Advertisement

ಉಡುಪಿ: ಸಿಡಿಲು ಸಹಿತ ಮಳೆ; ವಿವಿಧೆಡೆ ಕೃಷಿ ಚಟುವಟಿಕೆ ಆರಂಭ

11:23 PM Jun 01, 2020 | Sriram |

ಉಡುಪಿ: ಜಿಲ್ಲೆಯ ವಿವಿಧೆಡೆ ಮೇ 31ರಂದು ರಾತ್ರಿ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಮಳೆಗೆ ಮನೆಗಳಿಗೆ ಹಾನಿ ಯಾಗಿದೆ. ಜಾನುವಾರುಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಅಪಾರ ನಷ್ಟ ಸಂಭವಿಸಿದೆ.

Advertisement

ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ನಿವಾಸಿ ಸಂತೋಷ ಶೆಟ್ಟಿ ಅವರ ಹಟ್ಟಿಯಲ್ಲಿರುವ ಜಾನುವಾರುಗಳಿಗೆ ಸಿಡಿಲು ಬಡಿದು 2 ಜಾನುವಾರು, 1 ಕರು ಸಾವನ್ನಪ್ಪಿವೆ. ಸುಮಾರು 1 ಲಕ್ಷ ರೂ. ನಷ್ಟ ಉಂಟಾಗಿದೆ. ಬ್ರಹ್ಮಾವರ ತಾಲೂಕಿನ ಬಾಳುದ್ರು ನಿವಾಸಿ ಅಮಾಣಿ ಪೂಜಾರ್ತಿ ಮನೆಗೆ ಸಿಡಿಲು ಬಡಿದು ಅಂದಾಜು 30 ಸಾವಿರ ರೂ. ನಷ್ಟ ಉಂಟಾಗಿದೆ.

ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳ ವಿವಿಧೆಡೆ ಗುಡುಗು, ಮಿಂಚು ಮಳೆಯಾಗಿದ್ದು ಕೃಷಿ ತೋಟಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಸೋಮವಾರ ಬೆಳಗ್ಗೆ 8.30ಕ್ಕೆ ಹಿಂದಿನ 24 ತಾಸುಗಳಲ್ಲಿ ಉಡುಪಿಯಲ್ಲಿ 7.1 ಮಿ. ಮೀ, ಕುಂದಾಪುರ 74.7 ಮಿ. ಮೀ., ಕಾರ್ಕಳ 38.5 ಮಿ.ಮೀ ಮಳೆಯಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 59.2 ಮಿ.ಮೀ. ಮಳೆ ಸುರಿದಿದೆ.

ಜೂ. 1ರಂದು ಬೆಳಗ್ಗೆ ಹೊತ್ತು ಉಡುಪಿ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ.

ಕೊಲ್ಲೂರು: ವರ್ಷಧಾರೆ
ಕೊಲ್ಲೂರು: ಕೊಲ್ಲೂರು ಪರಿಸರದಲ್ಲಿ ರವಿವಾರ ಹಾಗೂ ಸೋಮವಾರ ಭಾರೀ ಮಳೆ ಸುರಿಯಿತು. ಕೊಲ್ಲೂರು, ಜಡ್ಕಲ್‌, ಮುದೂರು, ಸೆಳ್ಕೋಡು, ಇಡೂರು, ಹೊಸೂರು, ವಂಡ್ಸೆ, ಚಿತ್ತೂರು ಪರಿಸರದಲ್ಲಿ ನಿರಂತರವಾಗಿ ಮಳೆ ಸುರಿದಿದ್ದು, ಕೃಷಿಕರ ಮೊಗದಲ್ಲಿ ಸಂತಸ ಅರಳಿದೆ. ನೀರಿನ ಕೊರತೆಯಿಂದ ಬಳಲುತ್ತಿದ್ದ ಇಲ್ಲಿನ ಕೃಷಿಕರಲ್ಲಿ ಮಳೆಯು ಆಶಾಭಾವನೆ ಹೆಚ್ಚಿಸಿದೆ. ವಿವಿಧ ರಾಜ್ಯಗಳಲ್ಲಿ ಉದ್ಯೋಗದಲ್ಲಿದ್ದ ಅನೇಕ ಮಂದಿ ಕೋವಿಡ್‌- 19ರಿಂದಾಗಿ ಮನೆಗೆ ಮರಳಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅನುಭವಿ ಕೃಷಿಕರ ನೆರವಿನಿಂದ ನಾಟಿಯ ಪೂರ್ವ ತಯಾರಿಯಲ್ಲಿದ್ದಾರೆ.

Advertisement

ಕೃಷಿ ಚಟುವಟಿಕೆ ಚುರುಕು
ಕೋಟೇಶ್ವರ: ಕೋಟೇಶ್ವರ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ವಕ್ವಾಡಿ, ಬೀಜಾಡಿ, ಗೋಪಾಡಿ, ಕಾಳಾವರ, ಸಹಿತ ಈ ಭಾಗದ ಅನೇಕ ಕಡೆಗಳಲ್ಲಿ ಮಳೆಯಾಗಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಗೋಪಾಡಿ ಗ್ರಾ.ಪಂ. ವ್ಯಾಪ್ತಿಯ ಅನೇಕ ಕಡೆಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಕೊರತೆಗೆ ಪರಿಹಾರ ದೊರೆತಂತಾಗಿದೆ. ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಹಾನಿಯಾದ ಘಟನೆ ಬಗ್ಗೆ ವರದಿಯಾಗಿಲ್ಲ.

ಕುಂದಾಪುರದಲ್ಲೂ
ಕುಂದಾಪುರ: ರವಿವಾರ ರಾತ್ರಿ, ಸೋಮವಾರ ಕುಂದಾಪುರ, ಬೈಂದೂರು ತಾಲೂಕಿನ ವಿವಿಧೆಡೆ ಮಳೆಯಾಗಿದೆ. ಆಲೂರಿ ನಲ್ಲಿ 112, ನಾಡದಲ್ಲಿ 62, ನಾವುಂದದಲ್ಲಿ 41, ಕಾಳಾವರದಲ್ಲಿ 51, ಶಂಕರನಾರಾಯಣದಲ್ಲಿ 135 ಮಿ.ಮೀ. ಮಳೆಯಾಗಿದೆ. ಕುಂದಾಪುರ ನಗರದಲ್ಲೂ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next