Advertisement

ಉಡುಪಿ: ನಗರಕ್ಕೆ 1 ತಿಂಗಳು ನೀರು ಒದಗಿಸುವ ಸವಾಲು!

10:06 AM Apr 26, 2019 | Sriram |

ಉಡುಪಿ: ನಗರದಲ್ಲಿ ನೀರಿನ ಬವಣೆ ಮತ್ತೆ ಆರಂಭವಾಗಿದ್ದು, ಸ್ವರ್ಣಾ ನದಿಯ ಬಜೆ ಅಣೆಕಟ್ಟಿನಲ್ಲಿ ಹತ್ತರಿಂದ ಹದಿನೈದು ದಿನಗಳಿಗಾಗುವಷ್ಟೇ ನೀರಿನ ಸಂಗ್ರಹವಿದೆ.

Advertisement

ಈಗಾಗಲೇ ನಗರಸಭೆ ಮೂರು ದಿನಕ್ಕೊಮ್ಮೆ ನೀರು ಪೂರೈಸುತ್ತಿದೆ. ಸದ್ಯಕ್ಕೆ ಅಣೆಕಟ್ಟಿನ ಅಚ್ಚುಕಟ್ಟುಪ್ರದೇಶದಲ್ಲಿ ಮಳೆ ಬೀಳದಿದ್ದರೆ ಮೇ ತಿಂಗಳಿಗೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.

ಬಜೆಯಲ್ಲಿ ನೀರು ತಳ ಸೇರಿದ್ದು,ಸುಮಾರು 4 ಮೀ. 90 ಸೆಂ.ಮೀ.ಹೂಳು ತುಂಬಿದೆ. ಇದರ ಮೇಲೆ ಅಪಾರ ಪ್ರಮಾಣದಲ್ಲಿ ಗಿಡಗಂಟಿಗಳೂ ಬೆಳೆದಿವೆ. ಅಲ್ಲಲ್ಲಿ ನೀರಿದ್ದರೂ ಪಂಪಿಂಗ್‌ ಮಾಡಲು ಸಾಧ್ಯವಾಗುತ್ತಿಲ್ಲ. ಹೂಳು ತೆಗೆಯಲು ಸೂಕ್ತ ಕ್ರಮ ತೆಗೆದುಕೊಂಡರೆ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗುವ ಸಾಧ್ಯತೆ ಇದೆ.

ಹಿನ್ನೀರು ಪ್ರದೇಶದಲ್ಲಿ ದೊಡ್ಡ ಬಂಡೆಗಳಿರು ವುದು ನೀರು ಸಂಗ್ರಹಕ್ಕೆ ಅಡ್ಡಿಯಾಗಿದೆ. ಜತೆಗೆ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ದಿನವೊಂದಕ್ಕೆ 5ಸೆಂ.ಮೀ.ನಷ್ಟು ನೀರಿನ ಪ್ರಮಾಣ ಕಡಿಮೆಯಾ ಗುತ್ತಿದೆ. ನಗರಕ್ಕೆ ಪ್ರತೀದಿನ 24 ಎಂಎಲ್‌ಡಿ ನೀರಿನ ಅಗತ್ಯವಿದೆ. ಪ್ರಸ್ತುತ ಇಷ್ಟೊಂದು ಪ್ರಮಾಣದ ನೀರನ್ನು ಪೂರೈಸುವುದೇ ಸವಾಲಾಗಿದೆ.

ಎತ್ತರದ ಪ್ರದೇಶಗಳಲ್ಲಿ ನೀರಿಲ್ಲ
ನಗರದ ಎತ್ತರ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ನೀರಿನ ಸಮಸ್ಯೆ ನಿರ್ವಹಣೆಗೆ ನಗರಸಭೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ ಅಲ್ಲಲ್ಲಿ ಸಮಸ್ಯೆ ಉಲ್ಬಣವಾಗುತ್ತಿದೆ. ಬಜೆ ಅಣೆಕಟ್ಟಿನಲ್ಲಿ ಎರಡು ಮೀ. ವರೆಗೆ ಸಂಗ್ರಹವಿದ್ದರೆ ನೀರು ಎತ್ತಬಹುದು. ಎ. 23ರಂದು ನೀರಿನ ಮಟ್ಟ 2.52 ಮೀ.ನಷ್ಟಿದ್ದು, ಅದಕ್ಕಿಂತ ಕೆಳಗಿಳಿದರೆ ಏನು ಮಾಡುವುದು ಎಂಬ ಚಿಂತೆ ನಗರಸಭೆಯದ್ದು.

Advertisement

ಅನ್ಯ ಸಾಧ್ಯತೆಗಳೇನು?
ಹೂಳೆತ್ತಲು ಮರಳುಗಾರಿಕೆ ನಿಯಮ ಅಡ್ಡಿ ಯಾಗಿದೆ. ಹೂಳೆತ್ತಲು ಅನುಮತಿ ನೀಡಿದರೆ ಅನುಕೂಲವಾಗಬಹುದು. ಜಿಲ್ಲಾಧಿಕಾರಿ, ಸಚಿವ,ಶಾಸಕರು ಸೇರಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕಿದೆ.

ನಗರದಲ್ಲಿ 35 ಸಾವಿರ ನೀರು ನಳ್ಳಿ ಸಂಪರ್ಕ ಇದ್ದರೂ 1970ರ ದಶಕದ ನೀರಿನ ವ್ಯವಸ್ಥೆ ಯನ್ನು ಅವಲಂಬಿಸಲಾಗಿದೆ. ಬಜೆ 2ನೇ ಹಂತದ ಅಣೆಕಟ್ಟು ಹೂಳು ತುಂಬಿ ನಿಷ್ಪ್ರಯೋಜಕವಾಗಿದೆ.

ಕಳೆದ ವರ್ಷವೂ ಇತ್ತು ಸಮಸ್ಯೆ
2018ರಲ್ಲೂ ನೀರಿನ ಸಮಸ್ಯೆ ಭೀತಿ ಎದುರಾ ಗಿತ್ತು. ಆದರೆ ಅಷ್ಟರಲ್ಲಿ ಮಳೆಯಾಗಿದ್ದರಿಂದ ಸಮಸ್ಯೆಯಾಗಲಿಲ್ಲ. ಈ ಬಾರಿಯೂ ಜನರು ಮಳೆ ಬೇಗ ನಿರೀಕ್ಷಿಸಿದ್ದಾರೆ. ಮುಖ್ಯವಾಗಿ ಕಾರ್ಕಳ ಪಶ್ಚಿಮ ಘಟ್ಟ ಪ್ರದೇಶದ ಮುಂಡ್ಲಿ ಆಸುಪಾಸಿನಲ್ಲಿ ಮಳೆ ಸುರಿದರೆ ಮಾತ್ರ ಅನುಕೂಲವಾಗಲಿದೆ.

ಚುನಾವಣೆ ಸಂದರ್ಭ
ನಿರಂತರ ಸರಬರಾಜು!
ಚುನಾವಣೆ ಸಮಯದಲ್ಲಿ ನಿರಂತರ ನೀರು ಸರಬರಾಜಾಗುತ್ತಿತ್ತು. ಎ. 18ರ ಅನಂತರ ಪುನಃ 3 ದಿನಕ್ಕೊಮ್ಮೆ ನೀರು ಬರುತ್ತಿದೆ. ನೀರಿನ ಬವಣೆ ಎತ್ತರ ಪ್ರದೇಶ ಸಹಿತ ತಗ್ಗು ಪ್ರದೇಶಗಳಿಗೂ ವ್ಯಾಪಿಸಿದೆ ಎಂಬುದು ಸಾರ್ವಜನಿಕರ ದೂರು.

ಶೀಘ್ರದಲ್ಲೇ ಕ್ರಮ
ನೀರಿನ ಸಮಸ್ಯೆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದೆ. ಸಹಾಯವಾಣಿ ಸಹಿತ ಪರ್ಯಾಯ ಕ್ರಮಗಳ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು.
– ಆನಂದ ಕಲ್ಲೋಳಿಕರ್‌, ಪೌರಾಯುಕ್ತರು, ನಗರಸಭೆ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next