Advertisement

Udupi: ನಗರದ ಎಲ್ಲೆಡೆ ಖರೀದಿ ಭರಾಟೆ; ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಒಂದೇ ದಿನ ಬಾಕಿ

03:02 PM Oct 30, 2024 | Team Udayavani |

ಉಡುಪಿ: ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಒಂದೇ ದಿನ ಬಾಕಿಯಿರುವುದು. ಹಬ್ಬದ ಸಂಭ್ರಮಕ್ಕೆ ಎಲ್ಲೆಡೆ ತಯಾರಿ ಜೋರಾಗಿದೆ. ನಗರದಲ್ಲಿ ಹಬ್ಬಕ್ಕೆ ಪೂರಕವಾಗಿ ನಾನಾ ಬಗೆಯ ವಸ್ತುಗಳ ಮಾರಾಟ, ಖರೀದಿ ಭರಾಟೆ ಭರ್ಜರಿಯಾಗಿದೆ.
ನಗರದ ಮಾಲ್‌ಗ‌ಳಲ್ಲಿ ಮಾತ್ರವಲ್ಲದೇ, ಶಾಪಿಂಗ್‌ ಸೆಂಟರ್‌, ಚಿಕ್ಕ-ಪುಟ್ಟ ಮಳಿಗೆ, ಬೀದಿ ಬದಿ ಅಂಗಡಿಗಳಲ್ಲಿ ಹಬ್ಬದ ಶಾಪಿಂಗ್‌ ಮೇನಿಯಾ ಹರಡಿದೆ.

Advertisement

ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಶೈಲಿಯ ಗೂಡುದೀಪ ಗಳೊಂದಿಗೆ ನವೀನ ವಿನ್ಯಾಸದ ಬಣ್ಣಬಣ್ಣದ ಗೂಡುದೀಪ, ಮಣ್ಣಿನ ಹಣತೆಗಳು ಕಂಗೊಳಿಸುತ್ತಿದೆ. ಸ್ಥಳೀಯರಷ್ಟೆ ಅಲ್ಲದೇ ಅನ್ಯ ಜಿಲ್ಲೆಗಳ ವ್ಯಾಪಾರಿಗಳು ರಸ್ತೆ ಬದಿ ಹಣತೆ ಮಾರಾಟ ಮಾಡುತ್ತಿದ್ದಾರೆ. ಬಟ್ಟೆ, ಬಣ್ಣದ ಕಾಗದಗಳಿಂದ ಮಾಡಿದ ಗೂಡು ದೀಪಗಳು ಮಾರುಕಟ್ಟೆಯಲ್ಲಿವೆ. ಇವುಗಳ ಪೈಕಿ ಬಣ್ಣದ ಕಾಗದದ ಗೂಡುದೀಪಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಂಗಳವಾರ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ ದರ ಎಂದಿಗಿಂತ ತುಸು ಏರಿಕೆಯಾಗಿತ್ತು. ಬುಧವಾರ, ಗುರುವಾರ ಮತ್ತಷ್ಟೂ ಬೆಲೆ ಏರಿಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ಬಟ್ಟೆ , ಸಿಹಿ ತಿಂಡಿ ಖರೀದಿ
ಹಬ್ಬದ ಸಿಹಿ ಹೆಚ್ಚಿಸಲು ವಿವಿಧ ರುಚಿಯ ಸಿಹಿ ತಿಂಡಿಗಳು ಬೇಕರಿ ಅಂಗಡಿಗಳಲ್ಲಿ ಮಾರಾಟಕ್ಕಿಡಲಾಗಿದೆ. ಸಿಹಿತಿಂಡಿ ವ್ಯಾಪಾರ ಮಳಿಗೆ ಮತ್ತು ಜವಳಿ ಮಳಿಗೆಯಲ್ಲಿ ವ್ಯಾಪಾರ ಚಟುವಟಿಕೆ ಗರಿಗೆದರಿದೆ.

ಗ್ರಾಹಕರು ಮನೆ ಮತ್ತು ಹಿತೈಷಿಗಳಿಗೆ ವಿತರಿಸಲು, ಉಡುಗೊರೆಯ ಜತೆ ನೀಡಲು ಬಗೆಬಗೆ ಸಿಹಿತಿಂಡಿ ಮತ್ತು ಡ್ರೈಫ್ರುಟ್ಸ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಹೊಸ ಬಟ್ಟೆ ಖರೀದಿಯೂ ಜೋರಾಗಿದೆ.

Advertisement

ದರ ಏರಿದರೂ ಖರೀದಿ ಇಳಿದಿಲ್ಲ
ಬಂಗಾರದ ಬೆಲೆ ಏರಿದ್ದರೂ ಖರೀದಿ ಮಾತ್ರ ಕಡಿಮೆಯಾಗಿಲ್ಲ. ಇನ್ನು ಲಕ್ಷ್ಮೀ ಪೂಜಾ ಸಾಮಗ್ರಿಗಳು ಮಳಿಗೆ ತುಂಬಿಕೊಂಡಿದೆ. ಬೆಳ್ಳಿ-ಬಂಗಾರದ ಆಭರಣಗಳು ಕಾಲಿಟ್ಟಿವೆ. ಪ್ರತಿವರ್ಷದಂತೆ ಈ ವರ್ಷವೂ ಜುವೆಲರಿ ಶಾಪ್‌ಗ್ಳು ನಾನಾ ಬಗೆಯ ಕೊಡುಗೆಗಳನ್ನು ಪ್ರಕಟಿಸಿವೆ. ಇದರೊಂದಿಗೆ ಆಭರಣಗಳ ಸೆಟ್‌ಗಳ ಮಾರಾಟದಲ್ಲಿ ಹೆಚ್ಚಳ ಕಂಡಿದೆ ಎನ್ನುತ್ತಾರೆ ಆಭರಣ ಮಳಿಗೆಯ ಮಾರಾಟಗಾರರೊಬ್ಬರು.

ಗ್ರಾಮೀಣ ಕೃಷಿಕರಲ್ಲಿ ಸಂಭ್ರಮ ಜೋರು
ದೀಪಾವಳಿ ಹಬ್ಬಕ್ಕೆ ಈಗಾಗಲೇ ಮನೆಗಳಲ್ಲಿ ಶುಚಿತ್ವ ಕಾರ್ಯ ನಡೆದಿದೆ. ಕೃಷಿ ಸಲಕರಣೆ, ಗದ್ದೆ, ತೋಟ ಮತ್ತಿತರ ಕಡೆ ಪೂಜೆ, ಪೊಲಿ ಪೂಜೆ, ಗೋಪೂಜೆ, ಬಲೀಂದ್ರ ಕರೆಯುವುದು, ದೈವಗಳಿಗೆ ವಿಶೇಷ ಪೂಜೆ ನಡೆಸಲು ಸಿದ್ಧತೆ ನಡೆಯುತ್ತಿದೆ.

ರಂಗು ಹೆಚ್ಚಿಸುವ ಬಣ್ಣದ ಲೈಟಿಂಗ್ಸ್‌
ಆಫ್ಲೈನ್‌ನಲ್ಲಿ ಗೃಹಾಲಂಕಾರ ಹಾಗೂ ಎಲೆಕ್ಟ್ರಾನಿಕ್‌ ಐಟಂಗಳ ಮಾರಾಟ ಕೂಡ ಹೆಚ್ಚಾಗಿದೆ. ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಆಕರ್ಷಕವಾಗಿಸುವ ಬಗೆಬಗೆಯ ಲೈಟಿಂಗ್ಸ್‌ ಹಾಗೂ ಲ್ಯಾಂಟೆನರ್‌ಗಳ ಮಾರಾಟ ಹೆಚ್ಚಾಗಿದ್ದು, ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ನಗರದ ಬಸ್‌ ಸ್ಟಾಂಡ್‌ ಬಳಿಯ ಮಾರಾಟಗಾರರು.

Advertisement

Udayavani is now on Telegram. Click here to join our channel and stay updated with the latest news.

Next