Advertisement

ಉಡುಪಿ: 8 ದಿನಗಳ ಬಳಿಕ ಭಾಗಶಃ ನಗರಕ್ಕೆ ನೀರು

01:53 AM May 10, 2019 | Team Udayavani |

ಉಡುಪಿ: ನೀರಿನ ತೀವ್ರ ಅಭಾವದಿಂದ ತತ್ತರಿಸಿರುವ ಉಡುಪಿ ನಗರದ ಭಾಗಶಃ ಪ್ರದೇಶಕ್ಕೆ 8 ದಿನಗಳ ಬಳಿಕ ಗುರುವಾರ ನಳ್ಳಿ ನೀರು ಪೂರೈಕೆಯಾಗಿದೆ. ಬಾಕಿ ವಾರ್ಡ್‌ಗಳಿಗೂ ಹಂತ ಹಂತವಾಗಿ ಪೂರೈಸಲು ಪ್ರಯತ್ನ ಮುಂದುವರಿದಿದೆ.

Advertisement

ಸ್ವರ್ಣಾ ನದಿಯ ಹಿರಿಯಡಕ ಸಮೀಪದ ಬಜೆ ಅಣೆಕಟ್ಟಿನಿಂದ ಸುಮಾರು 2 ಕಿ.ಮೀ. ದೂರದ ಶೀರೂರು ವರೆಗೆ ದೊಡ್ಡ ಹಳ್ಳಗಳಲ್ಲಿ ತುಂಬಿರುವ ನೀರನ್ನು ಅಣೆಕಟ್ಟಿಗೆ (ಜಾಕ್‌ವೆಲ್‌ಗೆ) ಹಾಯಿಸಿ ಅಲ್ಲಿಂದ ನಗರಸಭೆಯ ವಿತರಣಾ ಜಾಲದ ಮೂಲಕ ನೀರು ಪೂರೈಸಲಾಗುತ್ತಿದೆ.

ಸಹಜ ಹರಿವು ಸ್ಥಗಿತಗೊಂಡಿರುವು ದರಿಂದ ಶೀರೂರಿನಿಂದ ಮಾಣೈಗೆ, ಮಾಣೈಯಿಂದ ಭಂಡಾರಿಬೆಟ್ಟಿಗೆ, ಭಂಡಾರಿ ಬೆಟ್ಟಿನಿಂದ ಪುತ್ತಿಗೆ, ಪುತ್ತಿಗೆಯಿಂದ ಬಜೆ ವರೆಗೆ ಪಂಪ್‌ ಮೂಲಕ ನೀರು ಹರಿಸಲಾಗುತ್ತಿದೆ. ಗುರುವಾರ 9 ಪಂಪ್‌ಗ್ಳನ್ನು ಬಳಕೆ ಮಾಡಲಾಗಿದೆ.

ಗುರುವಾರ ನಿಟ್ಟೂರು, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಕಕ್ಕುಂಜೆ, ದೊಡ್ಡಣಗುಡ್ಡೆ ಮೊದಲಾದೆಡೆ ನೀರು ಒದಗಿಸಲಾಯಿತು. ಶುಕ್ರವಾರ
ಮಣಿಪಾಲ, ಇಂದ್ರಾಳಿ, ದೊಡ್ಡಣ ಗುಡ್ಡೆ ಸಹಿತ ಕೆಲವು ವಾರ್ಡ್‌ಗಳಿಗೆ ನೀರು ಒದಗಿಸಲಾಗುವುದು ಎಂದು ನಗರ ಸಭೆ ಅಧಿಕಾರಿಗಳು ತಿಳಿಸಿದ್ದಾರೆ.

6 ವಿಭಾಗ, 1 ಸಾವಿರ ಲೀ.
ನಗರವನ್ನು 6 ವಿಭಾಗಗಳಾಗಿ ವಿಂಗಡಿಸಿ ಒಂದೊಂದು ವಿಭಾಗಕ್ಕೆ ನೀರು ಸರಬರಾಜು ಮಾಡಲಾಗು ವುದು. ಪ್ರತಿ ವಾರ್ಡ್‌ಗೂ ನೋಡಲ್‌ ಸಿಬಂದಿಯನ್ನು ನೇಮಿಸಲಾಗಿದೆ. ಅವರು ಕರೆಗಳನ್ನು ಸ್ವೀಕರಿಸಿ ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಿದ್ದಾರೆ. ಒಂದು ಮನೆಗೆ ಒಂದು ಸಾವಿರ ಲೀಟರ್‌ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲು ಬಂದ ಟ್ಯಾಂಕರ್‌ನ ಟ್ರಿಪ್‌ ಶೀಟ್‌ ವಿವರ ಭರ್ತಿ ಮಾಡಿ ಕಡ್ಡಾಯವಾಗಿ ಸಹಿ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

ಹೂಳು ತೆಗೆಯಲು ಟೆಂಡರ್‌
ಬಜೆ ಅಣೆಕಟ್ಟಿನಲ್ಲಿ ಶೇಖರಣೆ ಗೊಂಡಿರುವ ಹೂಳು ತೆಗೆಯಲು ಟೆಂಡರ್‌ ಕರೆಯಲು ಸೂಚಿಸಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿರುವ ಬೋರ್‌ವೆಲ್‌ ಹಾಗೂ ತೆರೆದ ಬಾವಿಗಳ ಪುನಶ್ಚೇತನ, ಮಣ್ಣಪಳ್ಳ ಕೆರೆಯ ಹೂಳು ತೆಗೆಯಲು ಪ್ರಸ್ತಾವನೆ ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗಿದೆ. ಮಳೆ ನೀರು ಹರಿಯುವ ತೋಡುಗಳ (ರಾಜ ಕಾಲುವೆ) ಹೂಳು ತೆಗೆಯುವ ಬಗ್ಗೆ ಸರ್ವೆ ನಡೆಸಿ ಅಂದಾಜು ಪಟ್ಟಿ ತಯಾರಿಸಿ ಟೆಂಡರ್‌ ಕರೆಯಲು ಸೂಚಿಸಲಾಗಿದೆ. ಬಜೆಯಲ್ಲಿ ಗೇಟುಗಳ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಟ್ಯಾಂಕರ್‌ ನೀರಿಗೆ ಅನುಮೋದನೆ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಸೇರಿದಂತೆ ತುರ್ತು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ನಗರಸಭೆಯ ವಿತರಣಾ ಜಾಲದಿಂದ (ನಳ್ಳಿನೀರು) ಪೂರೈಕೆಯಾದ
ದಿನದಿಂದ ಮೂರು ದಿನಗಳ ಅನಂತರ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next