Advertisement
ಕುಡಿಯುವ ನೀರಿನ ಸಮಸ್ಯೆಬಾರಕೂರು ತಾ.ಪಂ. ಸದಸ್ಯೆ ಮಾತನಾಡಿ, ಬಾರಕೂರಿನಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಾಕಷ್ಟು ಸಮಸ್ಯೆಯಿದೆ. ಬಂಡೀಮಠ – ನೀಲಾವರ ಕಿಂಡಿ ಅಣೆಕಟ್ಟಿನಲ್ಲಿ ಹಾಕಿರುವ ಮರದ ಹಲಗೆಗಳಿಂದ ಉಪ್ಪು ನೀರು ಪ್ರವೇಶಿಸುತ್ತಿದೆ. ಇದರಿಂದಾಗಿ ಅಣೆಕಟ್ಟಿನಲ್ಲಿ ಶೇಖರಗೊಳ್ಳುವ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಶೀಘ್ರವಾಗಿ ಶಾಶ್ವತ ಪರಿಹಾರ ನೀಡಬೇಕು. ಇಲ್ಲವಾದರೆ ಈ ಪ್ರದೇಶದ ಜನರು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ತತ್ತರಿಸುವ ದಿನ ಎದುರಾಗಲಿದೆ ಎಂದವರು ಹೇಳಿದರು. ಇದಕ್ಕೆ ಕೆಲವು ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಓ ಬಾರಕೂರು ಕಿಂಡಿ ಅಣೆಕಟ್ಟು ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಕಳೆದ ಬಾರಿ ಸೀತಾನದಿ ಹರಿಯುವಲ್ಲಿ ನಿರ್ಮಾಣವಾದ ಅಣೆಕಟ್ಟಿಗೆ ಮರದ ಹಲಗೆ ಬದಲಾಗಿ ಫೈಬರ್ ಹಲಗೆ ಆಳವಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಹಂದಾಡಿ ತಾ.ಪಂ. ಸದಸ್ಯ ಸುಧೀರ್ ಶೆಟ್ಟಿ ಮಾತನಾಡಿ, ಗ್ರಾ.ಪಂ.ನಲ್ಲಿ ನಡೆಯುವ ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಭಾಗವಹಿಸುತ್ತಿಲ್ಲ. ಇದರಿಂದಾಗಿ ಗ್ರಾಮಸಭೆಯ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ ಎಂದು ದೂರಿದರು. ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ರಾವ್ ಮಾತನಾಡಿ, ಬೊಮ್ಮರಬೆಟ್ಟು ಗ್ರಾ.ಪಂ.ನಲ್ಲಿ ಅಭಿವೃದ್ಧಿ ಕಾಮಗಾರಿಗಳಾದ ಬಸ್‌ನಿಲ್ದಾಣ, ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಕಾಮಗಾರಿಗಳ ನಿರ್ಣಯಕ್ಕೆ ತಾ.ಪಂ. ಅಧ್ಯಕ್ಷರು ಸ್ಥಳೀಯ ತಾ.ಪಂ. ಸದಸ್ಯರ ಗಮನಕ್ಕೆ ತಾರದೆ ಅಭಿವೃದ್ಧಿ ಕಾಮಗಾರಿಗೆ ತಡೆಯಾಜ್ಞೆ ತಂದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಪ್ರತಿಕ್ರಿಯಿಸಿ, ಯಾವುದೇ ರೀತಿ ಶಾಂತಿ ಭಂಗವಾಗಬಾರದೆನ್ನುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಕುತ್ಯಾರು ಸೇತುವೆ ಬುಡದಲ್ಲಿ ಸಿಲುಕಿರುವ ಮರಗಳ ದಿಣ್ಣೆಗಳ ಕುರಿತು, ಉದ್ಯೋಗ ಖಾತ್ರಿ ಯೋಜನೆ, ಕಾಪು ಹಕ್ಕುಪತ್ರ, ಟೋಲ್ ಗೇಟ್ ಸುಂಕ ವಸೂಲಾತಿ ಸೇರಿದಂತೆ ಇತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ತಹಶೀಲ್ದಾರ್ ಪ್ರದೀಪ್ ಕುಡೇìಕರ್, ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಿ., ಸಾಮಾಜಿಕ ನ್ಯಾಯ ಸಮತಿ ಅಧ್ಯಕ್ಷ ಭುಜಂಗ ಶೆಟ್ಟಿ, ನೂತನ ಇಓ ರಾಜು ಕೆ., ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
Related Articles
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದು, ಕಳೆದ 1 ವರ್ಷ 7 ತಿಂಗಳು ಕಾಲ ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಮೋಹನ್‌ರಾಜ್ ಅವರನ್ನು ಸಮ್ಮಾನಿಸಲಾಯಿತು. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಶಿವಮೊಗ್ಗ ಮೂಲದ ರಾಜು ಕೆ. ಅವರು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಮೋಹನ್‌ರಾಜ್ ಅವರು ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.
Advertisement