Advertisement
ಅವತಾರತ್ರಯ
Related Articles
Advertisement
ವಾಸುದೇವ ಪರಮಹಂಸನಾಗಿ
ತಂದೆ ನಡಿಲ್ಲಾಯರು ಮಗನಿಗೆ ಇಟ್ಟ ಹೆಸರು ವಾಸುದೇವ. ಇವರಿಗೆ ಸನ್ಯಾಸಾಶ್ರಮ ನೀಡಿದ ಶ್ರೀಅಚ್ಯುತಪ್ರಜ್ಞತೀರ್ಥರು ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು. ಸನ್ಯಾಸ ಬೇರೆ, ವೇದಾಂತ ಸಾಮ್ರಾಜ್ಯ ಬೇರೆ. ಸನ್ಯಾಸಿಗಳಾದವರೆಲ್ಲ ಸಂಸ್ಥೆಯ ಮುಖ್ಯಸ್ಥರಾಗಬೇಕಿಲ್ಲ. ವೇದಾಂತ ಸಂಸ್ಥೆಯ ಉತ್ತರಾಧಿಕಾರಿಯಾಗಿ ನೇಮಿಸುವಾಗ ಗುರುಗಳು ಇಟ್ಟ ನಾಮಧೇಯ ಆನಂದತೀರ್ಥ. ಇದು 1249ರಲ್ಲಿ ಘಟಿಸಿದ ಘಟನೆ ಎಂದು ಕಾಲ ನಿರ್ಣಯವನ್ನು ಮಾಡಿದ್ದಾರೆ ವಿದ್ವಾಂಸ ದಿ| ಡಾ| ಬನ್ನಂಜೆ ಗೋವಿಂದಾಚಾರ್ಯರು. ಆಗ ವಾಸುದೇವನಿಗೆ 11-12ರ ವಯಸ್ಸು. ಮುಂದೆ ಇವರು ಮಧ್ವ ಎಂಬ ಸ್ವಯಂವ್ಯಕ್ತ ನಾಮದಿಂದ ಪ್ರಸಿದ್ಧರಾಗುತ್ತಾರೆ.
ಅಚ್ಯುತಪ್ರಜ್ಞರು ಯಾರು?
ಅಚ್ಯುತಪ್ರಜ್ಞರು ಆಗ ಅನಂತೇಶ್ವರ ದೇವ ಸ್ಥಾನದಲ್ಲಿ ವಾಸವಿದ್ದರು. ಮಧ್ವಾಚಾರ್ಯರನ್ನು ಶಿಷ್ಯರಾಗಿ ಸ್ವೀಕರಿಸಬೇಕಾದರೆ ಗುರುಗಳ ಮೂಲ ರೂಪ ಏನಿದ್ದಿರಬಹುದು ಎಂಬ ಕುತೂಹಲ ಮೂಡುವುದು ಸಹಜ. ನಾರಾಯಣ ಪಂಡಿತಾಚಾರ್ಯರು ಬರೆದ “ಮಧ್ವವಿಜಯ’ ಕೃತಿಯಲ್ಲಿ “ಪುರೈಷ ಕೃಷಾVರಸಿದ್ಧಶುದ್ಧಿದ್| ವರಾನ್ನಭುಕಾö ಕಿಲ ಪಾಂಡವಾಲಯೇ| ವಿಶೋಧಿತಾತ್ಮಾ ಮಧುಕೃತಿ ಪ್ರವೃತ್ತಿಮಾನ್| ಚಚಾ ಕಾಂಶ್ಚಿತ್ ಪರಿವತ್ಸರಾನ್ ಮುದಾ|’ ಎಂದು ತಿಳಿಸಲಾಗಿದೆ. ಅಚ್ಯುತಪ್ರಜ್ಞರು ಹಿಂದೆ ಪಾಂಡವರ ಮನೆಯಲ್ಲಿ ಭೋಜನ ಸ್ವೀಕರಿಸಿದವರು. ಹಲವು ವರ್ಷ ಮಧುಕರವೃತ್ತಿ (ಭಿಕ್ಷೆ) ಮಾಡಿದವರು. ಪಾಂಡವರು ಅನೇಕ ಯತಿಗಳಿಗೆ ಹಾಕಿದವರು. ಇವರಲ್ಲಿ ಒಬ್ಬರು ಅಚ್ಯುತ ಪ್ರಜ್ಞರು. ಈ ಕಾರಣದಿಂದಲೇ ಭೀಮನಾಗಿದ್ದ ವಾಯು ದೇವರು ಮಧ್ವರಾಗಿ ಜನಿಸಿದಾಗ ಅವರಿಗೇ ಗುರುವಾಗುವ ಭಾಗ್ಯ ಬಂತು ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.
ಸನಕಾದಿಗಳ ಪರಂಪರೆ
ಇದು ಮೂಲರೂಪದ ವಿಶೇಷತೆಯಾದರೆ ಯತಿ ಪರಂಪರೆಯು ಸನಕಾದಿಗಳ ವರೆಗೆ ನಮ್ಮನ್ನು ಒಯ್ಯುತ್ತದೆ. ಸನಕಾದಿ ಋಷಿಗಳು ಚತುರ್ಮುಖಬ್ರಹ್ಮನ ಮಕ್ಕಳು. ಬ್ರಹ್ಮನೇ ಜಗತ್ತನ್ನು ಸೃಷ್ಟಿಸಿದಾತ. ಬ್ರಹ್ಮನನ್ನು ಸೃಷ್ಟಿಸಿದವ ಭಗವಂತ. ಇಲ್ಲಿ ಪರಮಾತ್ಮನೆಂದರೆ ಹಂಸನಾಮಕ ಪರಮಾತ್ಮ. ಇದು ಭಗವಂತನ ಹಂಸರೂಪ. ದೇವತೆಗಳಿಗೆ ನಾಲ್ಕೂ ಆಶ್ರಮಗಳಿರುವುದರಿಂದ ಇದು ಹಂಸರೂಪ (ಪರಮಹಂಸರೆಂದು ಕರೆಯುವುದು ಇದೇ ಕಾರಣಕ್ಕೆ). ಇದನ್ನು ಪುರಾತನವಾದ ಗುರುಪರಂಪರೆಯ ಶ್ಲೋಕದಲ್ಲಿ ಕಾಣಬಹುದು. ವಂಶಸ್ಯಾ ದೀನ್ ಸನಕಾದೀನುಪಾಸೇ| ದೂರ್ವಾಸನಂ ಪರತೀರ್ಥಾಖ್ಯಭಿಕ್ಷುಮ್| ಸತ್ಯಪ್ರಜ್ಞಂ ಪ್ರಾಜ್ಞತೀರ್ಥಂಚ ಪಶ್ಚಾತ್| ಪಶ್ಚಾಚ್ಛಿಷ್ಯಾನಚ್ಯುತಪ್ರಜ್ಞ ಮಧೌÌ|| ಎಂಬ ಗುರುಪರಂಪರೆಯ ಶ್ಲೋಕದಲ್ಲಿ ದೂರ್ವಾಸರ ಉಲ್ಲೇಖವೂ ಇದೆ. ದೂರ್ವಾಸಮುನಿಗಳು ಪಾಂಡವರು ವನವಾಸದಲ್ಲಿದ್ದಾಗ ಶಿಷ್ಯಸಮೂಹ ಸಹಿತವಾಗಿ ಭೋಜನಕ್ಕೆ ಬಂದ ಕಥೆ ಗೊತ್ತಿದೆ. ಅಚ್ಯುತಪ್ರಜ್ಞರು ಪಾಂಡವರಿಂದ ಭಿಕ್ಷೆಯನ್ನು ಸ್ವೀಕರಿಸಿದವರು ಎಂದಾಗ ದೂರ್ವಾಸಮುನಿಗಳ ಶಿಷ್ಯಸಮೂಹದಲ್ಲಿ ಅಚ್ಯುತಪ್ರಜ್ಞರು (ಜನ್ಮಾಂತರದಲ್ಲಿ) ಇದ್ದರು ಎಂಬುದನ್ನು ತಿಳಿಯಬಹುದು. ದೂರ್ವಾಸರ ಬಳಿಕ ಪರತೀರ್ಥರು, ಸತ್ಯಪ್ರಜ್ಞರು, ಪ್ರಾಜ್ಞತೀರ್ಥರ ಪರಂಪರೆಯಲ್ಲಿ ಬಂದವರು ಅಚ್ಯುತಪ್ರಜ್ಞರು. ಪ್ರಾಜ್ಞತೀರ್ಥರ ಬಳಿಕ ಪಶ್ಚಾತ್ ಪಶ್ಚಾತ್ ಎಂದಿರುವುದು ಬಹಳ ಮಂದಿ ಆಗಿ ಹೋಗಿದ್ದಾರೆಂಬುದನ್ನು ಸೂಚಿಸುತ್ತದೆ. ಹೀಗೆ ಪರಮಾತ್ಮನಿಂದ ಹರಿದುಬಂದ ಈ ಪರಂಪರೆಯ ಪ್ರವಾಹ ಮಧ್ವರಿಂದ ಹೊಸ ಇತಿಹಾಸದೊಂದಿಗೆ ಮುಂದುವರಿದಿದೆ. ಸನಕಾದಿಗಳ ಪರಂಪರೆಯಿಂದಾಗಿಯೋ ಏನೋ ಶ್ರೀಕೃಷ್ಣಮಠದಲ್ಲಿ ಮಧ್ಯಾಹ್ನ ಪರ್ಯಾಯ ಶ್ರೀಗಳು ಮಹಾಪೂಜೆ ಮಾಡುವ ಮುನ್ನ ಗರ್ಭಗುಡಿಯ ಬಾಗಿಲು ಹಾಕಿ ಹೊರಗೆ ಬಂದು ನಿಲ್ಲುತ್ತಾರೆ. ಸನಕಾದಿ ಋಷಿಗಳು ಬಂದು ಆ ಹೊತ್ತಿನಲ್ಲಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುತ್ತಾರೆಂಬ ನಂಬಿಕೆ ಇರುವುದರಿಂದ ಈ ಪದ್ಧತಿ ಬಂದಿದೆ.
ಉಪೇಂದ್ರತೀರ್ಥರ ಪರಂಪರೆ
ಮಧ್ವಾಚಾರ್ಯರು ಚಿಕ್ಕ ಪ್ರಾಯದಿಂದಲೇ ಪಾಜಕ, ಉಡುಪಿ ಮೊದಲಾದೆಡೆ ತೋರಿದ ಬಾಲಲೀಲೆಗಳ ಕೆಲವು ಕುರುಹುಗಳು ಇವೆ. ಮುಂದೆ ಇವರು ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಎಂಟು ಶಿಷ್ಯರನ್ನು ನೇಮಿಸಿದರು. ಆ ಪರಂಪರೆ ಈಗಲೂ ಮುಂದುವರಿದುಕೊಂಡು ಬರುತ್ತಿದೆ. ಇದಲ್ಲದೆಯೂ ಘಟ್ಟದ ಮೇಲೆ ಮಧ್ವ ಪರಂಪರೆ ಮುಂದುವರಿಯುತ್ತಿದೆ. ಪ್ರಸ್ತುತ ಶ್ರೀಕೃಷ್ಣಮಠದಲ್ಲಿ ನಡೆಯುವ ಪರ್ಯಾಯ ಪೂಜೆಯು ಮಧ್ವರ ಎಂಟು ಶಿಷ್ಯರಲ್ಲಿ ಒಬ್ಬರಾದ ಶ್ರೀಉಪೇಂದ್ರತೀರ್ಥರ ಪರಂಪರೆಗೆ ಸಂಬಂಧಿಸಿದ್ದು. ಆರಂಭದಲ್ಲಿ ಆದ್ಯ ಯತಿಗಳ ಹೆಸರಿನ ಪರಂಪರೆಯಲ್ಲಿ ಗುರುತಿಸಲಾಗುತ್ತಿತ್ತು. ಬಳಿಕ ಮಠಗಳ ಹೆಸರಿನ ಮೂಲಕ ಸಂವಹನ ಮಾಡುವ ಕ್ರಮ ರೂಢಿಗೆ ಬಂತು. ಉಪೇಂದ್ರತೀರ್ಥರ ಪರಂಪರೆಯನ್ನು ಪುತ್ತಿಗೆ ಮಠ ಎಂದು ಗುರುತಿಸಲಾಗುತ್ತಿದೆ.