ಉಡುಪಿ: ಜನಗಳ ಧಾರ್ಮಿಕ ಭಾವನೆಯನ್ನು ಕದಡಿ ಪರಶುರಾಮ ಥೀಂ ಪಾರ್ಕ್ (Parashurama Theme Park) ನಿರ್ಮಾಣ ಮಾಡಲಾಗಿದೆ. ಸುನಿಲ್ ಕುಮಾರ್ (Sunil Kumar) ಅವರು ಶಾಸಕನಾಗಲು ಸುಳ್ಳು ಹೇಳಿ ನಕಲಿ ಮೂರ್ತಿ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ (Muniyal Uday Kumar Shetty) ಆರೋಪಿಸಿದರು.
ಉಡುಪಿಯಲ್ಲಿ ಸೋಮವಾರ (ಆ.05) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ ಮರ್ಯಾದೆ ಇದ್ದರೆ ಸುನಿಲ್ ಕುಮಾರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ದೇವರ ಹೆಸರಲ್ಲಿ, ಧಾರ್ಮಿಕತೆಗೆ ಮೋಸ ಮಾಡಬಾರದು ಎಂದು ಕಿಡಿಕಾರಿದರು.
ಒಂದು ವರ್ಷದ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ. ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುವಾಗ ಮನಸ್ಸಿಗೆ ಘಾಸಿಯಾಗುತ್ತದೆ. ಪರಶುರಾಮನ ಮೂರ್ತಿಯ ಬಿಡಿ ಭಾಗಗಳನ್ನು ಪೊಲೀಸರು ವಶಪಡಿಸಿದ್ದಾರೆ. ಅರ್ಧ ಮೂರ್ತಿ ಸಿದ್ಧ ಇರುವಾಗಲೇ, ಮತ್ತೆ ಎರಡು ಕಾಲು ತಯಾರಿಸಿದ್ದು ಯಾಕೆ ಎಂದು ತಿಳಿಯುತ್ತಿಲ್ಲ. ಹಾಗಾದರೆ ಬೆಟ್ಟದ ಮೇಲಿರುವ ಅರ್ಧಮೂರ್ತಿ ಕೂಡ ನಕಲಿಯೇ? ಎಂದು ಪ್ರಶ್ನಿಸಿದರು.
ಪರಶುರಾಮ ಥೀಂ ಪಾರ್ಕ್ ಉದ್ಘಾಟನಾ ಕಾರ್ಯಕ್ರಮಕ್ಕೆ 2.50 ಕೋಟಿ ಖರ್ಚು ಮಾಡಿದ್ದಾರೆ. ಕಂಚಿನ ಪ್ರತಿಮೆ ವೆಚ್ಚಕ್ಕಿಂತ ಹೆಚ್ಚು ಉದ್ಘಾಟನೆಗೆ ಖರ್ಚಾಗಿದೆ. ವರ್ಕ್ ಆರ್ಡರ್ ಗಿಂತ ಮೊದಲು ಒಂದು ಕೋಟಿ ಅಡ್ವಾನ್ಸ್ ಹಣ ಕೊಡಲಾಗಿದೆ. ಕಾನೂನು ಗಾಳಿಗೆ ತೂರಿ ಗೋಮಾಳದಲ್ಲಿ ಥೀಂ ಪಾರ್ಕ್ ನಿರ್ಮಿಸಲಾಗಿದೆ. ಫೈಬರ್ ನ ನಕಲಿ ಮೂರ್ತಿ ಸೃಷ್ಟಿಸಿ ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ದೂರಿದರು.
ಪೊಲೀಸರು ಮಹಜರಿಗೆ ಕರೆದಕ್ಕೆ ನಾನು ಬೆಂಗಳೂರಿನ ಆರ್ಟ್ ಗ್ಯಾಲರಿಗೆ ಹೋಗಿದ್ದೇನೆ. ಮಹಜರು ಪ್ರಕ್ರಿಯೆಗೆ ಸಾಮಾನ್ಯ ಮನುಷ್ಯನಾಗಿ ಹೋಗಿದ್ದೇನೆ. ನನ್ನ ಕಾರು ಚಾಲಕ ಲಿಂಗಾಯತ, ಮತ್ತೋರ್ವ ಮೊಗವೀರ ಸಮುದಾಯದ ಗೆಳೆಯ. ಮಹಜರು ಮತ್ತು ಮೂರ್ತಿ ತೆರವಿಗೆ ನಾನು ಮುಸ್ಲಿಮರನ್ನು ಕರೆದುಕೊಂಡು ಬಂದಿಲ್ಲ ಎಂದು ಹೇಳಿದರು.
ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ್ ದೊಡ್ಡ ಡ್ರಾಮಾ ಕ್ರಿಯೇಟರ್. ಕೃಷ್ಣ ನಾಯ್ಕ್ ಚಡಪಡಿಸುವಿಕೆ ವರ್ತನೆ ನೋಡಿ ನಾನು ಅಲ್ಲಿಂದ ವಾಪಾಸ್ ಬಂದಿದ್ದೇನೆ. ಅವರು ಬಂದು ನಮ್ಮದು ತಪ್ಪಾಯ್ತು ಚುನಾವಣೆ ಗೆಲ್ಲಲು ನಾವು ಹೀಗೆ ಮಾಡಿದ್ದೇವೆ ಎಂದು ಹೇಳಲಿ. ನಾಳೆ ಬಂದರೂ ಅವರನ್ನು ಸ್ವಾಗತಿಸಿ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಪ್ರಯತ್ನ ಪಡುತ್ತೇವೆ ಎಂದರು.