Advertisement

Udupi: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೇಗ ಹೆಚ್ಚಿಸಿ: ಜಿಲ್ಲಾಧಿಕಾರಿ ಸೂಚನೆ

12:25 AM Dec 14, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ, ಸವಾರಿಗೆ ಅನಾನುಕೂಲ ವಾಗುತ್ತಿವೆ. ಕಾಮಗಾರಿಯ ವೇಗದ ಮಿತಿಯನ್ನು ಹೆಚ್ಚಿಸಿ, ಶೀಘ್ರದಲ್ಲಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾ.ಹೆ. 66, 169 ಹಾಗೂ 169ಎ ನಲ್ಲಿ ಎದ್ದಿರುವ ಗುಂಡಿಗಳು, ಅಸಮರ್ಪಕ ದಾರಿದೀಪ ನಿರ್ವಹಣೆ, ಚರಂಡಿಗಳ ನಿರ್ಮಾಣ, ಪಾದಚಾರಿ ಮಾರ್ಗದಲ್ಲಿ ಇಂಗು ಗುಂಡಿಗಳು ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ರಾ.ಹೆ. ಕಾಮಗಾರಿಗೆ ಅಗತ್ಯವಿರುವ ಭೂಮಿಯ ಸ್ವಾಧೀನ ಪ್ರಕ್ರಿಯೆ ಕಾರ್ಯವು ತುಂಬಾ ವಿಳಂಬವಾಗುತ್ತಿದೆ.

ಭೂ ಮಾಲಕರಿಗೆ ವೈಜ್ಞಾನಿಕವಾಗಿ ಪರಿಹಾರವನ್ನು ಆದ್ಯತೆಯ ಮೇಲೆ ನೀಡಿ, ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ರಾ.ಹೆ. ವಿಭಾಗದ ಅಭಿಯಂತರರಿಗೆ ಸೂಚನೆ ನೀಡಿದರು. ಭೂ ಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದಾಗಿ ಕಾಮಗಾರಿಯನ್ನು ಕೈಗೊಳ್ಳಲು ಆಗುತ್ತಿಲ್ಲ ಎಂದರು.

ರಾ.ಹೆ. 169ರಲ್ಲಿ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾರ್ಯಕ್ಕೆ ನಿರ್ಮಾಣ ಮಾಡುತ್ತಿರುವ ಕಬ್ಬಿಣದ ಗರ್ಡರ್‌ಗಳ ಜೋಡಣೆ ಕಾರ್ಯವೂ ಮಂದಗತಿಯಲ್ಲಿ ಸಾಗಿದೆ. ಈ ಹಿಂದೆ ಡಿ. 25ರ ಒಳಗಾಗಿ ಅದನ್ನು ಅಳವಡಿಸುವುದಾಗಿ ಸಭೆಗೆ ತಿಳಿಸಲಾಗಿತ್ತು. ಆದರೆ, ಈ ಕಾರ್ಯವು ಒಪ್ಪಿಕೊಂಡ ವೇಳೆಯಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲದೇ ಇರುವುದು ಕಂಡು ಬರುತ್ತಿದೆ. ರಾ.ಹೆ. ಉಪವಿಭಾಗದ ಅಭಿಯಂತರರು ಹಾಗೂ ರೈಲ್ವೇ ಇಲಾಖೆಯ ಅಭಿಯಂತರರು ಒಬ್ಬರ ಮೇಲೊಬ್ಬರು ಹೇಳಿಕೊಂಡು ಹೋಗುತ್ತಿರುವುದು ಸರಿಯಲ್ಲ. ಕಾಮಗಾರಿಯ ಪ್ರಗತಿಯ ವೇಗವನ್ನು ಹೆಚ್ಚಿಸಲು ಎರಡೂ ಇಲಾಖೆಯ ಅಧಿಕಾರಿಗಳೂ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.

ಸಂತೆಕಟ್ಟೆ ವೆಹಿಕ್ಯುಲರ್‌ ಓವರ್‌ಪಾಸ್‌ ಕಾಮಗಾರಿಗಳನ್ನು ಮಾರ್ಚ್‌ ತಿಂಗಳ ಮುಂಚಿತವಾಗಿಯೇ ಸಂಪೂರ್ಣವಾಗಿ ಮುಗಿಸಬೇಕು. ರಾ.ಹೆ. ನಿರ್ವಹಣ ಕಾಮಗಾರಿಗಳನ್ನು ಸಹ ಆದ್ಯತೆಯ ಮೇಲೆ ಕೈಗೊಂಡು ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.

Advertisement

ಜಿಪಂ ಸಿಇಒ ಪ್ರತೀಕ್‌ ಬಾಯಲ್‌, ಎಸ್‌ಪಿ ಡಾ| ಅರುಣ್‌ ಕೆ., ಡಿಎಫ್‌ಒ ಗಣಪತಿ ಹಾಗೂ ಡಿಎಫ್‌ಒ (ವನ್ಯಜೀವಿ ವಿಭಾಗ) ಶಿವರಾಮ ಎಂ. ಬಾಬು, ಸಹಾಯಕ ಕಮೀಷನರ್‌ ಮಹೇಶ್ಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್‌ ಅಜ್ಮಿ, ಶೃಂಗೇರಿ-ಚಿಕ್ಕಮಗಳೂರು ರಾ.ಹೆ. ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್‌, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್‌ ಬಿ., ಗುತ್ತಿಗೆದಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next