Advertisement

Udupi: ಶ್ರೀರಾಘವಾನಂದಗಿರಿ ಸ್ವಾಮಿ ಇನ್ನಿಲ್ಲ

12:34 AM Feb 02, 2024 | Team Udayavani |
ಉಡುಪಿ: ಉಡುಪಿ ತೆಂಕಪೇಟೆ ನಿವಾಸಿ ಬಿ. ರಮಾನಂದ ಪೈ ಯಾನೆ ಶ್ರೀರಾಘವಾನಂದಗಿರಿ ಸ್ವಾಮಿ (85) ಅವರು ಜ. 30ರಂದು ಪ್ರಯಾಗದಲ್ಲಿ ನಿರ್ಯಾಣ ಹೊಂದಿದರು. ಬುಧವಾರ ಪ್ರಯಾಗದ ಕ್ರಮದಂತೆ ಜಲಸಮಾಧಿ ನೆರವೇರಿಸಲಾಯಿತು.
ಬಗ್ಗರಬೆಟ್ಟು ವಾಸುದೇವ ಪೈ ಮತ್ತು ಕಲ್ಯಾಣಿ ಪೈ ದಂಪತಿಯ ಕಿರಿಯ ಪುತ್ರರಾಗಿದ್ದ ಅವರು ಅವಿವಾಹಿತರಾಗಿದ್ದರು. ಕೆನರಾ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ತಮ್ಮ 51ನೆಯ ವಯಸ್ಸಿನಲ್ಲಿ 1988ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು. ಆಗ ಅವರು ಸ್ಪೆಶಲ್‌ ಅಸಿಸ್ಟೆಂಟ್‌ ಆಗಿದ್ದರು. ಕೆನರಾ ಬ್ಯಾಂಕ್‌ನೊಂದಿಗೆ ಪಾಂಗಾಳ ನಾಯಕ್‌ ಬ್ಯಾಂಕ್‌ ವಿಲೀನಗೊಳ್ಳುವ ಮೊದಲು ಪೈಯವರು ಉಡುಪಿಯಲ್ಲಿ, ಬಳಿಕ ಕಲ್ಯಾಣಪುರ, ಶಂಕರಪುರ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಆರಂಭದಿಂದಲೂ ಇವರು ಆಧ್ಯಾತ್ಮದ ಬಗ್ಗೆ ಅಪಾರ ಒಲವು ಹೊಂದಿದ್ದರು. 1980ರಲ್ಲಿ ಮಾನಸ ಸರೋವರ ಮತ್ತು ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದರು. ತಾಯಿಯ ಒತ್ತಾಸೆಗೆ ಕಟ್ಟುಬಿದ್ದು, ಸನ್ಯಾಸ ದೀಕ್ಷೆ ತೊಡುವ ತಮ್ಮ ಆಸೆಯನ್ನು ಅದುಮಿಟ್ಟು ತಾಯಿ ನಿಧನರಾಗುವವರೆಗೂ ಬ್ರಹ್ಮಚಾರಿಯಾಗಿ ಜೀವನ ಸಾಗಿಸಿದರು. ಬುಲೆಟ್‌ ಬೈಕನ್ನು ಉಡುಪಿಗೆ ಪ್ರಥಮ ಬಾರಿಗೆ ಪರಿಚಯಿಸಿದ್ದು ಇವರೆ. ಸುರುಳಿ ಮೀಸೆ ಹೊಂದಿದ ಇವರಿಗೆ ಮೀಸೆ ರಮಾನಂದು ಎಂಬ ಉಪನಾಮವಿತ್ತು.
-ನುರಿತ ಈಜುಪಟುವಾಗಿ ಹಲವು ಈಜುಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಇವರು ಮೈಸೂರು ದಸರಾ ಚಾಂಪಿಯನ್‌ ಆಗಿ ಹಲವು ಬಾರಿ ಪ್ರಶಸ್ತಿ ಪಡೆದಿದ್ದರು. ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಕೆರೆಯಲ್ಲಿ ಸುಮಾರು 28 ವರ್ಷಗಳ ಕಾಲ (1960 ರಿಂದ 1988) ಕಿರಿಯರಿಂದ ಹಿರಿಯರಾದಿಯವರೆಗೆ ಎಲ್ಲರಿಗೂ ಈಜುವ ವಿದ್ಯೆ ಕಲಿಸಿದ್ದರು.
-ಮಲ್ಪೆಯ ಸಮುದ್ರ ಕಿನಾರೆಯಿಂದ ಬಾದ್ರಗಡ ಮತ್ತು ಸೈಂಟ್‌ ಮೇರಿಸ್‌ ದ್ವೀಪಕ್ಕೆ ಈಜುತ್ತಾ ತಲುಪುವುದು, ಸಮುದ್ರದ ನೀರಿನಲ್ಲಿ, ಕೆರೆಯಲ್ಲಿ ಪದ್ಮಾಸನಗೈದು ಗಂಟೆಗಟ್ಟಲೆ ತೇಲುವುದು, ಇಂದ್ರಾಳಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಧ್ಯಾನಾಸಕ್ತರಾಗುವುದು ಅಲ್ಲದೆ ಮಣಿಪಾಲದ ಮಂಚಿಕೆರೆ ಪ್ರದೇಶದಲ್ಲಿ ಹರಿವ ನೀರಿನ ಸಣ್ಣ ಜಲಪಾತದ ಅಡಿಯಲ್ಲಿ ಗುಹೆಯೊಂದನ್ನು ನಿರ್ಮಾಣ ಮಾಡಿ ಇದರಲ್ಲಿ ತಪೋನಿರತರಾಗಿ ಆಧ್ಯಾತ್ಮಿಕ ಚಿಂತನೆಗೈಯುತ್ತಿದ್ದರು.
-ಹನುಮಂತನನ್ನು ಸದಾ ಆರಾಧಿಸುತ್ತಿದ್ದ ಇವರು ವ್ಯಾಯಾಮ ಮುಖೇನ ಆರೋಗ್ಯವನ್ನು ಕಾಪಾಡಿಕೊಳ್ಳುವ ಧ್ಯೇಯದೊಂದಿಗೆ 1960ರಲ್ಲಿ ಭಜರಂಗಬಲಿ ವ್ಯಾಯಾಮ ಶಾಲೆಯನ್ನು ಐಡಿಯಲ್‌ ಜಂಕ್ಷನ್‌ನಲ್ಲಿ ಸ್ಥಾಪನೆಗೈದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ವ್ಯಾಯಾಮ ಕಲಿಯಲು ಪ್ರೇರೇಪಿಸಿದರು. ಸ್ವತಃ ಕಠಿನ ಪರಿಶ್ರಮದಿಂದ ದೇಹದಾಡ್ಯ ಪಟುವಾಗಿ ಅಸಂಖ್ಯ ಸ್ಪರ್ಧಾ ವಿಜೇತರಾಗಿ, ಮೈಸೂರು ದಸರಾ ಚಾಂಪಿಯನ್‌ ಆಗಿದ್ದು, ಸಹಸ್ರಾರು ಶಿಷ್ಯಂದಿರನ್ನು ತಯಾರು ಮಾಡಿದ್ದರು.
-ಅಶಕ್ತರಿಗೆ ಸಂದರ್ಭೋಚಿತ ವೈದ್ಯಕೀಯ ಮತ್ತು ವಿದ್ಯಾರ್ಜನೆಯ ಸಹಾಯ ಒದಗಿಸಿದ ಇವರು ಪ್ರಾಣಿಪ್ರಿಯರಾಗಿದ್ದರು. ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಜಿ.ಎಸ್‌.ಬಿ. ಯುವಕ ಮಂಡಳಿಯಲ್ಲಿ ಸಕ್ರಿಯ ಸದಸ್ಯರಾಗಿ, ಭಜನ ಮಂಡಳಿಯೊಂದಿಗೆ ಊರು ಪರವೂರಿನಲ್ಲೆಲ್ಲಾ ಭಜನ ಪಾಳಿಯೊಂದಿಗೆ ಕೊಳಲು ವಾದಕರಾಗಿ ಸೇವೆ ಸಲ್ಲಿಸಿದ್ದರು.
-ಬ್ಯಾಂಕಿನಿಂದ ಸ್ವಯಂ ನಿವೃತ್ತಿ ಹೊಂದಿ ಕಾಶಿಯಲ್ಲಿರುವ ಶ್ರೀ ಕಾಶೀಮಠ ಸಂಸ್ಥಾನದ ಶಾಖಾ ಮಠದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ್ದರು. ಹೃಷಿಕೇಶ, ಗಂಗೋತ್ರಿ ಮುಂತಾದ ಪುಣ್ಯಕ್ಷೇತ್ರಗಳಲ್ಲಿ ಸಾಧು ಸಂತರೊಡನೆ ಧಾರ್ಮಿಕ ಚಿಂತನೆಯಲ್ಲಿ ಸಾಗಿ ಕಾಲಾನಂತರದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದರು. ಶ್ರೀರಾಘವಾನಂದ ಗಿರಿ ಸ್ವಾಮಿ ನಾಮಧೇಯದೊಂದಿಗೆ ಪ್ರಯಾಗದ ಓಮಾನಂದ ಆಶ್ರಮದಲ್ಲಿ ಸಾಧಕರಾಗಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next