Advertisement

ಆನೆಕಾಲು ರೋಗ ಮುಕ್ತ ಜಿಲ್ಲೆಯತ್ತ ಉಡುಪಿ ದಾಪುಗಾಲು

01:22 AM Oct 06, 2019 | Sriram |

ಉಡುಪಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಆನೆಕಾಲು ರೋಗ ಮುಕ್ತ ಜಿಲ್ಲೆಯಾಗುವತ್ತ ಉಡುಪಿ ದಾಪುಗಾಲಿಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ 3 ಹಂತಗಳಲ್ಲಿ ಆನೆಕಾಲು ರೋಗ ಪತ್ತೆ ಸಮೀಕ್ಷೆ ಕೈಗೊಳ್ಳಲಾಗಿದ್ದು, ಸ್ಥಳೀಯವಾಗಿ ರೋಗಾಣು ಉತ್ಪಾದನೆ ಶೇ.1ಕ್ಕಿಂತ ಕಡಿಮೆ ಗೋಚರಿಸಿದೆ.

Advertisement

ಜಿಲ್ಲೆಯಲ್ಲಿ 2004ಕ್ಕಿಂತ ಪೂರ್ವದಲ್ಲಿ 470 ಮಂದಿ ಆನೆಕಾಲು ರೋಗಕ್ಕೆ ತುತ್ತಾಗಿದ್ದು, ವ್ಯಾಪಕ ಜಾಗೃತಿ ಕೈಗೊಳ್ಳ ಲಾಗಿತ್ತು. 2012ರವರೆಗೆ ಪ್ರತೀ ವರ್ಷ ಎಲ್ಲರಿಗೂ 3 ಡಿಇಸಿ ಮಾತ್ರೆಗಳನ್ನು ಕಡ್ಡಾಯವಾಗಿ ನೀಡಲಾಗಿದ್ದು, ನಿಯಂತ್ರಣದಲ್ಲಿ ಶೇ. 98ರಷ್ಟು ಗುರಿ ಸಾಧಿಸಲಾಗಿದೆ. ಪರಿಣಾಮ ರೋಗ ನಿಯಂತ್ರಣಕ್ಕೆ ಬಂದಿದ್ದು, ಅನಂತರ ಸೊಳ್ಳೆಗಳ ಬೆಳವಣಿಗೆ, ವೈರಾಣು ಪ್ರಸರಣದ ಬಗ್ಗೆ ಆರೋಗ್ಯ ಇಲಾಖೆ 3 ಹಂತದಲ್ಲಿ ಸರ್ವೇ ನಡೆಸಿದೆ.

2014ರಲ್ಲಿ ಮೊದಲ ಸರ್ವೆ ಕಾರ್ಯ ನಡೆದಿದ್ದು, ಜಿಲ್ಲೆಯಲ್ಲಿ 92 ಶಾಲೆಗಳಲ್ಲಿ 5ರಿಂದ 6 ವರ್ಷದ 1 ಮತ್ತು 2ನೇ ತರಗತಿಯ 1,579 ಮಕ್ಕಳಿಗೆ ಐಸಿಟಿ ಟೆಸ್ಟ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ 5 ಮಂದಿಯಲ್ಲಿ ರೋಗಾಣು ಪತ್ತೆಯಾಗಿತ್ತು. 2016 ರಲ್ಲಿ ನಡೆದ 2ನೇ ಸರ್ವೆಯಲ್ಲಿ 64ಶಾಲೆಗಳ 1,671 ಮಕ್ಕಳನ್ನು ಪರೀಕ್ಷಿಸಿದ್ದು, 10 ಮಕ್ಕಳಲ್ಲಿ ರೋಗ ಲಕ್ಷಣ ಕಂಡುಬಂದಿದೆ. 2019ರಲ್ಲಿ 54 ಶಾಲೆಗಳಿಂದ 1,632 ಮಕ್ಕಳನ್ನು ಪರೀಕ್ಷೆ ಒಳಪಡಿಸಲಾಗಿದ್ದು, 9 ಮಕ್ಕಳಲ್ಲಿ ರೋಗಾಣು ಕಂಡುಬಂದಿದೆ. ಅನಂತರ ಡಬ್ಲೂéಎಚ್‌ಒ ಗುರುತಿಸಿದ 19 ಪ್ರದೇಶಗಳಲ್ಲಿ ವಿವಿಧ ಪರೀಕ್ಷೆ ನಡೆಸಿದಾಗ ಶೇ. 1ಕ್ಕಿಂತಲೂ ಕಡಿಮೆ ರೋಗಾಣು ಪತ್ತೆಯಾಗಿರುವುದರಿಂದ ಈ ಟಾಸ್ಕ್ ನಲ್ಲಿ ಜಿಲ್ಲೆ ಉತ್ತೀರ್ಣವಾಗಿದೆ. ಡಬ್ಲೂéಎಚ್‌ಒ ಮುಂದಿನ 2 ವರ್ಷ ಜಿಲ್ಲೆಯಲ್ಲಿ ಆನೆಕಾಲು ರೋಗ ಪ್ರಕರಣ ಬಗ್ಗೆ ನಿಗಾ ವಹಿಸಲಿದ್ದು, ಬಳಿಕ ಪ್ರಮಾಣ ಪತ್ರ ನೀಡಲಿದೆ.

ಹೊರ ಜಿಲ್ಲೆ ಮತ್ತು ರಾಜ್ಯದಿಂದ ಆಗಮಿಸುವ ಕಾರ್ಮಿಕರಲ್ಲಿ ಆನೆಕಾಲು ರೋಗ ಲಕ್ಷಣ ಕಂಡುಬಂದಿದ್ದು, ಅವರನ್ನು ಗುರುತಿಸಿ ಔಷಧ ನೀಡಲಾಗುತ್ತಿದೆ. ಡಬ್ಲೂéಎಚ್‌ಒ ನೀಡಿದ 3 ಟಾಸ್ಕ್ ಪೂರ್ಣಗೊಂಡಿದೆ. ಇದರಲ್ಲಿ ಜಿಲ್ಲೆ ಉತ್ತೀರ್ಣವಾಗಿದೆ. ಮುಂದಿನ ಹಂತದಲ್ಲಿ ಸೊಳ್ಳೆ ಮಾದರಿ ಪರೀಕ್ಷೆ ಹಾಗೂ ಸಮಗ್ರ ಸರ್ವೇ ನಡೆಸಿದಾಗ ನೆಗೆಟಿವ್‌ ವರದಿ ಬಂದರೆ ಪ್ರಮಾಣ ಪತ್ರ ಲಭಿಸಲಿದೆ.
-ಡಾ| ಪ್ರಶಾಂತ್‌ ಭಟ್‌
ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next