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ 170 ಪರವಾನಿಗೆದಾರರಿಗೆ ನೀಡಿದ್ದ ನಿರಾಕ್ಷೇಪಣ ಪತ್ರದ ಅವಧಿ ಫೆ.3ಕ್ಕೆ ಕೊನೆಯಾಗಲಿದೆ. ಸ್ವರ್ಣಾ ನದಿಯಲ್ಲಿ 6, ಸೀತಾನದಿಯಲ್ಲಿ 3, ಪಾಪನಾಶಿನಿ ನದಿಯಲ್ಲಿ 1 ಸಹಿತ ಒಟ್ಟು 10 ಮರಳು ದಿಬ್ಬಗಳಿಂದ 7,13,000 ಮೆಟ್ರಿಕ್ ಟನ್ ಮರಳು ತೆರವಿಗೆ ಜ. 21ರಂದು ಪ್ರಾದೇಶಿಕ ನಿರ್ದೇಶಕರು (ಪರಿಸರ), ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸಭೆ ಕರೆದು ಅಂಗೀಕಾರ ನೀಡುವ ಪ್ರಕ್ರಿಯೆ ನಡೆದಿಲ್ಲ.
ಮಾರ್ಚ್‌ನಲ್ಲಿ ಮರಳುಗಾರಿಕೆ ?
ಮಂಗಳೂರು: ಜಿಲ್ಲೆಯಲ್ಲಿ ಹೊಸದಾಗಿ ಮರಳು ದಿಬ್ಬ ಗುರುತಿಸಲು ನೇತ್ರಾವತಿ ಹಾಗೂ ಪಲ್ಗುಣಿ ನದಿಯಲ್ಲಿ ಬ್ಯಾಥಮೆಟ್ರಿಕ್ಸ್ ಸರ್ವೆ ಮುಕ್ತಾಯಗೊಂಡಿದೆ. ಈ ಎಲ್ಲ ಪ್ರಕ್ರಿಯೆಗಳು ಕನಿಷ್ಟವೆಂದರೆ ಸುಮಾರು 2 ತಿಂಗಳ ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆಗಳಿದ್ದು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಪ್ರಥಮ ವಾರದಲ್ಲಿ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ.
ಕಳೆದ ವರ್ಷ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಗುರುತಿಸಿದ್ದ ಎಲ್ಲ 22 ದಿಬ್ಬಗಳ ಪರವಾನಿಗೆಗಳ ಅವಧಿ ಎರಡು ಹಂತಗಳಲ್ಲಿ ಮುಕ್ತಾಯ ಗೊಂಡಿತ್ತು. ಪ್ರಥಮ ಹಂತದಲ್ಲಿ ಪರವಾನಿಗೆ ನೀಡಿರುವ 12 ಮರಳು ದಿಬ್ಬಗಳಲ್ಲಿ ಅ.15ರಂದು, ಎರಡನೇ ಹಂತದಲ್ಲಿ ಪರವಾನಿಗೆ ನೀಡಿರುವ 10 ದಿಬ್ಬಗಳಲ್ಲಿ ಮರಳುಗಾರಿಕೆ ಡಿ.26ಕ್ಕೆ ಕೊನೆಗೊಂಡಿತ್ತು. ಇದರೊಂದಿಗೆ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ.