Advertisement

Udupi: ಕತ್ತಲಲ್ಲಿ ಶೀಂಬ್ರಾ ಸೇತುವೆ: ಅಕ್ರಮಗಳ ಅಡ್ಡೆ!

07:02 PM Sep 24, 2024 | Team Udayavani |

ಮಣಿಪಾಲ: ಮಣಿಪಾಲ- ಶೀಂಬ್ರಾ-ಕೊಳಲಗಿರಿ ಸಂಪರ್ಕಿಸುವ, ಸ್ವರ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯಲ್ಲಿ ಸಮರ್ಪಕ ಬೀದಿದೀಪ ಇಲ್ಲದೆ ರಾತ್ರಿ ಸಂಚಾರ ಸಮಸ್ಯೆಯ ಜತೆಗೆ ರಸ್ತೆ ಮೇಲೆ ಅಕ್ರಮ ಕೂಟ ಸೇರಿ ಮದ್ಯ, ಮಾದಕ ವಸ್ತುಗಳ ಸೇವನೆ, ಅನವಶ್ಯಕ ಹರಟೆ ಇತ್ಯಾದಿ ನಡೆಯುತ್ತಿರುವುದು ಸವಾರರಲ್ಲಿ ಇನ್ನಷ್ಟು ಭಯ ಹುಟ್ಟಿಸುತ್ತಿದೆ.

Advertisement

ಜನರ ಬಹು ಬೇಡಿಕೆ ಮೇರೆಗೆ ಶೀಂಬ್ರಾ ಸೇತುವೆಯನ್ನು ಕೆಲ ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಬ್ರಹ್ಮಾವರ, ಕೊಕ್ಕರ್ಣೆ, ಮಂದಾರ್ತಿ, ಉಪ್ಪೂರು ಭಾಗದಿಂದ ಮಣಿಪಾಲಕ್ಕೆ ಆರೋಗ್ಯ, ಶಿಕ್ಷಣ, ಉದ್ಯೋಗ ನಿಮಿತ್ತ ಸಂಚರಿಸಲು ಈ ಪರ್ಯಾಯ ಮಾರ್ಗ ಸಾಕಷ್ಟು ಅನುಕೂಲಗಳಿಂದ ಕೂಡಿದೆ. ಆದರೆ ಸಂಜೆಯಾಗುತ್ತಿದ್ದಂತೆ ಇಲ್ಲಿ ಸಂಚರಿಸಲು ಇರುಸು ಮುರುಸು, ಆತಂಕದ ವಾತಾವರಣ ಇದೆ.

ಈ ಹಿಂದೆ ಇಲ್ಲಿ ಬೀದಿ ದೀಪ ಅಳವಡಿಸಲಾಗಿದ್ದು, ಸ್ವಲ್ಪ ಸಮಯ ಮಾತ್ರ ಕಾರ್ಯಾಚರಿಸಿದ್ದು, ಅನಂತರ ಕೈಕೊಟ್ಟಿದೆ. ಪೆರಂಪಳ್ಳಿ-ಬಿವಿಟಿಯಿಂದ ಸೇತುವೆಯವರೆಗೂ ಸರಿಯಾಗಿ ಬೀದಿದೀಪದ ವ್ಯವಸ್ಥೆ ಇಲ್ಲ. ಸಾಕಷ್ಟು ಮಂದಿ ರಾತ್ರಿ ಪಾಳಿ ಕೆಲಸ ಮುಗಿಸಿ ಈ ರಸ್ತೆಯಲ್ಲಿ ಓಡಾಡುತ್ತಾರೆ.

ಬೀದಿದೀಪ ಸರಿಯಾಗಿ ಕಾರ್ಯನಿರ್ವಹಿಸದೇ ಭಯದಿಂದಲೇ ರಾತ್ರಿ ಸಂಚರಿಸಬೇಕು ಎಂದು ವಾಹನ ಸವಾರರ ಅಭಿಪ್ರಾಯವಾಗಿದೆ. ಬೀದಿ ದೀಪ ಸರಿಪಡಿಸಿದರೂ ಯಾರೋ ಬೇಕಂತಲೆ ವಯರ್‌ನ್ನು ತುಂಡರಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಕೆಲವರು ವಾರಾಂತ್ಯ ಸಂದರ್ಭ ಕತ್ತಲಿನಲ್ಲಿ ಸೇತುವೆ ಮೇಲೆ ಪಾರ್ಟಿ ಮಾಡುವುದು, ಕಾರಿನಲ್ಲಿ ಡಿಜೆ ಹಾಕಿ ನೃತ್ಯ ಮಾಡುವುದು ಮಾಡುತ್ತಾರೆ. ಇದೆಲ್ಲದಕ್ಕೂ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪೊಲೀಸ್‌ ಇಲಾಖೆ ನಿತ್ಯ ಗಸ್ತು ಕಾರ್ಯಚರಣೆ ನಡೆಸುತ್ತಿದ್ದಾರೆ. ಹಲವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಪೊಲೀಸರು ಹೋದ ಬಳಿಕ ಮತ್ತೆ ಮೋಜಿನಾಟ ಆರಂಭವಾಗುತ್ತದೆ ಎಂಬುದು ಸ್ಥಳೀಯರ ದೂರು. ಪೊಲೀಸ್‌ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಜರಗಿಸಬೇಕು ಎಂಬುದು ನಾಗರಿಕರ ಕೋರಿಕೆಯಾಗಿದೆ.

Advertisement

ಏನೆಲ್ಲ ವ್ಯವಸ್ಥೆಗಳು ಸುಧಾರಣೆಯಾಗಬೇಕು?

  • ಸೇತುವೆ ಮೇಲಿರುವ ಬೀದಿದೀಪದ ವ್ಯವಸ್ಥೆ ಸರಿಪಡಿಸಬೇಕು
  • ಸೇತುವೆ ಮೇಲೆ ಅಕ್ರಮ ಕೂಟಗಳು ನಡೆಯದಂತೆ ಸಿಸಿಟಿವಿ ಕೆಮರಾ ಅಳವಡಿಕೆ
  • ಪೊಲೀಸ್‌ ಬೀಟ್‌ ವ್ಯವಸ್ಥೆ ಇನ್ನಷ್ಟು ಬಿಗಿಯಾಗಬೇಕು, ತಡರಾತ್ರಿಯೂ ನಿಗಾವಿಡಬೇಕು.
  • ಸಾರ್ವಜನಿಕವಾಗಿ ಮದ್ಯ ಸೇವಿಸುವರಿಗೆ ಕೇಸು ದಾಖಲಿಸಬೇಕು.
  • ಸೇತುವೆ ಸಂಪರ್ಕಿಸುವ ರಸ್ತೆಯ ಎರಡು ಬದಿಗಳಲ್ಲಿ ಬೆಳೆದ ಹುಲ್ಲು, ಗಿಡಗಂಟಿಗಳ ತೆರವುಗೊಳಿಸುವುದು.

ಬೀದಿದೀಪ ವ್ಯವಸ್ಥೆ ಸರಿಪಡಿಸಲು ಸೂಚನೆ
ಶೀಂಬ್ರಾ ಸೇತುವೆ ಬೀದಿದೀಪ ವ್ಯವಸ್ಥೆ ಸರಿಪಡಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಸಿಸಿಟಿವಿ ಅಳವಡಿಕೆ ಮತ್ತು ಅಕ್ರಮಗಳಿಗೆ ಕಡಿವಾಣವಾಕುವ ಸಂಬಂಧ ಸೂಕ್ತ ಕ್ರಮವಹಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
– ಯಶ್‌ಪಾಲ್‌ ಸುವರ್ಣ, ಶಾಸಕರು

ಕಾನೂನು ಕ್ರಮದ ಎಚ್ಚರಿಕೆ
ಶೀಂಬ್ರಾ ಸೇತುವೆ ಪರಿಸರದಲ್ಲಿ ಇಲಾಖೆಯಿಂದ ನಿತ್ಯ ಗಸ್ತು ಸಿಬಂದಿ ಪರಿಶೀಲನೆ ನಡೆಸುತ್ತಾರೆ. ರಾತ್ರಿ ವೇಳೆ ಸೇತುವೆ ಮೇಲೆ ಸಮಯ ಕಳಿಯುವ ಕೆಲವರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದೇವೆ. ಸಾರ್ವಜನಿಕರ ಓಡಾಟಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನಿಗಾವಹಿಸಲಾಗುತ್ತಿದೆ. ಬೀಟ್‌ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಿ, ಸೂಕ್ತ ಕಾನೂನು ಕ್ರಮ ಜರಗಿಸುತ್ತೇವೆ.
-ಟಿ. ದೇವರಾಜ್‌, ಪೊಲೀಸ್‌ ನಿರೀಕ್ಷಕರು, ಮಣಿಪಾಲ

ಬೀದಿದೀಪ, ಸಿಸಿಟಿವಿ ಅಳವಡಿಸಿ
ರಾತ್ರಿ ಬೀದಿದೀಪ ವ್ಯವಸ್ಥೆ ಇಲ್ಲದೆ ಶೀಂಬ್ರಾ ಸೇತುವೆ ಮೇಲೆ ಅಕ್ರಮ ಕೂಟ ಹೆಚ್ಚುತ್ತಿದೆ. ಜನರು ಓಡಾಡಲು ಭಯದ ವಾತಾವರಣ ಇದೆ. ಬೀದಿದೀಪ ವ್ಯವಸ್ಥೆ ಸರಿಪಡಿಸಿದಲ್ಲಿ ಅಕ್ರಮಕ್ಕೆ ಕಡಿವಾಣ ಬೀಳಲಿದೆ. ಜತೆಗೆ ಸಿಸಿಟಿವಿ ಕೆಮರಾ ಅಳವಡಿಸಬೇಕು. ಪೊಲೀಸ್‌ ಇಲಾಖೆ ಗಸ್ತು ಇದ್ದು, ಪೊಲೀಸರು ಹೋದ ಅನಂತರ ಮತ್ತೆ ಅಕ್ರಮ ಕೂಟ ಸೇರಿ ತಡರಾತ್ರಿವರೆಗೂ ಸೇತುವೆ ಮೇಲೆ ಮದ್ಯ ಸೇವಿಸುತ್ತಾರೆ.
– ಸತೀಶ್‌ ಪೂಜಾರಿ ಕೀಳಂಜೆ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next