Advertisement

ಉಡುಪಿ: ಸುಳ್ಳು ದಾಖಲೆ ಸೃಷ್ಠಿಸಿ ಪಾಸ್ ಪೋರ್ಟ್ ಪಡೆದ ಆರೋಪಿಗಳಿಗೆ ಶಿಕ್ಷೆ

11:04 PM Dec 07, 2022 | Team Udayavani |

ಉಡುಪಿ: ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್‌ಗಳನ್ನು ಹೊಂದಿ ಸರಕಾರಕ್ಕೆ ವಂಚಿಸಿದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

Advertisement

ಪಲಿಮಾರು ಗ್ರಾಮದ ರಾಖೀ ವಿನ್ಸೆಂಟ್‌ ಡಿ’ಸೋಜಾ ತನ್ನ ಅಣ್ಣನಾದ ಪಿಯೂಶ್‌ ಆಗಸ್ಟಿನ್‌ ಡಿ’ಸೋಜಾ ಅವರ ಹೆಸರನ್ನು ದುರ್ಬಳಕೆ ಮಾಡಿ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ತನ್ನದೇ ಭಾವಚಿತ್ರ ಹಾಗೂ ಬೇರೆ ಬೇರೆ ಹೆಸರು ಮತ್ತು ವಿಳಾಸದ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾನೆ. ಈ ಪಾಸ್‌ಪೋರ್ಟ್‌ಗಳನ್ನು ಹೊಂದಲು ಪಾವುಲ್‌ ಡಿ’ಸೋಜಾ ಎಂಬಾತ ನಕಲಿ ಪಾಸ್‌ಪೋರ್ಟ್‌ಗಳನ್ನು ಸೃಷ್ಟಿಸಲು ಬೇಕಾಗುವ ಎಲ್ಲ ದಾಖಲೆಗಳನ್ನು ನೀಡಿರುತ್ತಾನೆ.

ವಿಜಯ್‌ ರಾವ್‌ ಮತ್ತು ಮಹೇಂದ್ರ ಬಾಬು ಅವರು ತಮ್ಮ ಏಜನ್ಸಿ ಮೂಲಕ ರಾಖೀ ವಿನ್ಸೆಂಟ್‌ ಡಿ’ ಸೋಜಾಗೆ ಬೇರೆ ಬೇರೆ ಕೇಂದ್ರಗಳಿಂದ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಳ್ಳಲು ಸಹಕರಿಸಿ ಸುಳ್ಳು ಸ್ಪಷ್ಟನೆಯ ಪಾಸ್‌ಪೋರ್ಟ್‌ಗಳನ್ನು ನೈಜ್ಯ ಎಂದು ನಂಬಿಸಿ ಸರಕಾರಕ್ಕೆ ವಂಚಿಸಿ ಇಸ್ರೇಲ್‌ ದೇಶದಲ್ಲಿ ಉದ್ಯೋಗ ಪಡೆದುಕೊಂಡು ಉದ್ಯೋಗ ಮಾಡುತ್ತಿರುವ ಬಗ್ಗೆ ಮತ್ತು ರಜೆಯಲ್ಲಿ ದೇಶಕ್ಕೆ ವಾಪಾಸು ಬಂದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇಲೆ ಕರಾವಳಿ ಕಾವಲು ಪಡೆಯ ಪೊಲೀಸರು 2008ರ ಜ.5 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಕಾಪು ಲೈಟ್‌ಹೌಸ್‌ ಬೀಚಿನ ಬಳಿ ರಾಖೀ ವಿನ್ಸೆಂಟ್‌ ಡಿ’ಸೋಜಾನನ್ನು ಪಾಸ್‌ಪೋರ್ಟ್‌ ಸಹಿತ ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿತ್ತು. ಆರೋಪಿತಗಳೆಲ್ಲರೂ ಸೇರಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರಕಾರಕ್ಕೆ ವಂಚಿಸಿ ದ್ರೋಹ ಎಸಗಿರುವ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್‌ ಕಾಯ್ದೆಯಡಿ ಉಡುಪಿ ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಸಿ.ಜೆ.ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು ರಾಖೀ ವಿನ್ಸೆಂಟ್‌ ಡಿ’ಸೋಜಾ ಅವರಿಗೆ 3 ವರ್ಷ ಶಿಕ್ಷೆ ಹಾಗೂ 5,000 ರೂ. ದಂಡ, ವಿಜಯ್‌ ರಾವ್‌ ಮತ್ತು ಮಹೇಂದ್ರ ಬಾಬು ಅವರಿಗೆ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ಮತ್ತು ಎಲ್ಲ ಆರೋಪಿಗಳಿಗೆ ಪಾಸ್‌ಪೋರ್ಟ್‌ ಕಾಯ್ದೆಯಡಿಯಲ್ಲಿ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಾದ ಮಂಡಿಸಿದ್ದಾರೆ.

Advertisement

ಇದನ್ನೂ ಓದಿ: ದತ್ತಜಯಂತಿ : ಚಿಕ್ಕಮಗಳೂರಿನಲ್ಲಿ ಶಾಂತಿಯುತವಾಗಿ ನಡೆದ ಬೃಹತ್ ಶೋಭಾಯಾತ್ರೆ

Advertisement

Udayavani is now on Telegram. Click here to join our channel and stay updated with the latest news.

Next