Advertisement
ಜಿಲ್ಲೆಯ 7 ತಾಲೂಕಿನಲ್ಲಿ ಎರಡು ತಿಂಗಳಲ್ಲಿ ಗಾಳಿ ಮಳೆಯಿಂದ 38 ಮನೆ ಸಂಪೂರ್ಣ ಹಾನಿಯಾಗಿದ್ದು, 796 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪೂರ್ಣ ಹಾನಿಯಾದ ಅಥವಾ ಭಾಗಶಃ ಹಾನಿಯಾದ ಮನೆಗಳ ವರದಿಯನ್ನು ಸ್ಥಳೀಯ ಪಂಚಾಯತಿ, ತಹಶೀಲ್ದಾರ್ ಮೂಲಕ ರಾಜ್ಯ ಕಚೇರಿ ತಲುಪಿದ್ದರೂ ಪರಿಹಾರ ಇನ್ನೂ ಬಂದಿಲ್ಲ. ಗುಡ್ಡ ಕುಸಿತ, ಸಿಡಿಲು ಬಿಡಿದು 3 ಜೀವ ಹಾನಿಯಾಗಿದ್ದು, ಪ್ರತಿ ಕುಟುಂಬಕ್ಕೂ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. 5 ಜಾನುವಾರು ಜೀವಹಾನಿಯಾಗಿದ್ದು, ಒಟ್ಟಾರೆ 1.55 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ.
ರಾಜ್ಯ ಹೆದ್ದಾರಿ, ನಗರ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳು ಸೇರಿ 1,457.36 ಕಿ.ಮೀ. ರಸ್ತೆಗಳು ಜಿಲ್ಲೆಯಲ್ಲಿ ಹಾಳಾಗಿದೆ. ಇದರಿಂದಲೇ ಸುಮಾರು 171.62 ಕೋ.ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಿಂಡಿ ಅಣೆಕಟ್ಟು, ಸೇತುವೆ, ಮೋರಿ ಇತ್ಯಾದಿ ಸೇರಿ 132 ಹಾಳಾಗಿದ್ದು 53.25 ಕೋ.ರೂ. ನಷ್ಟವಾಗಿದೆ. 4,125 ವಿದ್ಯುತ್ ಕಂಬ, 2 ಟ್ರಾನ್ಸ್ಫಾರ್ಮರ್, 72.35 ಕಿ.ಮೀ. ವಿದ್ಯುತ್ ಲೇನ್ ಹಾಳಾಗಿ ಸುಮಾರು 7 ಕೋ.ರೂ. ನಷ್ಟವಾಗಿದೆ. ಪ್ರಾಥಮಿಕ ಶಾಲೆ, ಸರಕಾರಿ ಕಟ್ಟಡ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕಟ್ಟಡ ಸೇರಿ 116 ಕಟ್ಟಡಕ್ಕೆ ಹಾನಿಯಾಗಿದ್ದು, 2.16 ಕೋ.ರೂ. ನಷ್ಟ ಅಂದಾಜಿಸಲಾಗಿದೆ.
Related Articles
ಮಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿ ಸಂಪೂರ್ಣ ದಾಖಲೆ ಆಧಾರದಲ್ಲಿ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದೇವೆ. ಸರಕಾರದಿಂದ ಅನುದಾನವನ್ನು ಕೋರಲಾಗಿದೆ. ವಿವಿಧ ಇಲಾಖೆಯಿಂದ ಮಾಹಿತಿ ಪಡೆದು, ಸಮೀಕರಿಸಿ ಸಮಗ್ರ ವರದಿ ಸಿದ್ಧಪಡಿಸಿ ಕಳುಹಿಸಿದ್ದೇವೆ. ಅಲ್ಲದೆ ಆಯಾ ದಿನದ ವರದಿಯನ್ನು ನೀಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Advertisement
ಕೃಷಿ, ತೋಟಗಾರಿಕೆ ಬೆಳೆ ಹಾನಿಮುಂಗಾರು ಅವಧಿಯಲ್ಲಿ ಜಿಲ್ಲೆಯ ಭತ್ತವೇ ಪ್ರಧಾನ ಬೆಳೆ ಆಗಿರುವುದರಿಂದ ಎಲ್ಲ ತಾಲೂಕುಗಳಲ್ಲೂ ಭತ್ತದ ಬೆಳೆಗೆ ಹಾನಿಯಾಗಿದೆ. ಕುಂದಾಪುರದಲ್ಲಿ 155 ಹೆಕ್ಟೇರ್, ಬೈಂದೂರಿನಲ್ಲಿ 100 ಹೆ., ಬ್ರಹ್ಮಾವರದಲ್ಲಿ 171 ಹೆ., ಉಡುಪಿಯಲ್ಲಿ 47 ಹೆ., ಕಾರ್ಕಳದಲ್ಲಿ 10 ಹೆ., ಕಾಪುವಿನದಲ್ಲಿ 18 ಹೆ. ಹಾಗೂ ಹೆಬ್ರಿಯಲ್ಲಿ 14 ಹೆ.ಸೇರಿ ಜಿಲ್ಲೆಯಲ್ಲಿ 518.74 ಹೆಕ್ಟೇರ್ ಬೆಳೆ ಕೃಷಿ ಹಾನಿಯಾಗಿದೆ. 145 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದರಲ್ಲಿ ಅಡಿಕೆ ಪ್ರಧಾನವಾಗಿದೆ. “ಜಿಲ್ಲೆಯಲ್ಲಿ ಸುಮಾರು 234 ಕೋ.ರೂ.ಗಳಷ್ಟು ಮಳೆಹಾನಿ ಅಂದಾಜಿಸಲಾಗಿದೆ. ಇದರ ಸಮಗ್ರ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದೇವೆ ಮತ್ತು ಅನುದಾನ ಒದಗಿಸಲು ಕೋರಿದ್ದೇವೆ. ಇಲ್ಲಿಯವರೆಗೆ ಅನುದಾನ ಬಂದಿಲ್ಲ. ತುರ್ತು ಅಗತ್ಯಗಳಿಗೆ ಪಿ.ಡಿ. ಖಾತೆಯ ಅನುದಾನವನ್ನು ನಿಯಮಾನುಸಾರ ಬಳಸುತ್ತಿದ್ದೇವೆ.” –ಡಾ| ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ