Advertisement

ಉಡುಪಿ ಶ್ರೀಕೃಷ್ಣ ಮಠದ ದೇವರ ದರ್ಶನದಲ್ಲಿ ಮಾರ್ಪಾಟು: ಏಕಕಾಲದಲ್ಲಿ ಎರಡು ಪ್ರವೇಶದ ವ್ಯವಸ್ಥೆ

09:07 AM Jan 30, 2020 | sudhir |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಮಾಡುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

Advertisement

ಈಗ ಬಹುತೇಕರು ವಾಹನಗಳಲ್ಲಿ ಬಂದು ರಾಜಾಂಗಣ ಹಿಂಭಾಗದ ಪಾರ್ಕಿಂಗ್‌ ಪ್ರದೇಶದಿಂದ ರಾಜಾಂಗಣ ಬಳಿಯಿಂದ ಶ್ರೀಕೃಷ್ಣಮಠವನ್ನು ಪ್ರವೇಶಿಸುವ ಕಾರಣ ಅವರಿಗೆ ಭೋಜನ ಶಾಲೆಯ ಮೇಲ್ಭಾಗದಿಂದ ದಾರಿಯನ್ನು ಕಲ್ಪಿಸಲಾಗಿದೆ. ಇವರು ಅಲ್ಲಿಂದ ಒಳಗೆ ಹೋಗಿ ಶ್ರೀಕೃಷ್ಣ ಮಠದ ಮೇಲ್ಭಾಗದ ಪೌಳಿಗೆ ಪ್ರವೇಶಿಸುತ್ತಾರೆ. ಅಲ್ಲಿಂದ ಮುಂದೆ ಹೋಗಿ ಶ್ರೀಕೃಷ್ಣ ಮಠದ ಒಳಪೌಳಿಯ ಮೆಟ್ಟಿಲಿನಿಂದ ಚಂದ್ರಶಾಲೆಗೆ ಇಳಿಯುತ್ತಾರೆ.

ಈಗ ಗರ್ಭಗುಡಿಯ ಎದುರು ಭಾಗಕ್ಕೆ ಬಂದಂತಾಗುತ್ತದೆ. ದಾರಿಯಲ್ಲಿ ಅಲ್ಲಲ್ಲಿ ಫ‌ಲಕಗಳನ್ನು, ನೆಲದ ಅಂತರಗಳು ತಿಳಿಯುವಂತೆ ರೇಡಿಯಮ್‌ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುತ್ತದೆ. ಒಂದೇ ಬಾರಿಗೆ ಎಲ್ಲರನ್ನೂ ಗರ್ಭಗುಡಿ ಎದುರು ಭಾಗಕ್ಕೆ ಬಿಡದೆ 40 ಜನರ ಒಂದೊಂದು ತಂಡವನ್ನು ದರ್ಶನಕ್ಕೆ ಬಿಡಲಾಗುತ್ತದೆ.

ಇದೇ ವೇಳೆ ಶ್ರೀಕೃಷ್ಣ ಮಠವನ್ನು ರಥಬೀದಿಯಿಂದ ಪ್ರವೇಶಿಸುವ ಮುಖ್ಯದ್ವಾರದ ಪಕ್ಕದಲ್ಲಿರುವ ದಾರಿಯಲ್ಲಿ ಸ್ಥಳೀಯ ಭಕ್ತರು ಪ್ರವೇಶಿಸಬಹುದು. ಇವರು ಇದೇ ದಾರಿಯಲ್ಲಿ ಒಳಪ್ರವೇಶಿಸಿ ದೇವರ ದರ್ಶನ ಮಾಡಬಹುದು.

ಇದುವರೆಗೆ ಯಾತ್ರಾರ್ಥಿಗಳು ಮತ್ತು ಸ್ಥಳೀಯರು ರಥಬೀದಿ ಮುಂಭಾಗದ ಒಂದೇ ಕಡೆಯಿಂದ ಪ್ರವೇಶಿಸುತ್ತಿದ್ದರು. ಭಕ್ತರ ಸಂಖ್ಯೆ ಹೆಚ್ಚಾದಾಗ ಮಧ್ವ ಸರೋವರದ ಬದಿಯಲ್ಲಿ ಸರತಿ ಸಾಲು ಮುಂದುವರಿಯುತ್ತಿತ್ತು. ಮಧ್ಯಾಹ್ನದ ವೇಳೆ ಬಿಸಿಲು ಅಥವಾ ಮಳೆ ಇದ್ದಾಗ ಯಾತ್ರಾರ್ಥಿಗಳಿಗೆ ನಿಂತು ಸುಸ್ತಾಗುತ್ತಿತ್ತು. ಈಗ ಭಕ್ತರು ಪ್ರವೇಶಿಸುವ ರಾಜಾಂಗಣದ ಪ್ರವೇಶದಿಂದ ಭೋಜನ ಶಾಲೆಯ ಮಹಡಿಯಿಂದ ಹೋಗುವ ಕಾರಣ ಬಿಸಿಲು ಅಥವಾ ಮಳೆಯ ಸಮಸ್ಯೆ ಇದಿರಾಗುವುದಿಲ್ಲ. ಶ್ರೀಕೃಷ್ಣ ಮಠದ ಗರ್ಭಗುಡಿಗೆ ನಿರ್ಮಿಸಲಾದ ಸ್ವರ್ಣ ಗೋಪುರದ ದರ್ಶನವೂ ಆಗುತ್ತದೆ. ಚಂದ್ರಶಾಲೆಯ ಮೇಲ್ಭಾಗದಲ್ಲಿಯೂ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಒಂದಿಷ್ಟು ಜನರು ಅಲ್ಲಿ ನಿಲ್ಲಲೂ ಅವಕಾಶಗಳಿವೆ. ಒಂದು ವೇಳೆ ನಡೆಯಲಾಗದ ಹಿರಿಯ ನಾಗರಿಕರಿಗೆ ರಥಬೀದಿಯ ಪ್ರವೇಶದ್ವಾರದಲ್ಲಿ ವೀಲ್‌ ಚೆಯರ್‌ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಶ್ರೀಕೃಷ್ಣ ಮಠದ ಮೂಲಗಳು ತಿಳಿಸಿವೆ.

Advertisement

ಮಧ್ಯಾಹ್ನ ಮತ್ತು ರಾತ್ರಿ ವೇಳೆ ಭೋಜನಕ್ಕಾಗಿ ಹೋಗುವವರಿಗೂ ಇದೇ ದಾರಿಯಾಗಿದೆ. ಇಲ್ಲಿ ಭೋಜನಕ್ಕೆ ಮತ್ತು ದರ್ಶನಕ್ಕೆ ಹೋಗಲು ಪ್ರತ್ಯೇಕ ಎರಡು ವಿಭಾಗಗಳನ್ನು ಮಾಡಲಾಗಿದೆ.

ಹೊಸ ವ್ಯವಸ್ಥೆಯನ್ನು ಬುಧವಾರದಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಅಲ್ಲಲ್ಲಿ “ದೇವರ ದರ್ಶನಕ್ಕೆ ದಾರಿ’ ಎಂಬ ಫ‌ಲಕಗಳನ್ನು, ಅಲ್ಲಲ್ಲಿ ಬೇಕಾದ ಬೆಳಕು ಮತ್ತು ರೇಡಿಯಮ್‌ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುತ್ತಿದೆ.

ಕಾರ್ಯಾಲಯದಲ್ಲಿಯೂ ಮಾರ್ಪಾಟು
ಶ್ರೀಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ಇದುವರೆಗೆ ತಳ ಅಂತಸ್ತಿನಲ್ಲಿ ಕಾರ್ಯಾಲಯವಿತ್ತು. ಇನ್ನು ಮುಂದೆ ಆಗಮಿಸಿದವರ ವಿಚಾರಣೆಗೆ ಮಾತ್ರ ಒಬ್ಬರು ಸಿಬಂದಿ ಇರುತ್ತಾರೆ. ಕೆಳಗೆ ಇದ್ದ ಕಚೇರಿ ವ್ಯವಹಾರಗಳನ್ನು ಮೊದಲ ಮಹಡಿಗೆ ಸ್ಥಳಾಂತರಿಸಲಾಗುತ್ತದೆ. ಕೆಳ ಭಾಗದ ಇನ್ನೊಂದು ಭಾಗದಲ್ಲಿ ಸ್ವಾಮೀಜಿಯವರನ್ನು ಭಕ್ತರು ಭೇಟಿ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ.

ಮತ್ತೂಂದು ಭಾಗದಲ್ಲಿ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಇರಿಸುವ ವ್ಯವಸ್ಥೆ ಈ ಹಿಂದಿನಂತೆ ಮುಂದುವರಿಯುತ್ತದೆ. ಮೇಲ್ಭಾಗದಲ್ಲಿದ್ದ ಸ್ವಾಮೀಜಿಯವರು ಇರುತ್ತಿದ್ದ ಕೋಣೆಯಲ್ಲಿ ಪಾಠಗಳು ನಡೆಯುತ್ತವೆ. ಸ್ವಾಮೀಜಿಯವರನ್ನು ಭಕ್ತರು ಭೇಟಿ ಮಾಡುವ ವ್ಯವÓ§ೆ ಕೆಳಗೆ ಇರುತ್ತದೆ.

ಸ್ಥಳೀಯ ಭಕ್ತರಿಗೆ ಕೆಲವೇ ಹೊತ್ತಿನಲ್ಲಿ ದೇವರ ದರ್ಶನ ಮಾಡುವ ಉದ್ದೇಶ ಮತ್ತು ಯಾತ್ರಾರ್ಥಿಗಳು ಬಿಸಿಲು ಮತ್ತು ಮಳೆಯ ಸಮಸ್ಯೆಯಿಂದ ಬಳಲದೆ ಆರಾಮವಾಗಿ ದೇವರ ದರ್ಶನ ಮಾಡುವ ಉದ್ದೇಶ ನೂತನ ವ್ಯವಸ್ಥೆಯ ಹಿಂದಿದೆ.
– ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,
ಪರ್ಯಾಯ ಶ್ರೀ ಅದಮಾರು ಮಠ, ಶ್ರೀಕೃಷ್ಣ ಮಠ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next