Advertisement

ರೈಲಿನಲ್ಲಿ  1.65 ಕೋ.ರೂ. ಸಾಗಾಟ

11:28 AM Nov 03, 2018 | Team Udayavani |

ಉಡುಪಿ: ಮುಂಬಯಿಯಿಂದ ಎರ್ನಾಕುಲಂಗೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸುಮಾರು 1.65 ಕೋ.ರೂ. ನಗದು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮತ್ತು ಅದನ್ನು ಪಡೆಯಬೇಕಿದ್ದ ಓರ್ವನನ್ನು ಶುಕ್ರವಾರ ರೈಲ್ವೇ ರಕ್ಷಣಾ ದಳ ಪೊಲೀಸರು ವಶಕ್ಕೆ ಪಡೆದು ಐಟಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.

Advertisement

ಬ್ಯಾಗ್‌ನಲ್ಲಿತ್ತು ಹಣ
ರಾಜಸ್ಥಾನ ಮೂಲದ ಪ್ರಕಾಶ್‌ (28), ಗಣೇಶ್‌ (23) ಮತ್ತು ಜಸ್ವಂತ್‌ ಸಿಂಗ್‌ (38) ವಶದಲ್ಲಿರುವವರು. ಬೆಳಗ್ಗೆ 3 ಗಂಟೆಯ ಸುಮಾರಿಗೆ ಕುಮಟಾದಲ್ಲಿ ರೈಲು ಏರಿದ ಇವರನ್ನು ರೈಲ್ವೇ ರಕ್ಷಣಾ ದಳದ ಎಸ್‌ಐ ಸಂತೋಷ್‌ ಗಾಂವ್ಕರ್‌ ನೇತೃತ್ವದಲ್ಲಿ ಸಿಬಂದಿ ಮಹಮ್ಮದ್‌ ಮತ್ತು ವೇಣು ತಂಡ ತಪಾಸಣೆ ನಡೆಸಿತು. ಆಗ ಸಮರ್ಪಕ ಉತ್ತರ ಸಿಗಲಿಲ್ಲ. ರೈಲು ಉಡುಪಿ ತಲುಪಿದಾಗ ಅವರು ಮಲಗಿದ್ದ ಜಾಗದಲ್ಲಿ ಪತ್ತೆ ಯಾದ ಎರಡು ಬ್ಯಾಗ್‌ ತೆರೆದಾಗ ನಗದು ಹಣ ಪತ್ತೆಯಾಯಿತು. 

ಸುರತ್ಕಲ್‌ನಲ್ಲಿ  ಇಳಿಸಿದರು!
ಬ್ಯಾಗ್‌ನಲ್ಲಿ ನಗದು ಇರುವುದು ಖಚಿತವಾದರೂ ಉಡುಪಿಯಲ್ಲಿ ರೈಲು ಕೇವಲ 2 ನಿಮಿಷ ನಿಲ್ಲುವುದರಿಂದ ಇಳಿಸಲು ಸಾಧ್ಯವಾಗಲಿಲ್ಲ. ಸುರತ್ಕಲ್‌ನಲ್ಲಿ ಇಳಿಸಿ ಸ್ಟೇಷನ್‌ ಮಾಸ್ಟರ್‌ ಸಮ್ಮುಖ ಬ್ಯಾಗ್‌ ತೆರೆದು ಪಂಚ ನಾಮೆ ಮಾಡಿಸಿದರು. ಬಳಿಕ ಉಡುಪಿಗೆ ಕರೆತಂದು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಐಟಿ ಅಧಿಕಾರಿಗಳು ರೈಲ್ವೇ ರಕ್ಷಣಾ ದಳ ಕಚೇರಿಯಲ್ಲಿ ವಿಚಾರಣೆ ಆರಂಭಿಸಿದ್ದು, ತಡರಾತ್ರಿ ವರೆಗೂ ನಡೆದಿತ್ತು.  ಇವರಿಬ್ಬರಲ್ಲಿ ಗಾಂಜಾ ಇರಬಹುದೆಂಬ ಶಂಕೆಯಿತ್ತು. ಆದರೆ ನೋಟುಗಳ ಕಂತೆ ಪತ್ತೆಯಾಗಿದೆ. 

ಚುನಾವಣೆಗೆ ಬಳಕೆ ಶಂಕೆ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ಶನಿವಾರ ನಡೆ ಯಲಿರುವುದರಿಂದ ಮತದಾರರಿಗೆ ಹಂಚಲು ಈ ಹಣ ತಂದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದರಿಂದ ತಹಶೀಲ್ದಾರ್‌, ಚುನಾವಣಾಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು.

ಕಣ್ಣೂರಿಗೆ ಸಾಗಾಟ?
ಈ ಹಣವನ್ನು ಮೂಲತಃ ರಾಜಸ್ಥಾನದ, 15 ವರ್ಷಗಳಿಂದ ಕಣ್ಣೂರಿನಲ್ಲಿ ನೆಲೆಸಿರುವ ಜಸ್ವಂತ್‌ ಸಿಂಗ್‌ ಎಂಬಾತನಿಗೆ ನೀಡಲು ಕೊಂಡೊಯ್ಯಲಾಗುತ್ತಿತ್ತು. ಹಣ ಕ್ಕಾಗಿ ಜಸ್ವಂತ್‌ ಕಾಯುತ್ತಿದ್ದ ಎನ್ನಲಾಗಿದೆ. ವಶವಾಗಿರುವ ಇಬ್ಬರ ಜತೆಗೆ ಆತ ನಿರಂತರ ಮೊಬೈಲ್‌ ಸಂಪರ್ಕದಲ್ಲಿದ್ದ. ಪೊಲೀಸರು ಆತನನ್ನು ಉಪಾಯ ದಿಂದ ಉಡುಪಿ ರೈಲ್ವೇ ನಿಲ್ದಾಣಕ್ಕೆ ಕರೆಸಿಕೊಂಡರು ಎನ್ನಲಾಗಿದೆ.

Advertisement

ಹವಾಲಾ ಜಾಲ?
ವಶದಲ್ಲಿರುವವರು ಹಣದ ಬಗ್ಗೆ ಸದ್ಯ ಸೂಕ್ತ ದಾಖಲೆಗಳನ್ನು ನೀಡಿಲ್ಲ. ಇದು ಹವಾಲಾ ಹಣವಾಗಿರಬಹುದೆಂಬ ಶಂಕೆ ಕೂಡ ಐಟಿ ಅಧಿಕಾರಿಗಳಲ್ಲಿದೆ ಎಂಬ ಮಾಹಿತಿ ಲಭ್ಯ ವಾಗಿದೆ. ಇನ್ನಷ್ಟು ಮಂದಿ ಇದ್ದು, ತಪ್ಪಿಸಿ ಕೊಂಡಿರ ಬಹುದೇ ಎಂಬ ಸಂದೇಹ ವ್ಯಕ್ತವಾಗಿದೆ.ಉಡುಪಿ ರೈಲ್ವೇ ರಕ್ಷಣಾ ದಳದವರು ವಿವಿಧ ವಿಭಾಗಗಳ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಐಟಿ ಅಧಿಕಾರಿಗಳು ರಾಜಸ್ಥಾನದಲ್ಲೂ ವಿಚಾರಣೆ ಆರಂಭಿಸಿದ್ದಾರೆ ಎಂದು ಗೊತ್ತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next