Advertisement

ಉಡುಪಿ: ಟ್ಯಾಂಕರ್‌ ನೀರು ಪೂರೈಕೆಗೆ ಸಿದ್ಧತೆ

11:35 AM Feb 13, 2018 | Team Udayavani |

ಉಡುಪಿ: ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲು ಟೆಂಡರ್‌ ಪಡೆದು ಕೊಳ್ಳುವವರಿಗೆ ವಿಧಿಸಲಾಗಿರುವ ನಿಯಮಗಳನ್ನು ಸರಳಗೊಳಿಸುವಂತೆ ಸಚಿವ ಪ್ರಮೋದ್‌ ಮಧ್ವರಾಜ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

Advertisement

ಫೆ. 12ರಂದು ಉಡುಪಿ ತಾಲೂಕು ಪಂಚಾ ಯತ್‌ ಸಭಾಂಗಣದಲ್ಲಿ ಜರಗಿದ ಅಧಿಕಾರಿಗಳ ಕುಡಿಯುವ ನೀರು ಪೂರೈಕೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಕುರಿತು ದೂರುಗಳು ಬಂದಿವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯ ಬಗ್ಗೆ ನಿರ್ಲಕ್ಷ é ವಹಿಸಬಾರದು. ಮಳೆ ಬರುವವರೆಗೂ ಪಿಡಿಒಗಳು ಸಹಿತ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದಿನದ 24 ತಾಸು ಕೂಡ ಜನರ ಕರೆಗಳನ್ನು ಸ್ವೀಕರಿಸಿ ಸ್ಪಂದಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ನೀರು ಪೂರೈಕೆ ವಾಹನಗಳಿಗೆ ಜಿಪಿಎಸ್‌ ಕಡ್ಡಾಯ ಅಳವಡಿಕೆ, ಇಡೀ ತಾಲೂಕಿನ ಟೆಂಡರನ್ನು ಓರ್ವರಿಗೆ ನೀಡುವುದು ಮೊದಲಾದ ನಿಯಮಗಳನ್ನು ಕೈಬಿಡದಿದ್ದರೆ ನೀರು ಪೂರೈಕೆ ಕಷ್ಟಸಾಧ್ಯವಾಗಲಿದೆ. ಈ ನಿಯಮಗಳಿಗೆ ತಿದ್ದುಪಡಿ ಮಾಡಬೇಕು ಎಂದು ಸಚಿವರು ತಿಳಿಸಿದರು. ಬಜೆ ಅಣೆಕಟ್ಟಿನಿಂದ ನೀರು ಪೂರೈಕೆಯಾಗುವ ಪಂಪ್‌ಹೌಸ್‌ಗೆ 2 ತಾಸು ವಿದ್ಯುತ್‌ ಪೂರೈಕೆ ಕಡಿತವಾದರೆ ಜನರಿಗೆ 3 ದಿನ ನೀರಿನ ಸಮಸ್ಯೆಯಾಗುತ್ತದೆ. ಹಾಗಾಗಿ ನಿರಂತರ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾ.ಪಂ.ಗಳ ಪಂಪ್‌ ಆಪರೇಟರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಪಿಡಿಒಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು. ರೈತರ ಪಂಪ್‌ಸೆಟ್‌ಗಳಿಂದ ಕುಡಿಯುವ ನೀರಿನ ಮೂಲಗಳಿಗೆ ಸಮಸ್ಯೆಯಾದರೆ ಅವರ ಪಂಪ್‌ಸೆಟ್‌ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಪಿಡಿಒಗಳು ಜಿಲ್ಲಾಧಿಕಾರಿಯವರಿಗೆ ತಿಳಿಸಲು ಅವಕಾಶವಿದೆ ಎಂದು ಸಚಿವರು ಹೇಳಿದರು.

ರೇಷನಿಂಗ್‌ ಜಾರಿ
ಉಡುಪಿ ನಗರಕ್ಕೆ ನೀರು ಪೂರೈಕೆಯಾಗುವ ಸ್ವರ್ಣಾ ನದಿಯ ಬಜೆ ಅಣೆಕಟ್ಟಿನಲ್ಲಿ ಫೆ. 12ರಂದು 5.7 ಮೀ. ಮತ್ತು ಶೀರೂರಿನಲ್ಲಿ 0.7 ಮೀ. ನೀರಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ನೀರಿನ ಮಟ್ಟ ಸ್ವಲ್ಪ ಹೆಚ್ಚಿದೆ. ಆದರೆ ಇದೇ ರೀತಿ ನಿರಂತರ ಪೂರೈಕೆ ಮಾಡಿದರೆ ಎ. 15ರ ಹೊತ್ತಿಗೆ ನೀರು ಖಾಲಿಯಾಗುವ ಆತಂಕ ಇದೆ. ಹಾಗಾಗಿ ಮಳೆಗಾಲದವರೆಗೆ ನೀರನ್ನು ನಿಯಮಿತವಾಗಿ (ರೇಷನಿಂಗ್‌) ಪೂರೈಸಲಾಗುವುದು. ರೇಷನಿಂಗ್‌ ಈಗಾಗಲೇ ಜಾರಿಯಾಗಿದೆ. ವಾರಾಹಿಯಿಂದ ನೀರು ಪೂರೈಕೆ ಮಾಡುವ 270 ಕೋ.ರೂ. ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ ತೆಂಕನಿಡಿಯೂರು ಮತ್ತು ಚಾಂತಾರಿನಲ್ಲಿ ಒಟ್ಟು ಸುಮಾರು 94 ಕೋ.ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾರ್ಯಗತಗೊಳ್ಳಲಿದೆ ಎಂದರು.

Advertisement

ಉಡುಪಿ ಮೂರು ವಲಯ
ಬೇಸಗೆ ಕಾಲದಲ್ಲಿ ನೀರಿನ ಲಭ್ಯತೆ ಕಡಿಮೆ ಯಾಗುವ ಕಾರಣ ಎತ್ತರದ ಪ್ರದೇಶಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗಲು ಒತ್ತಡದ ಸಮಸ್ಯೆಯಾಗುತ್ತದೆ. ಕಳೆದ ವರ್ಷ ಇಂತಹ ಸಮಸ್ಯೆ ಬಗೆಹರಿಸಲು ಉಡುಪಿ ನಗರ ವನ್ನು 2 ವಲಯಗಳಾಗಿ ವಿಂಗಡಿಸಿ ಮಳೆ ಗಾಲದವರೆಗೂ ನೀರು ಪೂರೈಸಲಾಗಿತ್ತು. ಈ ಬಾರಿ 3 ವಲಯಗಳನ್ನಾಗಿ ವಿಂಗಡಿಸಿ ಮತ್ತಷ್ಟು ಹೆಚ್ಚು ಒತ್ತಡದಿಂದ ನೀರು ಪೂರೈ ಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಇರುವಲ್ಲಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು. ಅಗತ್ಯ ಬಿದ್ದರೆ ಫೆ. 14ರಿಂದಲೇ ಟ್ಯಾಂಕರ್‌ ನೀರು ಪೂರೈಸಲು ನಗರಸಭೆ ಸಿದ್ಧತೆ ಮಾಡಿಕೊಂಡಿದೆ. ಗ್ರಾ.ಪಂ.ಗಳಿಗೆ ಟ್ಯಾಂಕರ್‌ ನೀರು ಪೂರೈಸಲು ಫೆ. 15ರಂದು ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಹಣದ ಕೊರತೆ ಇಲ್ಲ ಎಂದು ಸಚಿವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next