ಉಡುಪಿ: ಪೊಲೀಸ್ ಧ್ವಜ ದಿನಾಚರಣೆ ಎ. 2ರಂದು ಪಥಸಂಚಲನ ದೊಂದಿಗೆ ಚಂದು ಮೈದಾನದಲ್ಲಿ ನಡೆಯಿತು. ನಿವೃತ್ತ ಪೊಲೀಸ್ ಉಪ ನಿರೀಕ್ಷಕ ರಾಜಗೋಪಾಲ್ ಅವರು ಧ್ವಜ ಅನಾವರಣಗೊಳಿಸಿ ಪೊಲೀಸ್ ಕಲ್ಯಾಣ ನಿಧಿಗೆ ಧನ ಸಮರ್ಪಿಸಿದರು.
ಒಟ್ಟು 67 ಮಂದಿ ನಿವೃತ್ತ ಪೊಲೀಸ್ ಅಧಿಕಾರಿ ಸಿಬಂದಿಗೆ ಕಲ್ಯಾಣ ನಿಧಿಯ ಮೂಲಕ 5.5 ಲ.ರೂ. ವಿತರಣೆ ಮಾಡಲಾಯಿತು.
ರಾಜ್‌ಗೋಪಾಲ್ ಅವರು ಮಾತನಾಡಿ, ಪೊಲೀಸ್ ಧ್ವಜದಡಿ ನಾವೆಲ್ಲ ಒಂದು ಎನ್ನುವುದನ್ನು ಸಾರಬೇಕು. ಪೊಲೀಸರು ಸಂಘಟಿತರಾಗಿ ಸಾರ್ವ ಜನಿಕ ಆಸ್ತಿಪಾಸ್ತಿ, ಪ್ರಾಣ ರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಅವರು ಮಾತನಾಡಿ, ನಿವೃತ್ತ ಪೊಲೀಸರನ್ನು ನಿರ್ಲಕ್ಷ್ಯ ಮಾಡದೆ ಅವರ ಸೇವೆ, ಅನುಭವವನ್ನು ಇಲಾಖೆ ಪಡೆದುಕೊಳ್ಳುತ್ತದೆ. ಪ್ರತಿ ವರ್ಷ ಪೊಲೀಸ್ ಧ್ವಜ ದಿನಾಚರಣೆ ಮೂಲಕ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ನಿವೃತ್ತ ಪೊಲೀಸರ ರಕ್ಷಣಾ ನಿಧಿಗೆ ಅದನ್ನು ಬಳಸಿಕೊಳ್ಳಲಾಗುತ್ತಿದೆ. ಈ ವರ್ಷ 3,84,150 ರೂ. ಮೊತ್ತದ ಧ್ವಜ ಪಡೆದುಕೊಳ್ಳಲಾಗಿದೆ. ಈ ಮೂಲಕ ನಿಧಿ ಸಂಗ್ರಹಿಸಲಾಗುವುದು ಎಂದರು. ಬಿ. ಮನಮೋಹನ್ ರಾವ್ ನಿರೂಪಿಸಿ, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ವಂದಿಸಿದರು.