Advertisement

Diwali holiday: ಮೆಜೆಸ್ಟಿಕ್‌ನಲ್ಲಿ ಜನವೋ ಜನ!

03:07 PM Oct 31, 2024 | Team Udayavani |

ಬೆಂಗಳೂರು: ದೀಪಾವಳಿ ಹಬ್ಬ, ಕರ್ನಾಟಕ ರಾಜ್ಯೋತ್ಸವ ಹಾಗೂ ವಾರಾಂತ್ಯ ಹಿನ್ನೆಲೆಯಲ್ಲಿ ಸರಣಿ ರಜೆಗಳ ಕಾರಣ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಮೆಜೆಸ್ಟಿಕ್‌ ಕಡೆಗೆ ದೌಡಾಯಿಸಿದರಿಂದ ಬುಧವಾರ ಮೆಜೆಸ್ಟಿಕ್‌ ಸುತ್ತ-ಮುತ್ತಲ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಯಿತು.

Advertisement

ಅ.31ನರಕ ಚತುರ್ದಶಿ, ನ.1 ರಂದು ಕನ್ನಡ ರಾಜ್ಯೋತ್ಸವ, ನ.2 ಬಲಿಪಾಡ್ಯ ಜತೆಗೆ ನ.3 ವಾರಾಂತ್ಯ ಭಾನುವಾರ ಇರುವ ಕಾರಣ ಸರ್ಕಾರಿ ನೌಕರರು, ಶಾಲಾ-ಕಾಲೇಜು ಮಕ್ಕಳು, ಕೆಲ ಖಾಸಗಿ ಸಂಸ್ಥೆ ಉದ್ಯೋಗಿಗಳಿಗೆ ಸತತ 4 ದಿನ ರಜೆ ಸಿಗಲಿವೆ. ಹಾಗಾಗಿ ಹಬ್ಬದ ಸಡಗರವನ್ನು ಕುಟುಂಬದೊಟ್ಟಿಗೆ ಕಳೆಯಲು ಅವಕಾಶ ಸಿಗುವ ಕಾರಣ ಜನರು ಮುಗಿಬಿದ್ದು ಕುಟುಂಬದೊಟ್ಟಿಗೆ ತಮ್ಮ ಊರುಗಳಿಗೆ ತೆರಳಿದರು.

ಸಂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಧಾವಿಸಿದರಿಂದ ಮೆಜೆಸ್ಟಿಕ್‌ನಲ್ಲಿ ಜನಸಂದಣಿ ಅಧಿಕವಾಗಿತ್ತು. ಅದರ ಪರಿಣಾಮ ಕೆಂಪೇಗೌಡ ರಸ್ತೆ, ಗೂಡ್‌ಶೆಡ್‌ ರಸ್ತೆ, ಓಕಳೀಪುರ ರಸ್ತೆ, ಖೋಡೆ ಸರ್ಕಲ್‌, ಆನಂದ್‌ರಾವ್‌ ವೃತ್ತ, ನೃಪತುಂಗ ರಸ್ತೆ, ರಾಜೀವ್‌ ಗಾಂಧಿ ವೃತ್ತ, ರೇಸ್‌ಕೋರ್ಸ್‌ ರಸ್ತೆ, ಕೆ.ಆರ್‌.ಮಾರುಕಟ್ಟೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಸಂಜೆಯಿಂದಲೇ ಭಾರೀ ವಾಹನ ದಟ್ಟಣೆ ಉಂಟಾಗಿದ್ದು, ತಡರಾತ್ರಿ 2 ಗಂಟೆವರೆಗೂ ಇತ್ತು. ಹೀಗಾಗಿ ಸಂಚಾರ ನಿರ್ವಹಣೆಗೆ ಸಂಚಾರ ಪೊಲೀಸರು ಹರಸಾಹಸ ಪಟ್ಟರು. ಮತ್ತೂಂದೆಡೆ ಸಂಜೆ ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದ ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಸಂಚಾರ ದಟ್ಟಣೆ ಬಿಸಿ ತಟ್ಟಿತು.

ಸಂಚಾರ ಪೊಲೀಸರ ಹರಸಾಹಸ: ನಗರದ ಬಹುತೇಕ ಕಡೆಗಳಲ್ಲಿ ಸಿಗ್ನಲ್‌ ಲೈಟ್‌ಗಳಿದ್ದರೂ, ಹೆಚ್ಚಿನ ವಾಹನಗಳ ಓಡಾಟ ಹಿನ್ನೆಲೆಯಲ್ಲಿ ಸಂಚಾರ ಪೊಲೀ ಸರೇ ರಸ್ತೆ ಮಧ್ಯೆ ನಿಂತೂ ದಟ್ಟಣೆ ನಿರ್ವಹಿಸಿದರು. ಮೆಜೆಸ್ಟಿಕ್‌, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ನವರಂಗ್‌, ರಾಜ್‌ಕುಮಾರ್‌ ರಸ್ತೆ, ಗೋವರ್ಧನ್‌ ಟಾಕೀಸ್‌ ಮುಂಭಾಗ, ಜಾಲಹಳ್ಳಿ ಕ್ರಾಸ್‌, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ಸ್ಯಾಟಲೈಟ್‌ ಬಸ್‌ ನಿಲ್ದಾಣ, ಕೆಂಗೇರಿ ಬಸ್‌ ನಿಲ್ದಾಣ, ಹೆಬ್ಟಾಳ ರಸ್ತೆ ಬಳಿ ಸೇರಿ ಬಹುತೇಕ ಪ್ರಮುಖ ಸಿಗ್ನಲ್‌ಗ‌ಳ ಬಳಿ ಸಂಚಾರ ಪೊಲೀಸರೇ ಖುದ್ದು ಕರ್ತವ್ಯ ನಿರ್ವಹಿಸಿದರು.

ಹೊಸೂರು ರಸ್ತೆ, ಮೈಸೂರು ರಸ್ತೆಯಲ್ಲಿ ಬುಧವಾರ ತಡರಾತ್ರಿವರೆಗೂ ಕಿ.ಮೀ.ಗಟ್ಟಲೆ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಹೈರಾಣಾದರು.

Advertisement

ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ: ಮತ್ತೂಂದೆಡೆ ಸರಣಿ ರಜೆಗಳಿರುವುದರಿಂದ ರಾಜಧಾನಿ ಬೆಂಗಳೂರಿ ನಿಂದ ಬುಧವಾರ ಸಂಜೆಯಿಂದಲೇ ಲಕ್ಷಾಂತರ ಜನರು ತಮ್ಮ ತಮ್ಮ ಊರುಗಳಿಗೆ ತೆರಳಿದರು. ಅದರಿಂದಾಗಿ ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಶಾಂತಿನಗರ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿ ನಗರದ ಪ್ರಮುಖ ಕಡೆಯ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಜನಜಂಗುಳಿ ನಿರ್ಮಾಣವಾಗಿತ್ತು. ಅದರಿಂದ ಕೆಲವು ಕಡೆಗಳಲ್ಲಿ ಬಸ್‌ಗಳಿಗಾಗಿ ಪ್ರಯಾಣಿಕರು ಪರದಾಡಿದರು.

ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ 2000 ಬಸ್‌

ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿಯಾಗಿ 2000 ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತ್ತೂಂದೆಡೆ ಬಿಎಂಟಿಸಿಯಿಂದಲೂ ಹೆಚ್ಚುವರಿಯಾಗಿ ಬೇರೆ ಊರುಗಳಿಗೆ ಹತ್ತಾರು ವಿಶೇಷ ಬಸ್‌ಗಳ ನಿಯೋಜಿಸಲಾಗಿತ್ತು.

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ ಬೀದರ್‌, ತಿರುಪತಿ, ಹೈದರಾಬಾದ್‌ ಸೇರಿ ಮುಂತಾದ ಸ್ಥಳಗಳಿಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಣೆ ನಡೆಸಿದವು.

ಇನ್ನು ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಹೆಚ್ಚುವರಿ ವಿಶೇಷ ಕೆಎಸ್‌ಆರ್‌ಟಿಸಿ/ಬಿಎಂಟಿಸಿ ಬಸ್‌ ಸೇವೆ ಒದಗಿಸಲಾಗಿತ್ತು. ಅಲ್ಲದೆ, ಶಾಂತಿನಗರದ ಬಿಎಂಟಿಸಿ ಬಸ್‌ ನಿಲ್ದಾಣ ದಿಂದ ತಮಿಳುನಾಡು, ಕೇರಳ, ಚೆನ್ನೈ, ಕೊಯಮ ತ್ತೂರು, ಕ್ಯಾಲಿಕಟ್‌ ಮುಂತಾದ ಸ್ಥಳಗಳಿಗೆ ಪ್ರತಿಷ್ಠಿತ ಬಸ್‌ಗಳಲ್ಲಿ ಮುಂಗಡ ಆಸನಗಳನ್ನು ಕಾಯ್ದಿರಿಸಿ ಪ್ರಯಾಣಿಕರು ಪ್ರಯಾಣಿಸಿದರು. ಕೆಲವರು ಆಸನಗಳು ಸಿಗದೆ ಅಧಿಕ ಹಣ ನೀಡಿ ಖಾಸಗಿ ಬಸ್‌ಗಳಲ್ಲಿಯೇ ತೆರಳುವ ಸನ್ನಿವೇಶ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next