Advertisement
ಉಡುಪಿ ಜಿಲ್ಲೆಯಲ್ಲಿ 2,56,850 ಪಡಿತರ ಚೀಟಿಗಳಿದ್ದು, ಈವರೆಗೆ 2,12,861 ಮಂದಿ ಅಂದರೆ ಶೇ. 82.87ರಷ್ಟು ಕಾರ್ಡ್ ಯೋಜನೆಗೆ ನೋಂದಣಿಯಾಗಿದ್ದು, ಶೇ. 17.13ರಷ್ಟು ಕಾರ್ಡ್‌ದಾರರಿಗೆ ನೋಂದಣಿ ಸಾಧ್ಯವಾಗುತ್ತಿಲ್ಲ. ದ.ಕ.ದಲ್ಲಿ 4,03,333 ಕಾರ್ಡ್‌ದಾರರಿದ್ದು, 3,38,393 ಮಂದಿ ನೋಂದಾಯಿಸಿಕೊಂಡಿದ್ದಾರೆ ಮತ್ತು 64,940 ಕಾರ್ಡ್‌ದಾರರ ನೋಂದಣಿ ಬಾಕಿಯಿದೆ. ಈವರೆಗೆ ನೋಂದಣಿ ಪ್ರಮಾಣ ಶೇ. 83.90ರಷ್ಟಾಗಿದ್ದು ಶೇ. 16.01ರಷ್ಟು ಮಂದಿಯ ನೋಂದಣಿ ಸಾಧ್ಯವಾಗುತ್ತಿಲ್ಲ. 15 ದಿನಗಳ ಹಿಂದೆಯೂ ನೋಂದಣಿ ಪ್ರಮಾಣ ಇಷ್ಟೇ ಇತ್ತು.ರೇಷನ್ ಕಾರ್ಡ್ ಇರುವವರು ಗ್ರಾಮ್ ಒನ್ ಅಥವಾ ಕರ್ನಾಟಕ ಒನ್ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ. ಆದರೆ ಬಹುತೇಕರಿಗೆ ನೋಂದಣಿ ಸಾಧ್ಯವಾಗುತ್ತಿಲ್ಲ. ಕಾರಣ ಇದಕ್ಕಾಗಿ ರೂಪಿಸಿರುವ ಕುಟುಂಬ ಆ್ಯಪ್/ವೆಬ್‌ಸೈಟ್‌ನಲ್ಲಿರುವ ಮಾಹಿತಿಗೂ ಅರ್ಜಿ ಸಲ್ಲಿಸುವಾಗ ನೀಡುವ ಮಾಹಿತಿಗೂ ಹೊಂದಾಣಿಕೆಯಾಗುತ್ತಿಲ್ಲ. ಇದರಿಂದಾಗಿಯೇ ಬಹುಪಾಲು ಕಾರ್ಡ್‌ಗಳು ನೋಂದಣಿಯಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.
ಯೋಜನೆಗೆ ರೇಷನ್ ಕಾರ್ಡ್ ಮಾಹಿತಿಯೇ ಮುಖ್ಯವಾಗಿರುವುದರಿಂದ ಆಹಾರ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ನಿತ್ಯವೂ ಹತ್ತಾರು ಅಹವಾಲುಗಳು ಬರುತ್ತಿವೆ. ಇದರಲ್ಲಿ ಇ-ಕೆವೈಸಿ ಒಂದು ಭಾಗವಾದರೆ, ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ತಿದ್ದುಪಡಿಗೂ ಅವಕಾಶ ನೀಡಿಲ್ಲ. ವಿಳಾಸ ಬದಲಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆಧಾರ್- ಬ್ಯಾಂಕ್ ಖಾತೆ ಲಿಂಕ್ ಆಗಿದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಮನೆಯ ಯಜಮಾನಿ ಹೆಸರು ಬದಲಿಸಬೇಕು, ಅವರು ಈಗ ಬೇರೆ ಮನೆಯಲ್ಲಿದ್ದಾರೆ ಎಂಬ ಹಲವು ಅಹವಾಲುಗಳೊಂದಿಗೆ ಇಲಾಖೆಗೆ ಬರುತ್ತಿದ್ದಾರೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದರು.