ಉಡುಪಿ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಆತಂಕ ದಿನೇದಿನೇ ಮುಂದುವರಿಯುತ್ತಿದೆ. ಈ ನಡುವೆ ಕಾರ್ಕಳ ಭಾಗದಲ್ಲಿ ಹೆಚ್ಚು ಮಳೆ ಆಗಿರುವುದರಿಂದ ಸ್ವರ್ಣಾ ನದಿ ಮುಂಡ್ಲಿ ಡ್ಯಾಂನಲ್ಲಿ ನೀರಿನ ಹೊರ ಅರಿವು ಆರಂಭವಾಗಿರುವುದು ತುಸು ನೆಮ್ಮದಿ ತರಿಸಿದೆ.
ಸದ್ಯ ನಗರಕ್ಕೆ ಕುಡಿಯುವ ನೀರು ಪೂರೈಸುವ ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ ಎರಡು-ಮೂರು ದಿನಕ್ಕೆ ಬೇಕಾಗುವಷ್ಟು ಮಾತ್ರ ನೀರಿನ ಪ್ರಮಾಣ ಲಭ್ಯವಿದೆ. ನಗರದಲ್ಲಿ ಜಲಮೂಲಗಳು ಬರಿದಾಗಿದ್ದು, ಐದು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರು ಸರಿಯಾಗಿ ತಲುಪದ ಕಡೆ ನಗರಸಭೆ ವತಿಯಿಂದ ಟ್ಯಾಂಕರ್‌ನಲ್ಲಿ ನೀರು ಕೊಡಲಾಗುತ್ತಿದೆ.
ಈಗಾಗಲೇ 10 ನೀರಿನ ಟ್ಯಾಂಕರ್‌ಗಳಿದ್ದು, ಇನ್ನೆರಡು ಟ್ಯಾಂಕರ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. ಎಲ್ಲ ಟ್ಯಾಂಕರ್ ಮೂಲಕ ದಿನಕ್ಕೆ 60ಕ್ಕೂ ಅಧಿಕ ಟ್ರಿಪ್‌ಗ್ಳಲ್ಲಿ ನೀರು ಕೊಡಲಾಗುತ್ತಿದೆ.
ಕೆಲದಿನಗಳ ಹಿಂದೆ ಪಶ್ಚಿಮಘಟ್ಟ ಪರಿಸರ ಕಾರ್ಕಳ, ಹೆಬ್ರಿ ಭಾಗದಲ್ಲಿ ಉತ್ತಮ ಮಳೆಯಾದ್ದರಿಂದ ಸ್ವರ್ಣಾ ನದಿಯಲ್ಲಿ ನೀರು ಹರಿವು ಆರಂಭಗೊಂಡಿದೆ. ಸದ್ಯ ಮುಂಡ್ಲಿ ಅಣೆಕಟ್ಟೆಯಲ್ಲಿ ಹೊರ ಹರಿವು ಆರಂಭಗೊಂಡಿದೆ. ಈ ನೀರು ಬಜೆಯತ್ತ ಬರುತ್ತಿದ್ದು, ಇನ್ನು ಎರಡು, ಮೂರು ದಿನ ಹೆಚ್ಚುವರಿಯಾಗಿ ನೀರು ಕೊಡಬಹುದೆಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಕಳ ಸ್ವರ್ಣಾ ನದಿಯ ಮುಂಡ್ಲಿ ಡ್ಯಾಂನಲ್ಲಿ ಹೊರ ಹರಿವು ಆರಂಭವಾಗಿದೆ. ಮಳೆಯಾಗ ದಿದ್ದರೆ ನಮ್ಮ ಲೆಕ್ಕಾಚಾರದ ಪ್ರಕಾರ ಈ ನೀರಿನ ಪ್ರಮಾಣದಿಂದ ಇನ್ನೆರಡು- ಮೂರು ದಿನ ಹೆಚ್ಚುವರಿ ನೀರು ಪೂರೈಕೆ ಮಾಡಬಹುದು. ಪ್ರಸ್ತುತ ನೀರು ತಲುಪದ ಕಡೆಗೆ ಟ್ಯಾಂಕರ್ ತಲುಪಿಸಲಾಗುತ್ತಿದೆ.
– ಆರ್. ಪಿ. ನಾಯ್ಕ, ಪೌರಾಯುಕ್ತರು, ನಗರಸಭೆ