Advertisement

ಟೀಕೆ ನಿರ್ಲಕ್ಷಿಸಿ ಗುರಿ ಸಾಧನೆಯೆಡೆಗೆ ಮುನ್ನುಗ್ಗಿ

06:00 AM Aug 28, 2018 | Team Udayavani |

ಉಡುಪಿ: ಸಾಧಿಸಬೇಕೆಂಬ ಛಲ, ಗುರಿ, ಸದುದ್ದೇಶದೊಂದಿಗೆ ಮುನ್ನಡೆಯುವಾಗಲೂ ಹಲವು ಟೀಕೆ, ಸಂಕಷ್ಟ ಸಹಜ. ವಿದ್ಯಾರ್ಥಿಗಳು ಅಡೆತಡೆ ಗಳನ್ನೆಲ್ಲ ಎದುರಿಸಿ ಮುನ್ನುಗ್ಗಿದರೆ ಯಶಸ್ಸು ಸಾಧ್ಯ ಎಂದು ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ್‌ ನಿಂಬರಗಿ ಹೇಳಿದರು.

Advertisement

ರವಿವಾರ ರಾಜಾಂಗಣದಲ್ಲಿ ನಡೆದ ವಿನಮ್ರ ಸಹಾಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ನಿಂಬರಗಿ ಅವರು, ತನ್ನ ವಿದ್ಯಾರ್ಥಿ ಜೀವನ, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಪರೀಕ್ಷೆ ಸಂದರ್ಭ ಎದುರಿಸಿದ ಸವಾಲುಗಳನ್ನು ವಿವರಿಸಿ ಅದನ್ನು ಎದುರಿಸಿದ ಬಗೆಯನ್ನು ವಿವರಿಸಿ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.

ಮಾತೃಭಾಷೆಯಲ್ಲಿ ಯಶಸ್ಸು
ವಿಜಯಪುರದ ಇಂಡಿ ತಾಲೂಕಿನ ಕುಗ್ರಾಮದಲ್ಲಿ ಜನಿಸಿ ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದೆ. ಅನಂತರ ಹಿರಿಯರೋರ್ವರ ಸೂಚನೆಯಂತೆ ಪಿಯುಸಿಗೆ ಸೇರ್ಪಡೆಯಾದೆ. ವಿಜ್ಞಾನ ವಿಷಯ ಭಾರೀ ಸವಾಲಾಯಿತು. ಆರಂಭ ದಲ್ಲಿ ಪೂರ್ಣ ವೈಫ‌ಲ್ಯ ಕಂಡೆ. ಆದರೆ ಎದೆಗುಂದದೆ ಪ್ರಯತ್ನ ಮುಂದುವರಿಸಿ ಸಫ‌ಲನಾದೆ. ಮುಂದೆ ಎಂಜಿನಿಯರಿಂಗ್‌ ಓದಿದೆ. ಬಳಿಕ ಉದ್ಯೋಗ ಮಾಡುವ ಬದಲು ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮುಂದಾದೆ. ಎರಡು ಬಾರಿ ವಿಫ‌ಲನಾದೆ. ಆಗ ಹಲವೆಡೆಗಳಿಂದ ಟೀಕೆಗಳು ಬಂದವು. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ನಾನು ಎಂಜಿನಿಯರಿಂಗ್‌ ಮುಗಿಸಿ ಉದ್ಯೋಗ ಪಡೆಯದೇ ಇದ್ದ ಬಗ್ಗೆಯೂ ಅನೇಕರು ಟೀಕಿಸಿದರು. ಆದಾಗ್ಯೂ ಪ್ರಯತ್ನ ನಿಲ್ಲಸಲಿಲ್ಲ. ಮಾತೃಭಾಷೆ ಕನ್ನಡದಲ್ಲಿದ್ದ ಹಿಡಿತ ಆಂಗ್ಲಭಾಷೆಯಲ್ಲಿ ಇಲ್ಲದ್ದರಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಗಳಿಕೆ ಸಾಧ್ಯವಾಗಲಿಲ್ಲ ಎಂಬುದು ಮನದಟ್ಟಾಯಿತು. ಮೂರನೇ ಬಾರಿ ಮತ್ತಷ್ಟು ಶ್ರಮ ಹಾಕಿ ಕನ್ನಡ ಮಾಧ್ಯಮದಲ್ಲಿ ಯುಪಿಎಸ್‌ಸಿ ಬರೆದೆ; ದೇಶಕ್ಕೆ 104ನೇ ರ್‍ಯಾಂಕ್‌ ಗಳಿಸಿದೆ. ನನ್ನ ಶ್ರಮಕ್ಕೆ ಪ್ರತಿಫ‌ಲ ಸಿಕ್ಕಿತು. ಟೀಕಿಸುವವರಿಗೆ ಉತ್ತರವೂ ಸಿಕ್ಕಿತು. ನನ್ನ ಉದ್ದೇಶ, ಗುರಿ ಸ್ಪಷ್ಟವಾಗಿದ್ದುದರಿಂದ ಇದು ಸಾಧ್ಯವಾಯಿತು.

ಕೆ. ಶಿವರಾಮ್‌ ಅವರನ್ನು ಹೊರತು ಪಡಿಸಿದರೆ ಕರ್ನಾಟಕದಿಂದ ಯಾರು ಕೂಡ ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಸಾಹಸಕ್ಕೆ ಹೋಗಿರಲಿಲ್ಲ. ನನ್ನ ಯಶಸ್ಸಿನ ಅನಂತರ ಈಗ ಪ್ರತಿವರ್ಷ ರಾಜ್ಯದ 3-4 ಮಂದಿ ಕನ್ನಡ
ದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾಗುತ್ತಿದ್ದಾರೆ. ಇದು ಕನ್ನಡ ಮಾಧ್ಯಮ ವಿದ್ಯಾಥಿಗಳಲ್ಲಿ ಹೊಸ ಆತ್ಮಸ್ಥೈರ್ಯ ಮೂಡುವಂತೆ ಮಾಡಿದೆ’ ಎಂದವರು ತಿಳಿಸಿದರು.

ವಿದ್ಯಾರ್ಥಿಗಳಿಗೆ ಎಸ್‌ಪಿ ಕಿವಿಮಾತು
-  ನಿಮ್ಮ ದೌರ್ಬಲ್ಯವೇ ನಿಮ್ಮ ಶಕ್ತಿ, ನಿಮ್ಮ ಶಕ್ತಿಯೇ ದೌರ್ಬಲ್ಯವಾಗಬಹುದು. ಹಟದಿಂದ ಒಳ್ಳೆಯ ಫ‌ಲಿತಾಂಶ ಕೂಡ ಸಿಗಬಹುದು. ಆದರೆ ಕೆಲವು ಬಾರಿ ಹಟದಿಂದ ಕೆಟ್ಟದು ಕೂಡ ಸಂಭವಿಸಬಹುದು. ಹಟ ಎಲ್ಲಿ ಹೇಗೆ ಇರಬೇಕೆಂಬ ವಿವೇಚನೆ ಬೇಕು.
–  ಟೀಕೆಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರಿ.
–  ಸಾಮಾಜಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ, ಎದುರಿಸಿ.
–  ಜಗತ್ತಿನಲ್ಲಿ ಬದಲಾವಣೆ ಮೊದಲು ನಿಮ್ಮಿಂದಲೇ ಆರಂಭವಾಗಲಿ. 
-  ಕೆಟ್ಟದ್ದು ಮಾರ್ಕೆಟ್‌ನಲ್ಲಿ ಬೇಗ ಸೇಲ್‌ ಆಗುತ್ತದೆೆ. ಹಾಗೆಯೇ ಟೀಕೆಗಳು ಹೆಚ್ಚು ಪ್ರಚಾರ ಪಡೆಯುತ್ತವೆ.
-  ನಿಮ್ಮ ಬದುಕು ಹೇಗೆ ಆರಂಭವಾಯಿತು ಮುಖ್ಯವಲ್ಲ, ಹೇಗೆ ಬೆಳೆದಿರಿ .ಅಂತಿಮವಾಗಿ ಏನಾದಿರಿ ಎಂಬುದೇ ಮುಖ್ಯ.
-  ಜೀವನದಲ್ಲಿ ಕಷ್ಟ ಅನುಭವಿಸದಿದ್ದರೆ ಸುಖವೆಂದರೆ ಏನೆಂದೇ ಗೊತ್ತಾಗದು.
-  ಮಾದಕ ವ್ಯಸನ ಸೇರಿದಂತೆ ದುಶ್ಚಟಗಳ ಬಗ್ಗೆ ಸದಾ ಜಾಗರೂಕರಾಗಿರಿ.
-  ಕಾನೂನು ಪಾಲನೆಯಲ್ಲಿ ನೀವೇ ಮೊದಲಿಗರಾಗಿರಿ. ಸಹಾಯ ಮನೋಭಾವ ಇರಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next