Advertisement
ಸರಕಾರಿ ಆಸ್ಪತ್ರೆಯ ದಾದಿಯರೆಂದರೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಮೂಡುವುದು ಕಣ್ಣಿನಲ್ಲಿ ಕರುಣೆಯೇ ಇಲ್ಲದ, ಬಡ ರೋಗಿಗಳ ಜೀವ ಹಿಂಡುವವರು ಎಂದು. ಆದರೆ ಅವರಿಗೂ ಒಂದು ಒಳ್ಳೆಯ ಮನಸ್ಸಿದೆ. ಉತ್ತಮ ಆಶಯಗಳನ್ನು ಹಾಕಿಕೊಳ್ಳುವ ಮೂಲಕ ಅದನ್ನು ಸಾಕಾರಗೊಳಿಸಿಕೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆ ಇದೆ ಎನ್ನುವುದು ಈ ಕಾರ್ಯದ ಮೂಲಕ ಸಾಬೀತಾಗಿದೆ.
ಉಡುಪಿ ಜಿಲ್ಲೆಯ ಜಿಲ್ಲಾಸ್ಪತ್ರೆ, ಪ್ರಾಥಮಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಶುಶ್ರೂಷಕಿಯರು ಸೇರಿ ಬೆಳಕು ಎನ್ನುವ ಒಂದು ವಾಟ್ಸ್‌ಆ್ಯಪ್ ಗುಂಪೊಂದನ್ನು ರಚಿಸಿ ಆ ಮೂಲಕ ನೇತ್ರದಾನ, ಅಂಗದಾನ ಜಾಗೃತಿ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಥಮ ಹೆಜ್ಜೆಯಾಗಿ ಅಂತಾರಾಷ್ಟ್ರೀಯ ನರ್ಸ್‌ಗಳ ದಿನ ಜಿಲ್ಲೆಯ 25 ಮಂದಿ ದಾದಿಯರು ನೇತ್ರದಾನ ಮಾಡುವ ಸಂಕಲ್ಪದೊಂದಿಗೆ ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಅದಲ್ಲದೆ ಆಸ್ಪತ್ರೆಯ ಕರ್ತವ್ಯ ಮುಗಿದ ಬಳಿಕವೂ ರೋಗಿಗಳ ಶುಶ್ರೂಷೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡ್ರಗ್ಸ್, ಎಚ್‌ಐವಿ, ಏಡ್ಸ್‌ನಂತಹ ಕಾಯಿಲೆಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕಗಳನ್ನು ದಾದಿಯರೇ ನಿರ್ದೇಶಿಸಿ, ನಟಿಸಿ ಅಲ್ಲಲ್ಲಿ ಪ್ರದರ್ಶನ ನೀಡುವ ಯೋಜನೆಯಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಏನೇ ಅನಾಹುತ, ಅಚಾತುರ್ಯ ನಡೆದರೂ ಮೊದಲು ನರ್ಸ್‌ಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ. ವಾಸ್ತವದಲ್ಲಿ ಅವರ ತಪ್ಪಿಲ್ಲದಿದ್ದರೂ ಹೆಚ್ಚಿನ ಸಂದರ್ಭ ಅವರು ಬಲಿಪಶುಗಳಷ್ಟೇ. ಆರೋಪಗಳು ಏನೇ ಇದ್ದರೂ ಉಡುಪಿಯ ಸರಕಾರಿ ದಾದಿಯರು ಕೈಗೊಂಡ ಕಾರ್ಯ ಮೆಚ್ಚಲೇಬೇಕಾದುದು.
Related Articles
121 ಕೋಟಿಗೂ ಅಧಿಕ ಜನಸಂಖ್ಯೆ ಇರುವ ದೇಶದಲ್ಲಿ ಪ್ರತಿ ದಿನ ಸುಮಾರು 86,853 ಮಂದಿ ಹುಟ್ಟಿದರೆ, ದಿನ 62, 389 ಮಂದಿ ಸಾವವನ್ನಪ್ಪುತ್ತಾರೆ. ಭಾರತದಲ್ಲಿ ಕಣ್ಣಿಲ್ಲದವರ ಸಂಖ್ಯೆ 6,82,460 ಎಂದು ತಿಳಿದು ಬಂದಿದೆ. ದೇಶದಲ್ಲಿ ವರ್ಷಕ್ಕೆ 1 ಲಕ್ಷಕ್ಕೂ ಮಿಕ್ಕಿ ಕಣ್ಣು ದಾನ ಮಾಡುವವರ ಅಗತ್ಯವಿದ್ದು, ಆದರೆ ವರ್ಷದಲ್ಲಿ ಕೇವಲ 30 ಸಾವಿರದಷ್ಟು ಮಂದಿ ಮಾತ್ರ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ. ಸಾಯುವವರೆಲ್ಲರೂ ತಮ್ಮ ಕಣ್ಣನ್ನು ದಾನ ಮಾಡುವ ನಿರ್ಧಾರ ಕೈಗೊಂಡರೆ ಬಹುಃ ಒಂದೇ ವರ್ಷದಲ್ಲಿ ಭಾರತದಲ್ಲಿ ಅಂಧರೇ ಇಲ್ಲವಾಗಬಹುದು. ಕಣ್ಣು ದಾನ ಮಾಡಲು ಇಚ್ಛೆಯುಳ್ಳವರು ನೋಂದಾಯಿತ ಕಣ್ಣು ದಾನ ಕೇಂದ್ರಗಳಲ್ಲಿ ಅರ್ಜಿ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.
Advertisement
ಸಮಾಜದ ಋಣ ಸಂದಾಯಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಉಡುಪಿಯ ಸಮಾನ ಮನಸ್ಕ ಶುಶ್ರೂಷಕಿಯರು “ಬೆಳಕು’ ಹೆಸರಿನ ವಾಟ್ಸ್‌ಆ್ಯಪ್ ಗುಂಪಿನ ಮೂಲಕ ತಮ್ಮ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಕುಟುಂಬ ವರ್ಗವೂ ಸೇರಿದೆ. ನಮ್ಮಿಂದ ಪ್ರೇರಿತರಾದ ಹಲವರು ನಮ್ಮ ಗುಂಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅಂಧತ್ವದಿಂದ ಬಳಲುತ್ತಿರುವವರು ಅನೇಕರಿದ್ದಾರೆ. ಸತ್ತ ಅನಂತರ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡರೆ ಎಷ್ಟೋ ಅಂಧರ ಬಾಳಲ್ಲಿ ಬೆಳಕು ಕಾಣಬಹುದು. ಇದು ಪ್ರಚಾರಕ್ಕಾಗಿ ಮಾಡುತ್ತಿರುವುದಲ್ಲ. ಒಳ್ಳೆಯ ಆಶಯ ಈಡೇರಿಸುತ್ತಿದ್ದೇವೆ.
– ಸಜನಿ ಸುಬ್ರಹ್ಮಣ್ಯ, ಮಹಿಳಾ ಆರೋಗ್ಯ ಸಹಾಯಕಿಯರ ಕೇಂದ್ರ ಉಡುಪಿ