ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಡಿಡಿಪಿಐ ಕಚೇರಿಯ ಉದ್ಯೋಗಿಯೊಬ್ಬರನ್ನು ಉಡುಪಿಯ ಸಖೀ ಸೆಂಟರ್‌ಗೆ ದಾಖಲಿಸಲಾಗಿದೆ.
ಬೆಳಗಾವಿಯ ಡಿಡಿಪಿಐ ಕಚೇರಿಯ ಮನೂರಿನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದ ಬಿಜಾಪುರ ಮೂಲದ ವಜ್ರಶ್ವರಿ ಅಣ್ಣಪ್ಪ ಅಳಕುಂಟೆ (54) ಅವರು ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನ. 6ರಂದು ರಾತ್ರಿ ವೇಳೆ ಅಸಹಾಯಕ ಸ್ಥಿತಿಯಲ್ಲಿದ್ದರು.
ಸಾರ್ವಜನಿಕರ ಮಾಹಿತಿಯ ಮೇರೆಗೆ ಬ್ರಹ್ಮಾವರ ಠಾಣೆಯ ಸಹಕಾರದಲ್ಲಿ ರಕ್ಷಿಸಿ ಸುರಕ್ಷಿತ ಪಾಲನೆಗೆ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ದಾಖಲಿಸಲಾಯಿತು.
ನ. 8ರಂದು ಮಹಿಳೆಯ ಆರೋಗ್ಯ ಸ್ಥಿತಿ ಏರುಪೇರಾದ ಕಾರಣ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಯಿತು. ಅಲ್ಲಿನ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು.
ಸಖಿ ಕೇಂದ್ರದ ಮೂಲಕ ಆಕೆ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ಮಹಿಳೆಯ ಬಗ್ಗೆ ಮಾಹಿತಿ ಪಡೆದು ಆಕೆಯ ಕುಟುಂಬಿಕರನ್ನು ಪತ್ತೆ ಹಚ್ಚಲಾಯಿತು. ಮಹಿಳೆಯ ಪೋಷಕರು ಉಡುಪಿಗೆ ಆಗಮಿಸಿ, ಕಾನೂನು ಪ್ರಕ್ರಿಯೆ ನಡೆಸಿ ಮಹಿಳೆಯನ್ನು ನ. 11ರಂದು ಬಿಜಾಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿಯವರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.