Advertisement

Udupi Santhekatte Road: ನಾಲ್ಕಲ್ಲ, ಕನಿಷ್ಠ ಒಂದು ರಸ್ತೆಯನ್ನಾದರೂ ಕೊಡಿ

12:53 AM Sep 23, 2024 | Team Udayavani |

ಸಂತೆಕಟ್ಟೆಯಲ್ಲಿನ ರಸ್ತೆಯ ಸ್ಥಿತಿ ಹೇಗಿದೆ ಎಂದರೆ ಯಾರೂ ಇಲ್ಲಿ ನಿಶ್ಚಿಂತೆಯಿಂದ ಸಾಗುವಂತೆಯೇ ಇಲ್ಲ. ಎಲ್ಲರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ನಿತ್ಯವೂ ಶಾಪ ಹಾಕಿಕೊಂಡೇ ಸಾಗಬೇಕಿದೆ. ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ಇದರ ಬಗ್ಗೆ ಯಾಕಿಷ್ಟು ಅಸಡ್ಡೆ ಎಂಬುದಂತೂ ಯಾರಿಗೂ ಗೊತ್ತಾಗುತ್ತಿಲ್ಲ.

Advertisement

ಉಡುಪಿ: ನಾಲ್ಕು ರಸ್ತೆ ಬೇಡ, ಕನಿಷ್ಠ ದ್ವಿಮುಖವಾಗಿ ವಾಹನಗಳನ್ನು ಸಂಚರಿಸುವಂತೆ ಒಂದು ರಸ್ತೆಯನ್ನಾದರೂ ಸಂಚಾರ ಯೋಗ್ಯವಾಗಿರುವಂತೆ ಮಾಡಿ ಕೊಡಿ!

ಹೀಗೆ ಕೇಳುತ್ತಿರುವುದು ಸಂಪೂರ್ಣ ಹದಗೆಟ್ಟು ನಡೆದು ಹೋಗಲೂ ಅಯೋಗ್ಯವೆನಿಸಿರುವ ಸಂತೆಕಟ್ಟೆಯ ಹೆದ್ದಾರಿಯಲ್ಲಿ ನಿತ್ಯವೂ ಕಷ್ಟಪಟ್ಟು ಸಂಚರಿಸುತ್ತಿರುವ ವಾಹನ ಸವಾರರು. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಂಸದರು, ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೂರನೇ ಬೃಹತ್‌ ವೈಫಲ್ಯಕ್ಕೆ ಇದೊಂದು ಉದಾಹರಣೆ.

ಈ ವೈಫಲ್ಯಕ್ಕೆ ಮಾಜಿ ಸಂಸದರು, ಸಚಿವರು, ಮಾಜಿ ಶಾಸಕರ ಕೊಡುಗೆಯೂ ಬಹಳಷ್ಟಿದೆ. ಐದಾರು ವರ್ಷ ಉಡುಪಿ ಮಣಿಪಾಲ ಮುಖ್ಯ ರಸ್ತೆಯಲ್ಲಿ ಬೀದಿ ದೀಪಗಳೇ ಇಲ್ಲ. ಕತ್ತಲೆಯಲ್ಲೇ ಕಳೆದದ್ದು. ಇದು ಮೊದಲ ವೈಫಲ್ಯ. ಇಂದ್ರಾಳಿ ಸೇತುವೆಯ ಕಾಮಗಾರಿ ಇನ್ನೂ ಪ್ರಗತಿಯಲ್ಲೇ ಇದೆ. ಇದಕ್ಕೂ ಹಲವು ವರ್ಷಗಳು ಸಂದಿವೆ. ಇಂಥದ್ದೇ ಮತ್ತೂಂದು ವೈಫಲ್ಯ ಸಂತೆಕಟ್ಟೆಯ ರಸ್ತೆಯ ಸ್ಥಿತಿ.

ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತದ ಅಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳಲ್ಲಿ ಎಷ್ಟು ಬಾರಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎಂಬ ಬೇಸರ ನಾಗರಿಕರದ್ದು. ಜನರು ಆಗ್ರಹಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸುವ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಪ್ರಾಧಿಕಾರದ ಅಧಿಕಾರಿಗಳು ಬಳಿಕ ಎಲ್ಲಿ ಕಾಣೆಯಾಗುತ್ತಾರೋ ಗೊತ್ತಿಲ್ಲ. ಸಮಸ್ಯೆ ಬಗೆಹರಿಯುವುದೇ ಇಲ್ಲ ಎಂಬುದು ಹಲವರ ದೂರು. ಉದಯವಾಣಿ ಪ್ರತಿನಿಧಿ ಇಡೀ ರಸ್ತೆಯ ಅವ್ಯವಸ್ಥೆ ಬಗ್ಗೆ ಸುದೀರ್ಘ‌ ಹೊತ್ತು ಕಂಡು ಜನರ ಸಂಕಷ್ಟವನ್ನು ಪಟ್ಟಿ ಮಾಡಲಾಗಿದೆ. ನಿತ್ಯವೂ ಅನುಭವಿಸುವ ಸಂಕಷ್ಟವನ್ನು ಹಲವರು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

Advertisement

ನೀವು ಹೇಗೆ ಚಲಾಯಿಸಿದರೂ ಸಂಕಷ್ಟವೇ
ಸಂತೆಕಟ್ಟೆಯಲ್ಲಿ ವಾಹನ ಚಲಾಯಿಸುವುದೇ ಈಗ ದೊಡ್ಡ ಸವಾಲು. ಬಹುತೇಕ ಒಂದೂವರೆ ವರ್ಷದಿಂದ ಈ ಸಮಸ್ಯೆ ಇದ್ದೇ ಇದೆ. ಪತ್ರಿಕೆಯಲ್ಲಿ ಏನಾದರೂ ಬಂದರೆ ಒಂದಿಷ್ಟು ಜಲ್ಲಿಕಲ್ಲು ಮತ್ತು ಕಲ್ಲಿನ ಹುಡಿಯನ್ನು ತಂದು ಸುರಿದು ಗುಂಡಿ ತುಂಬಿಸಲಾಗುತ್ತದೆ. ಎರಡು ದಿನಗಳಲ್ಲಿ ಹುಡಿಯೆಲ್ಲ ಹಾರಿ ಹೋಗಿ, ಜಲ್ಲಿಯೆಲ್ಲ ಮೇಲೆ ಬಂದು ಗುಂಡಿ ಮತ್ತಷ್ಟು ದೊಡ್ಡದಾಗಿ ಬಾಯ್ದೆರೆಯುತ್ತದೆ. ಮತ್ತೆ ಜನರಿಗೆ ಓಡಾಟದ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹೇಗೆ ಚಲಾಯಿಸಿ
ದರೂ ಗುಂಡಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಬಹುತೇಕ ವಾಹನ ಸವಾರರ ಅಭಿಪ್ರಾಯ.

ಆ್ಯಂಬುಲೆನ್ಸ್‌ಗಳ ಕಥೆ ಹೇಗಿರಬಹುದು?
ಈ ಸಂಕಷ್ಟ ಹಲವರಿಗೆ ಬಂದಿರಲಿಕ್ಕೆ ಸಾಧ್ಯವಿಲ್ಲ. ಆಂಬುಲೆನ್ಸ್‌ ನ ಸವಾರರು ವಾಹನದಲ್ಲಿ ಜೀವನ್ಮರಣದ ಮಧ್ಯೆ ಇರುವ ಜೀವವೊಂದನ್ನು ಇಟ್ಟುಕೊಂಡು ಜೀವ ಉಳಿಸಬೇಕೆಂಬ ಛಲದಿಂದ ಆಸ್ಪತ್ರೆಯ ಬಾಗಿಲು ಬಡಿಯುವ ಅವಸರದಲ್ಲಿರುತ್ತಾರೆ. 100ರಿಂದ 120 ಕಿ.ಮೀ. ವೇಗ ಸಾಮಾನ್ಯ. ಆ ವೇಗದಲ್ಲಿ ಈ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಇಬ್ಬರ ಜೀವಕ್ಕೂ ಅಪಾಯ.

ಜೀವ ಉಳಿಸುವಲ್ಲಿ ಪ್ರತಿ ಕ್ಷಣವೂ ಅಮೂಲ್ಯವಾಗಿರುವಾಗ ದೂರದಿಂದ ಉಳಿಸಿಕೊಂಡು ಬಂದ ಸಮಯವನ್ನು ಈ ರಸ್ತೆಯಲ್ಲಿ ಕನಿಷ್ಠ 20 ನಿಮಿಷಗಳನ್ನು ಕಳೆದು ಬಿಟ್ಟರೆ ಹೇಗಾಗಬಹುದು? ಏನೂ ಮಾಡುವಂತಿಲ್ಲ ಅನಿವಾರ್ಯವಾಗಿ 120 ಕಿ.ಮೀ. ವೇಗದ ತುರ್ತು ವಾಹನವೂ ಇಲ್ಲಿ ಮಾತ್ರ 10 ಕಿ.ಮೀ. ವೇಗದಲ್ಲೇ ಸಾಗಬೇಕು. ಅದರಲ್ಲೂ ಮಣಿಪಾಲ ಮತ್ತು ಜಿಲ್ಲಾಸ್ಪತ್ರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಬಹು ಊರುಗಳಿಂದ ಹಲವಾರು ಆ್ಯಂಬುಲೆನ್ಸ್‌ಗಳು ರೋಗಿಗಳನ್ನು ನಿತ್ಯವೂ ಕರೆ ತರುತ್ತವೆ. ಇವೆಲ್ಲವೂ ಆಡಳಿತದವರ ಗಮನದಲ್ಲಿ ಇಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.

ಜಿಲ್ಲಾಡಳಿತ, ಸಂಸದರೂ ಸೇರಿದಂತೆ ಜನಪ್ರತಿ ನಿಧಿಗಳು ಜನರ ಸಂಕಷ್ಟವನ್ನು ಸರಿಯಾಗಿ ಮನದಟ್ಟು ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳನ್ನು ಪ್ರಶ್ನಿಸಿದರೆ, ಅವರು ಗುತ್ತಿಗೆ ಪಡೆದ ಸಂಸ್ಥೆಯವ ರಿಗೆ ಚುರುಕು ಮುಟ್ಟಿಸುತ್ತಾರೆ. ಆದರೆ ಚುರುಕು ಮುಟ್ಟಿಸಬೇಕಾದವರು ಅಧಿಕಾರಿಗಳ ಹಾಗೂ ಗುತ್ತಿಗೆ ಸಂಸ್ಥೆಯವರ ನೆವಗಳನ್ನು ಕೇಳಿ ಸುಮ್ಮನಾಗುತ್ತಿರುವುದೇ ಈ ಸಮಸ್ಯೆಗೆ ಕಾರಣ ಎಂಬುದು ಸಾರ್ವಜನಿಕರ ಆರೋಪ. ಈಗಲಾದರೂ ಜಿಲ್ಲಾಡಳಿತ, ಸಂಸದರು, ಶಾಸಕರು ಇದರತ್ತ ಗಮನಹರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸುವ್ಯವಸ್ಥೆ ಕಲ್ಪಿಸುವಂತೆ ಗುತ್ತಿಗೆ ಸಂಸ್ಥೆಯವರಿಗೆ ತಾಕೀತು ಮಾಡಬೇಕು ಎಂಬುದು ಜನಾಗ್ರಹ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next