Advertisement
ಪರ್ಯಾಯ ಪೀಠಾರೂಢರಾಗುವ ಸ್ವಾಮೀಜಿ ಯವರು ಮುಂಜಾವ ತೀರ್ಥಸ್ನಾನ ಮಾಡಿ ಬರುವ ಕಾಪುವಿನ ದಂಡತೀರ್ಥದಿಂದ ಕಿನ್ನಿಮೂಲ್ಕಿವರೆಗೆ, ಕರಾವಳಿ ಬೈಪಾಸ್‌ನಿಂದ ಮಣಿಪಾಲದವರೆಗೆ, ಕಲ್ಸಂಕದಿಂದ ಅಂಬಾಗಿಲು ಮಾರ್ಗ ಸಹಿತ ನಗರದ ಒಳರಸ್ತೆಗಳಿಗೂ ಲೈಟಿಂಗ್, ಧ್ವಜಗಳ ಅಲಂಕಾರ ಮಾಡಲಾಗಿದೆ.
ವಿದ್ಯುತ್ ಕಂಬಗಳು, ನಗರದ ವೃತ್ತಗಳಿಗೆ ಕೇಸರಿ ಬಾವುಟಗಳ ಮೂಲಕ ಶೃಂಗಾರ ಮಾಡಲಾಗಿದೆ. ಜ. 17 ಹಾಗೂ ಜ.18ಕ್ಕೆ ಪರ್ಯಾಯೋತ್ಸವ ಸಂಭ್ರಮ ನಡೆಯಲಿದ್ದರೂ ನಗರದಲ್ಲಿ ಈಗಲೇ ಹಬ್ಬದ ವಾತಾವರಣ ಉಂಟಾಗಿದೆ. ವಿವಿಧೆಡೆಗಳಿಂದ ಆಗಮಿಸುತ್ತಿರುವ ಭಕ್ತರು ಕೂಡ ನಗರಾಲಂಕಾರಕ್ಕೆ ಮಾರು ಹೋಗಿದ್ದಾರೆ. ಬಸ್, ರೈಲು ಹಾಗೂ ಟೂರಿಸ್ಟ್ ವಾಹನಗಳ ಮೂಲಕ ದಿನನಿತ್ಯ ಶ್ರೀಕೃಷ್ಣ ಮಠಕ್ಕೆ ಆಗಮಿಸುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ.
Related Articles
ನಗರದ ಹೊರಭಾಗದಂತೆ ರಥಬೀದಿಯೊಳಗೂ ವಿದ್ಯುದ್ದೀಪಗಳು ಕಣ್ಸೆಳೆಯುತ್ತಿವೆ. ಈಗಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ಕೈಬೀಸಿ ಕರೆಯುತ್ತಿರುವ ಶ್ರೀಕೃಷ್ಣ ಮಠ ರಾತ್ರಿ ವೇಳೆ ವಿಭಿನ್ನ ಬೆಳಕಿನ ಚಿತ್ತಾರ ಮತ್ತಷ್ಟು ಪುಳಕ ನೀಡುತ್ತವೆ.
Advertisement
ರಥಬೀದಿ ಒಳಭಾಗ, ಶ್ರೀಕೃಷ್ಣ ಮಠ, ರಾಜಾಂಗಣ, ಪರ್ಯಾಯ ಶ್ರೀ ಪುತ್ತಿಗೆ ಮಠ, ಪೆಂಡಲ್‌ಗಳು, ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನಗಳಿಗೆ ಈಗಾಗಲೇ ಲೈಟಿಂಗ್ ಅಲಂಕಾರ ಮಾಡಲಾಗಿದೆ. ಪರ್ಯಾಯೋತ್ಸವದ ದಿನ ಎಲ್ಲ ನಗರಾಲಂಕಾರದ ಲೈಟ್‌ಗಳನ್ನು ಹಾಕಲಾಗಿದ್ದು, ಇನ್ನು ಜ.14ರ ಬಳಿಕ ರಾತ್ರಿ ವೇಳೆ ಲೈಟ್‌ಗಳನ್ನು ಆನ್ ಮಾಡಲಾಗುತ್ತದೆ.
ರಥಬೀದಿಯ ಒಳಭಾಗದಲ್ಲಿ 50ರಿಂದ 100ರಷ್ಟು ಆಲಂಕಾರಿಕ ಗೂಡುದೀಪಗಳು, ಬೃಹತ್ ಗಾತ್ರದ ಸುಮಾರು 3ರಿಂದ 4 ಸಾವಿರ ಬಲ್ಬ್ಗಳು, ವಿವಿಧ ವಿನ್ಯಾಸದ ಮಿನಿಯೇಚರ್‌ಗಳು, ರಾಕೆಟ್ ರೀತಿಯ ಮಿನಿಯೇಚರ್‌ಗಳು ರಥಬೀದಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರಥಬೀದಿಯ ಲೈಟಿಂಗ್ ವ್ಯವಸ್ಥೆಯನ್ನು ಉಡುಪಿಯ ಮಂಜುನಾಥ ಎಲೆಕ್ಟ್ರಿಕಲ್ಸ್ ಅವರಿಗೆ ನೀಡಲಾಗಿದ್ದು, ಈಗಾಗಲೇ ಬಹುತೇಕ ಎಲ್ಲ ಕಡೆ ಲೈಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಸಣ್ಣಪುಟ್ಟ ಕೆಲಸ ಕಾರ್ಯಗಳಷ್ಟೇ ಬಾಕಿ ಉಳಿದಿದೆ.
ಸೆಲ್ಫಿ ಪ್ರಿಯರಿಗೆ ಹಬ್ಬ!ಬಣ್ಣಬಣ್ಣದ ಲೈಟಿಂಗ್‌ಗಳನ್ನು ಕಂಡಾಗ ಫೋಟೋ, ಸೆಲ್ಫಿ ತೆಗೆಸಿಕೊಳ್ಳದವರಿಲ್ಲ. ಅಂತಹವರಿಗೆ ಈ ಬಾರಿಯ ಪರ್ಯಾಯದಲ್ಲಿ
ಮತ್ತಷ್ಟು ಅವಕಾಶ ಸಿಗಲಿದೆ. ರಥಬೀದಿಯೊಳಗೆ ಹೊಕ್ಕಾಗ ಹಾಗೂ ಹೊರಭಾಗದಲ್ಲಿರುವ ಲೈಟಿಂಗ್‌ಗಳಿಗೆ ಮಾರುಹೋಗದವರಿಲ್ಲ. ಜತೆಗೆ ದಂಡತೀರ್ಥದಿಂದ ಕಿನ್ನಿಮೂಲ್ಕಿಯವರೆಗೆ ಲೈಟಿಂಗ್ ಅಳವಡಿಕೆ ಮಾಡಿರುವುದು ಈ ಬಾರಿಯ ಪರ್ಯಾಯದ ವಿಶೇಷತೆ. ಒಟ್ಟಿನಲ್ಲಿ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಸಂಪೂರ್ಣ ಸಜ್ಜುಗೊಂಡಿದ್ದು, ವಿವಿಧ
ವಿಶೇಷತೆಗಳ ಮೂಲಕ ಗಮನಸೆಳೆಯುತ್ತಿದೆ.