Advertisement

ಹರಿದಾಸ ಸಾಹಿತ್ಯದಲ್ಲಿ ಉಡುಪಿ ಶ್ರೀಕೃಷ್ಣ ಮಠ

12:15 AM Jan 16, 2022 | Team Udayavani |

ವ್ಯಾಸತೀರ್ಥರಿಂದ ಆರಂಭವಾದ ದಾಸ ಸಾಹಿತ್ಯವು ಇಂದಿಗೂ ಜನಪ್ರಿಯವಾಗಿದೆ. ಶ್ರೀಕೃಷ್ಣನ ಭಕ್ತರಾದ ಹರಿದಾಸರೆಲ್ಲರೂ ಉಡುಪಿಗೆ ಅನೇಕ ಸಲ ಭೇಟಿ ನೀಡಿದ‌ರು. ಶ್ರೀಕೃಷ್ಣನನ್ನು ಕಂಡು ಪುನೀತರಾದ‌ರು. ಉಡುಪಿಯಲ್ಲಿ ಶ್ರೀಕೃಷ್ಣನಿಗೆ ನಡೆಯುವ ವಿವಿಧ ಪೂಜಾದಿಗಳನ್ನು ಕಣ್ತುಂಬ ಕಂಡ‌ರು. ಈ ಸೌಂದರ್ಯವನ್ನು ಕೀರ್ತನೆಗಳಲ್ಲಿ ವರ್ಣಿಸಿದ‌ರು. ಹಾಗಾಗಿ ಹರಿದಾಸ ಸಾಹಿತ್ಯವು ಅಂದಿನ ಶ್ರೀಕೃಷ್ಣ ಮಠದ ಪರಿಸರದ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Advertisement

ಉಡುಪಿ ಶ್ರೀಕೃಷ್ಣನ ಸಾನ್ನಿಧ್ಯವು ಅನ್ನದಾ ನಕ್ಕೆ ಹೆಸರು ಪಡೆದಿತ್ತು. ವಿಜಯದಾಸರು ಉಡುಪಿಯಲ್ಲಿ ತಂಗಿದ್ದ ದಿನಗಳಲ್ಲಿ ಇದನ್ನೇ ಶ್ರೀಕೃಷ್ಣನ ಪ್ರಸಾದ ಎಂದು ಭುಂಜಿಸಿದರು. ವಿಜಯದಾಸರ ಒಂದು ಕೀರ್ತನೆಯು ಶ್ರೀಕೃಷ್ಣ ಪ್ರಸಾದದ ಮಹಿಮೆಯನ್ನು ಬಣ್ಣಿಸಲು ಮೀಸಲಾಗಿದೆ. “ಆವ ಜನ್ಮದ ಪುಣ್ಯ ಫ‌ಲಿಸಿತೆನಗೆ | ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ’ ಎನ್ನುತ್ತಾರೆ ಅವರು. ಈ ಕೀರ್ತನೆಯಲ್ಲಿ ಕೃಷ್ಣ ಪ್ರಸಾದದಲ್ಲಿರುವ ವಿವಿಧ ಬಗೆಗಳನ್ನು ವಿವರಿಸುತ್ತಾ ಭಕ್ತರ‌ ಬದುಕನ್ನು ಪುನೀತ ಮಾಡುವ ವಿಧಾನವನ್ನೂ ತಿಳಿಸುತ್ತಾರೆ. ಲವಣವನು ಉಂಡರೆ ಜನ್ಮ ಜನ್ಮಾಂತರದ ಪಾಪರಾಶಿಗಳು ನಾಶವಾಗುತ್ತವೆ. ಶಾಖಫ‌ಲಗಳನ್ನು ತಿಂದರೆ ಷಡ್ವೆ„ರಿಗಳಿಂದ ಬೆನ್ನಟ್ಟಿ ಬರುವ ದುಃಖ ರಾಶಿಗಳು ಅಳಿದು ಹೋಗುತ್ತವೆ. ಸೂಪವನು ಉಂಡಾಗ ಮುಂದೆ ಅಟ್ಟಿ ಬರಬಹುದಾದ ಆಪತ್ತು ಹಿಂದಕ್ಕೆ ಓಡಿ ಹೋಗುತ್ತವೆ. ಭಕ್ಷ್ಯವನು ಭುಂಜಿಸಿದಾಗ ಭಕ್ತಿ ಹುಟ್ಟುತ್ತದೆ. ಅನ್ನವನ್ನು ಉಂಡರೆ ಸಜ್ಜನರ, ಸಾಧುಗಳ ಸಂಗ ದೊರೆಯುತ್ತದೆ. ಆ ಮೂಲಕ ಭೇದಾರ್ಥ ಜ್ಞಾನವು ಸಿದ್ಧಿಸಿ, ಮಧ್ವಮತದ ಅಬ್ದಿಯಲ್ಲಿ ತೇಲಾಡುವ ಸುಖವು ಲಭಿಸುವುದು. ತುಪ್ಪ, ಮೊಸರು, ಮಜ್ಜಿಗೆ ಮೊದಲಾದವುಗಳ ಸೇವನೆಯಿಂದ ಇಂದ್ರಿಯಗಳು ಕೆಟ್ಟ ವಿಚಾರದತ್ತ ಓಡಾಡದೇ ಶ್ರೀಕೃಷ್ಣನ ಪಾದಸೇವೆಗೆ ಮುಂದಾಗುತ್ತವೆ. ವಿಜಯದಾಸರು ಈ ಕೀರ್ತನೆಯ ಕೊನೆಯಲ್ಲಿ ಶ್ರೀ ಕೃಷ್ಣ ದರ್ಶನ ಹಾಗೂ ಕೃಷ್ಣ ಪ್ರಸಾದದ ಲಾಭವನ್ನು ವಿವರಿಸಿರುತ್ತಾರೆ. “ಕೃಷ್ಣ ಸಂದರುಶನ, ಮೃಷ್ಟಾನ್ನ ಭೋಜನ | ಕಷ್ಟನಾಶನ ಸರ್ವ ಕರ್ಮಕಧಿಕಾ | ಇಷ್ಟಸುಖ ಸೌಖ್ಯಕರ ಮತ್ತಾವಲ್ಲಿ ಕಾಣೆ |’.

ಶ್ರೀಕೃಷ್ಣ ಮಠದ ಮಧ್ವ ಸರೋವರ: ಶ್ರೀಕೃಷ್ಣ ಮಠದ ಪರಿಸರದಲ್ಲಿ ಮಧ್ವ ಸರೋವರ ಇಂದಿಗೂ ಪವಿತ್ರ ತೀರ್ಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಜಯದಾಸರು ತಮ್ಮ ಕೀರ್ತನೆಯೊಂದರಲ್ಲಿ ಮಧ್ವ ಸರೋವರದ ಮಹಿಮೆಯನ್ನು ಬಣ್ಣಿಸಿದ್ದಾರೆ. “ಮಧ್ವ ಸರೋವರದ ಸ್ನಾನ ಮಾಡಿರೋ | ಬುದ್ಧಿವಂತರು ಕೇಳಿ ಇದರ ಮಹಾತೆ¾ಯನು ||’ ಎಂದು ಈ ಕೀರ್ತನೆ ಆರಂಭವಾಗುತ್ತದೆ. ಇದು ಕೃತಯುಗದಲ್ಲಿ ಅನಂತ ಸರೋವರ, ತ್ರೇತಾಯುಗದಲ್ಲಿ ವರುಣ ತೀರ್ಥ. ದ್ವಾಪರದಲ್ಲಿ ಚಂದ್ರ ಪುಷ್ಕರಣಿಯಾದರೆ, ಕಲಿಯುಗದಲ್ಲಿ ಮಹಾತೀರ್ಥ. ಈ ಸರೋವರದಲ್ಲಿ ಸ್ನಾನ ಮಾಡಿದರೆ ಸಿಗುವ ಪುಣ್ಯವನ್ನು ದಾಸರು ಮುಂದೆ ವಿವರಿಸುತ್ತಾರೆ. ಒಂದೆ ಮಜ್ಜನ ಮಾಡೆ ಅನಂತ ಜನುಮಕೆ | ತಂದು ಕೊಡುವುದು ನರಗೆ ಮಿಂದ ಫ‌ಲವು | ಎನ್ನುತ್ತಾ ಇಲ್ಲಿ ಬಿಡದೆ ವಾಸವಾದ ಮಂದಿಗಳ ಪುಣ್ಯ ಪ್ರತಾಪ ಎಣಿಸುವವರಾರು ಎನ್ನುತ್ತಾರೆ.

ಗುರು ಗೋವಿಂದವಿಠಲದಾಸರು ತಮ್ಮ 60ನೇ ವರ್ಷವನ್ನು ಉಡುಪಿಯ ಕೃಷ್ಣನ ಸನ್ನಿಧಾನದಲ್ಲಿ ಆಚರಿಸಿಕೊಂಡ ಹರಿದಾಸರು. ಸುಮಾರು 15 ದಿನಗಳ ಕಾಲ ಉಡುಪಿಯಲ್ಲೇ ವಾಸವಿದ್ದರು. ಉಡುಪಿ ಶ್ರೀಕೃಷ್ಣನ ಕುರಿತು ಕೃತಿ ರಚಿಸಿ ಅರ್ಪಿಸುವುದರ ಮೂಲಕ ತಮ್ಮ ಷಷ್ಟ್ಯಬ್ದವನ್ನು ಆಚರಿಸಿಕೊಂಡ ಗೋವಿಂದ ವಿಠಲದಾಸರು “ಉಡುಪಿ ಯಾತ್ರೆಯ ಮಾಡಿ’ ಎಂಬ ಕೀರ್ತನೆ ಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ಮಧ್ವ ಸರೋವರವನ್ನು ವರ್ಣಿಸಿರುತ್ತಾರೆ.
ಮಧ್ವ ಸರೋವರ ಸ್ನಾನ | ಭಕ್ತಿ
ಶುದ್ಧದಿ ಶ್ರೀಕೃಷ್ಣ ಧ್ಯಾನ | ಮಾಡೆ
ಹೃದ್ಯನು ಹೃದ್ಯಧಿಷ್ಠಾನ | ದಲ್ಲಿ
ಸಿದ್ಧಿಸೂವನು ಗುಣಪೂರ್ಣ | ಆಹ
ಮುದ್ದುಕೃಷ್ಣನು ಗುರು| ಗೋವಿಂದವಿಠಲನು
ಶ್ರದ್ಧೆ ಸತ್ವಕ್ಕೊಲಿವ | ಸಿದ್ಧ ಕನಕನ ನೋಡಿ ||
ಮಧ್ವ ಸರೋವರದ ಸ್ನಾನ, ಶ್ರೀಕೃಷ್ಣನಲ್ಲಿ ಅಚಲ ಶ್ರದ್ಧೆಗಳಿಂದ ಶ್ರೀಕೃಷ್ಣನ ಪೂರ್ಣಾನುಗ್ರಹ ಸಾಧ್ಯ. ಕನಕನ ನಿಷ್ಕಲ್ಮಶ ಭಕ್ತಿಗೆ ಕೃಷ್ಣ ಒಲಿದಂತೆ ಮಧ್ವ ಸರೋವರದಲ್ಲಿ ಸ್ನಾನ ಮಾಡಿ, ಶ್ರೀಕೃಷ್ಣನನ್ನು ಶುದ್ಧ ಮನಸ್ಸಿನಿಂದ ಧ್ಯಾನಿಸುವವರಿಗೂ ಕೃಷ್ಣ ಒಲಿಯುತ್ತಾನೆ.

ಶ್ರೀಕೃಷ್ಣನ ಅಲಂಕಾರ: ಉಡುಪಿ ಶ್ರೀಕೃಷ್ಣನು ಅಲಂಕಾರ ಪ್ರಿಯನು. ಶ್ರೀಕೃಷ್ಣನನ್ನು ಮುಟ್ಟಿ ಪೂಜಿಸುವ ಯತಿಗಳಿಗೂ ಶ್ರೀಕೃಷ್ಣನನ್ನು ಅಲಂಕರಿಸಿದಷ್ಟೂ ಮನಸ್ಸು ದಣಿಯದು. ವಿವಿಧ ಪೂಜೆ ಹಾಗೂ ಅಲಂಕಾರಗಳಿಂದ ಆರಾಧಿಸಲ್ಪಡುವ ಶ್ರೀಕೃಷ್ಣನ ಅಲಂಕಾರ ವೈಭವ ವನ್ನು ವಾದಿರಾಜರು ತಮ್ಮ ಕೀರ್ತನೆಯೊಂದರಲ್ಲಿ ಸುಂದರವಾಗಿ ವರ್ಣಿಸಿರುತ್ತಾರೆ. “ಬಣ್ಣಿಸಲಳವೆ ನಾನು ಬಣ್ಣಿಸಲಳವೇ ಬಹುವೇಷವುಳ್ಳ ಲಾವಣ್ಯದ ಕಣಿಯಾದ ಉಡುಪಿ ಶ್ರೀಕೃಷ್ಣನ’ ಎಂಬ ಕೀರ್ತನೆಯಲ್ಲಿ ವಾರದ ಏಳು ದಿನಗಳಲ್ಲಿ ಅಲಂಕೃತಗೊಂಡ ಶ್ರೀಕೃಷ್ಣನ ವಿವಿಧ ಅಲಂಕಾರಗಳ ವರ್ಣನೆಗಳಿವೆ. ರವಿವಾರದಂದು ಧರೆಗಿಳಿದ ಸೂರ್ಯನಾರಾಯಣನಂತೆ, ಸೋಮವಾರ‌ದಂದು ರಾಜಗೋಪಾಲನಂತೆ, ಮಂಗಳವಾರದಂದು ಕಿರಾತನಂತೆ ಖಡ್ಗಧಾರಿಯಾಗಿ ದುಷ್ಟರ ಸಂಹಾರಕ್ಕೆ ಸಿದ್ಧನಾದಂತೆ, ಬುಧವಾರ ಹಾಗೂ ಗುರುವಾರಗಳಲ್ಲಿ ಬ್ರಾಹ್ಮಣನಾಗಿ, ಶುಕ್ರವಾರ ಮೋಹಿನಿ ಯಾಗಿ, ಶನಿವಾರ ಶಂಖಚಕ್ರಗಳನ್ನು ಹಿಡಿದು ವೆಂಕಟೇಶನಂತೆ ಶೋಭಿಸುತ್ತಾನೆ ಎಂದು ವಾದಿರಾಜರು ವಿವರಿಸುತ್ತಾರೆ.

Advertisement

ಉಡುಪಿಯ ಪರ್ಯಾಯ: ಕ್ರಿ.ಶ.1760 ರಲ್ಲಿದ್ದ ನೆಕ್ಕಾರು ಕೃಷ್ಣದಾಸರು ಉಡುಪಿ ಜಿಲ್ಲೆಯ ಪೆರಂಪಳ್ಳಿಯವರಾಗಿದ್ದು ಉಡುಪಿಯ ಕೃಷ್ಣನನ್ನು ಬಗೆ ಬಗೆಯಾಗಿ ವರ್ಣಿಸಿದ್ದರು. ಇವರ ಶ್ರೀಕೃಷ್ಣ ಚರಿತ್ರೆ ಎಂಬ ಕಾವ್ಯ ಈ ನಿಟ್ಟಿನಲ್ಲಿ ಗಮನಾರ್ಹವಾದುದು. ವರಾಹ ತಿಮ್ಮಪ್ಪದಾಸ ಎಂಬ ಕಾವ್ಯನಾಮದಿಂದ ಅನೇಕ ಕೀರ್ತನೆಗಳನ್ನು ರಚಿಸಿದ ನೆಕ್ಕಾರರ ಶ್ರೀಕೃಷ್ಣ ಚರಿತ್ರೆಯು ಸಾಂಗತ್ಯ ಛಂದಸ್ಸಿನಲ್ಲಿದ್ದು, ನಾಲ್ಕು ಸಂಧಿಗಳನ್ನೊಳಗೊಂಡಿದೆ. (ಇವರ ವಂಶಸ್ಥರು ಇದೀಗ ಪರ್ಯಾಯ ಮಹೋತ್ಸವವನ್ನು ಆಚರಿಸುತ್ತಿರುವ ಶ್ರೀ ಕೃಷ್ಣಾಪುರ ಮಠದ ಪರಂಪರೆಯಲ್ಲಿ ಇಪ್ಪತ್ತೂಂಬತ್ತನೆಯವರಾದ ಶ್ರೀ ವಿದ್ಯಾನಿಧಿತೀರ್ಥರ ಶಿಷ್ಯವರ್ಗಕ್ಕೆ ಸೇರಿದವರೆಂಬ ಸಂಶೋಧಕ ಡಾ| ಶ್ರೀನಿವಾಸ ಹಾವನೂರರ ಅಭಿಪ್ರಾಯವನ್ನು ಎ. ವಿ. ನಾವಡರು ಲೇಖನವೊಂದರಲ್ಲಿ ಉಲ್ಲೇಖೀಸಿರುತ್ತಾರೆ.) ಮೊದಲ ಸಂಧಿಯಲ್ಲಿ ಆಚಾರ್ಯ ಮಧ್ವರು ಶ್ರೀಕೃಷ್ಣನನ್ನು ಉಡುಪಿಗೆ ಕರೆದು ತಂದ ವಿವರಗಳಿವೆ. “ಶರಣು ಶ್ರೀ ಗುರುಮಧ್ವರಾಯ ನಿಮ್ಮಡಿಗಳ್ಗೆ’ ಎಂದು ಆರಂಭವಾಗುವ ಕಾವ್ಯದಲ್ಲಿ ಆಚಾರ್ಯ ಮಧ್ವರು ಗುರು ಮಾತ್ರವಲ್ಲ ಅವರೋರ್ವ ವೈದ್ಯರು ಎಂದು ಬಣ್ಣಿಸುತ್ತಾರೆ.

ತುಳುವ ದೇಶಾಶುದ್ಧವೆಂಬ ಬಾಯೊಳಗಿದ್ದ
ಹುಳುವಾ ತೆಗೆವ ಸುಪ್ರಸಿದ್ಧ
ತಿಳಿದು ಮಾಡಿದ ಮದ್ದ ಕೊಳಲಿಹ ಪರಸಾಧ್ಯ
ಗುರುಮಧ್ವಮುನಿ ಬದ್ಧ ವೈದ್ಯ ||
ಶ್ರೀಕೃಷ್ಣನನ್ನು ದ್ವಾರಕೆಯಿಂದ ತೌಳವ ನಾಡಿಗೆ ತಂದು ಅದನ್ನು ಶುದ್ಧ ಮಾಡಿದರು. ಆಚಾರ್ಯ ಮಧ್ವರಿಂದಾಗಿ ಉಡುಪಿ ವೈಕುಂಠಕ್ಕೆ ಸಮಾನವಾಯಿತು. ಇಲ್ಲಿನ ಮಧ್ವ ಸರೋವರವು ವಿರಜಾ ನದಿಯಾಯಿತು. ಮುಂದೆ ಆಚಾರ್ಯ ಮಧ್ವರು ಶ್ರೀಕೃಷ್ಣನ ಪೂಜೆಗೆ ಅಷ್ಟಮಠಗಳನ್ನು ಸ್ಥಾಪಿಸಿ, ಅಷ್ಟಯತಿಗಳನ್ನು ನೇಮಿಸಿದ ವಿವರಗಳಿವೆ. ಉಡುಪಿ ಪರ್ಯಾಯದ ಕುರಿತು ಹೇಳುತ್ತಾ ಕೃಷ್ಣದಾಸರು “ಪರ್ಯಾಯದೊಳ್‌ ಕೃಷ್ಣನರ್ಚನೆ ಸೇರ್ಪುದು, ಕುರುಡನಕ್ಷಿಯ ಪಡೆದಂತೆ’ ಎನ್ನುತ್ತಾರೆ. ಹೀಗೆ ಎರಡು ವತ್ಸರವಿಂತು ಪರ್ಯಾಯ ಪೂಜೆ ಮಾಡಿ ಪೋಪಾಗಕ್ಕು ಚಿಂತೆ ಎನ್ನುತ್ತಾರೆ. ಇವರ ಕೃತಿಯ ಕುರಿತು ಬರೆಯುತ್ತಾ ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರು ಆ ಕಾಲದ ಪರ್ಯಾಯಕ್ಕೆ ಸಾಲ ಮಾಡುವ ಪರಿಸ್ಥಿತಿ ಇದ್ದಿತ್ತು ಎನ್ನುತ್ತಾರೆ. “ಹರಿಯಾರಾಧನೆಗೀರೇಳ್ವರ್ಷ ಸಂಚರಿಸುತ್ತೀ ಪರಿಯಿಂದ ಪುರುಳ ಸಂಗ್ರಹಿಪರ್‌, ಪರಿಯಾಯ ದೀಕ್ಷೆಯ ಧರಿಸುತ್ತ ಸರಿಮಾಡಿ ಹರದರೊಳ್‌ ಸಾಲವ ಕೊಂಬರು’. ಶ್ರೀಕೃಷ್ಣನ ಪೂಜೆಯಾಗುವಾಗ ಕಾಳೆ, ಕಂಸಾಳೆ, ಶ್ರುತಿ, ನಾಗಸ್ವರ, ತಾಳತಮ್ಮಟೆ, ಶಂಖ, ಭೇರಿ, ನಿಸ್ಸಾಳ ಮೊದಲಾದ ವಾದ್ಯಗಳನ್ನು ನುಡಿಸುತ್ತಿರುವುದನ್ನೂ ವಿವರಿಸುತ್ತಾರೆ. ರಾಜಾಂಗಣ, ರಥಬೀದಿ, ಚೌಕಿ ಭೋಜನ, ನವವಿಧ ಪೂಜೆ, ಪರ್ಯಾಯದ ಆರಂಭದಿಂದ ಕೊನೆಯ ತನಕ ನಡೆಯುವ ವಿವಿಧ ಉತ್ಸವಗಳ ವಿವರಗಳೆಲ್ಲ ಶ್ರೀಕೃಷ್ಣ ಚರಿತ್ರೆಯಲ್ಲಿ ಮೂಡಿಬಂದಿದೆ.

ಕೋವಿಡ್‌ ನಿಮಿತ್ತ ಈ ಬಾರಿಯೂ ಪರ್ಯಾಯವು ಸರಳವಾಗಿ ನಡೆಯುತ್ತಿದೆ. ಆಚಾರ್ಯ ಮಧ್ವರು ಹಾಕಿಕೊಟ್ಟ ಸಂಪ್ರದಾಯದಲ್ಲಿಯೇ ಪರ್ಯಾಯ ನಡೆಯುತ್ತಿದೆ. ಎರಡು ತಿಂಗಳಿಗೊಮ್ಮೆ ನಡೆಯುತ್ತಿದ್ದ ಪದ್ಧತಿಯನ್ನು ವಾದಿರಾಜ ಯತಿಗಳು ಎರಡು ವರ್ಷಕ್ಕೆ ವಿಸ್ತರಿಸಿದರು. ಉಡುಪಿ ಪರ್ಯಾಯವು ಭಕ್ತ ಸಮೂಹಕ್ಕೆ ಭಾವುಕತೆಯನ್ನು ಮೈದುಂಬಿಸಿಕೊಂಡು ಧನ್ಯರಾಗುವ ಕ್ಷಣ ಎನ್ನಬಹುದು.

-ಡಾ| ಶ್ರೀಕಾಂತ್‌ ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next