Advertisement
ಶ್ರೀಕೃಷ್ಣ ಮಠದ ರಥಬೀದಿ, ನಗರಸಭೆಯ ಮುಂಭಾಗ, ನಗರದ ಮಾರುಕಟ್ಟೆಯ ಬಳಿ, ಮಣಿಪಾಲದ ಟೈಗರ್ ಸರ್ಕಲ್ ಬಳಿ, ಆದಿಉಡುಪಿ ಸಹಿತ ವಿವಿಧೆಡೆಯಲ್ಲಿ ಕಬ್ಬು, ಹೂ-ಹಣ್ಣುಗಳ ಮಾರಾಟ ಭರದಿಂದ ಸಾಗಿದೆ.ಆಲಂಕಾರಿಕ ವಸ್ತುಗಳು, ಹೂವುಗಳು, ಲೈಟಿಂಗ್‌ಗಳ ಮಾರಾಟ ಕೂಡ ಭರದಿಂದ ಸಾಗಿದೆ. ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿವಿಧೆಡೆ ಪೆಂಡಾಲ್ ಅಳವಡಿಕೆ ಕಾರ್ಯ, ಲೈಟಿಂಗ್‌ಗಳು, ಬಣ್ಣದ ಕಾಗದಗಳ ಅಳವಡಿಕೆ ಪ್ರಕ್ರಿಯೆಯೂ ಭರದಿಂದ ಸಾಗಿದೆ.
ನಗರದಲ್ಲಿ ಗುರುವಾರ ಕಬ್ಬು 1 ಕೋಲಿಗೆ 60ರಿಂದ 80 ರೂ.ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಸೇವಂತಿಗೆ, ಕಾಕಡ ಹೂವುಗಳು 1 ಮಾರಿಗೆ 80ರಿಂದ 100 ರೂ.ಗಳಲ್ಲಿ ಮಾರಾಟವಾಯಿತು. ನಗರಸಭೆಯ ಎದುರುಭಾಗದಲ್ಲಿ ವ್ಯಾಪಾರಿಗಳು ಈಗ ಬೆರಳೆಣಿಗೆ ಸಂಖ್ಯೆಯಲ್ಲಿ ಸೇರಿದ್ದು, ಶುಕ್ರವಾರ ಮತ್ತಷ್ಟು ವ್ಯಾಪಾರಿಗಳು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಪೈಪೋಟಿಯ ವ್ಯಾಪಾರ ನಡೆದರಷ್ಟೇ ದರ ಕಡಿಮೆಯಾಗಲು ಸಾಧ್ಯ ಎಂದು ಗ್ರಾಹಕರು ತಿಳಿಸಿದ್ದಾರೆ. ಕಡುಬು ತಯಾರಿಸುವ ಕೊಟ್ಟೆ
ರಥಬೀದಿಯ ಬಳಿ ಮಹಿಳೆಯರು ಕಡುಬು ತಯಾರಿಸುವ ಕೊಟ್ಟೆಯನ್ನು ಮಾರಾಟ ಮಾಡುತ್ತಿದ್ದರು. 100 ರೂ.ಗಳಿಗೆ 6 ಕೊಟ್ಟೆಗಳನ್ನು ನೀಡಲಾಗುತ್ತಿತ್ತು. ಇವಿಷ್ಟೇ ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಿಗೆ ಬೇಕಿರುವ ಪೂಜಾ ಸಾಮಗ್ರಿಗಳನ್ನು ವಿವಿಧ ಅಂಗಡಿಗಳಿಂದ ಖರೀದಿಸುವ ದೃಶ್ಯಾವಳಿಗಳೂ ಕಂಡುಬಂತು. ಬಾಳೆಹಣ್ಣು ಹಾಗೂ ಇತರ ಹಣ್ಣುಗಳ ಮಾರಾಟವೂ ಭರದಿಂದ ಸಾಗಿದ್ದು, ಇನ್ನೆರಡು ದಿನ ಉತ್ತಮ ವ್ಯಾಪಾರ ನಿರೀಕ್ಷೆ ಹೊಂದಲಾಗಿದೆ ಎಂಬುವುದು ವ್ಯಾಪಾರಿಗಳ ಅನಿಸಿಕೆ.