Advertisement

ಉಡುಪಿ: ಇಳಿಮುಖವಾಗುತ್ತಿದೆ ಭತ್ತದ ಕೃಷಿ ಪ್ರದೇಶ

10:12 PM Apr 07, 2019 | sudhir |

ಕುಂದಾಪುರ: ವರ್ಷದಿಂದ ವರ್ಷಕ್ಕೆ ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಈ ಬಾರಿಯ ಮುಂಗಾರು ಹಾಗೂ ಹಿಂಗಾರಿನಲ್ಲಿ ಒಟ್ಟು 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಬೆಳೆಯುವ ಗುರಿಯಿತ್ತು. ಆದರೆ ಎರಡೂ ಹಂಗಾಮಿನಲ್ಲಿ ಒಟ್ಟು 39,192 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗಿತ್ತು. ಇದರಿಂದ ರೈತರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆಯೇ ಎನ್ನುವ ಆತಂಕ ಎದುರಾಗಿದೆ.

Advertisement

208-19 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಈ ಬಾರಿ 44 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗುರಿಯಿದ್ದು, 35,487 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಬೆಳೆಸಲಾಗಿತ್ತು. ಹಿಂಗಾರಿನಲ್ಲಿ 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗುರಿಯಿದ್ದರೆ, ಬರೇ 3,705 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಮಾಡಲಾಗಿದೆ.

ತಾಲೂಕುವಾರು ಚಿತ್ರಣ
ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಭತ್ತದ ಕೃಷಿ ಬೆಳೆಯುವ ತಾಲೂಕು ಎನಿಸಿರುವ ಕುಂದಾಪುರದಲ್ಲಿ ಮುಂಗಾರಿ ನಲ್ಲಿ 18,250 ಹೆಕ್ಟೇರ್‌ ಪ್ರದೇಶದಲ್ಲಿ ಗುರಿಯಿದ್ದರೆ, 13,728 ಹೆಕ್ಟೇರ್‌ ಜಾಗದಲ್ಲಿ ಮಾತ್ರ ಭತ್ತದ ಕೃಷಿ ಬೆಳೆಯಲಾಗಿತ್ತು. ಉಡುಪಿ ತಾಲೂಕಿನಲ್ಲಿ 17,750 ಹೆಕ್ಟೇರ್‌ ಗುರಿಯಿದ್ದರೆ, 15,412 ಹೆಕ್ಟೇರ್‌ ಕೃಷಿ ಪೂರ್ಣಗೊಂಡಿತ್ತು. ಕಾರ್ಕಳದಲ್ಲಿ 8 ಸಾವಿರ ಹೆಕ್ಟೇರ್‌ ಗುರಿ, 6,347 ಹೆಕ್ಟೇರ್‌ ಗುರಿ ಸಾಧಿಸಲಾಗಿತ್ತು. ಹಿಂಗಾರಿನಲ್ಲಿ ಕುಂದಾಪುರ – 2,500 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ನಿಗದಿಪಡಿಸಲಾಗಿತ್ತು. 1,296 ಹೆಕ್ಟೇರ್‌ ಭೂಮಿಯಲ್ಲಿ ಕೃಷಿ ಮಾಡಲಾಗಿದೆ. ಉಡುಪಿ – 1 ಸಾವಿರ ಹೆಕ್ಟೇರ್‌ ಗುರಿ, ಆ ಪೈಕಿ 663 ಹೆಕ್ಟೇರ್‌ ಗುರಿ ಸಾಧಿಸಲಾಗಿದೆ. ಕಾರ್ಕಳದಲ್ಲಿ 2,500 ಹೆಕ್ಟೇರ್‌ ಗುರಿ, ಅದರಲ್ಲಿ 1,746 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಬೆಳೆಯಲಾಗಿದೆ.

2013 ರಲ್ಲಿ ಮುಂಗಾರಿನಲ್ಲಿ 44,563 ಹೆಕ್ಟೇರ್‌ ಭೂಮಿಯಲ್ಲಿ ಭತ್ತದ ಕೃಷಿಯಿದ್ದರೆ, 2018 ರಲ್ಲಿ 35,487 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಅಂದರೆ ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 9,076 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಕಣ್ಮರೆಯಾಗಿದೆ.

ಹೆಕ್ಟೇರ್‌ಗೆ 7,500 ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿದ್ದು, ಅದು ಸಮರ್ಪಕ ವಾಗಿ ಜಾರಿಯಾಗಬೇಕಿದೆ. ಹೆಚ್ಚು ಇಳುವರಿ ಬರುವ ಹಾಗೂ ಆಯಾಯ ಪ್ರದೇಶದ ನೀರಾವರಿ ಭೂಮಿಗೆ ಅನುಗುಣವಾಗಿ ತಳಿಗಳನ್ನು ಕೃಷಿ ಇಲಾಖೆ ಯಿಂದಲೇ ನೀಡುವಂತಾಗಬೇಕು ಎನ್ನುವುದು ರೈತರ ಆಗ್ರಹ.

Advertisement

ಇತರೆ ಬೆಳೆ ಪ್ರದೇಶ ಹೆಚ್ಚಳ
ಜಿಲ್ಲೆಯಲ್ಲಿ ಒಟ್ಟಾರೆ ಭತ್ತದ ಕೃಷಿ ಪ್ರದೇಶ ಕಡಿಮೆಯಾಗಿದ್ದರೂ ಸಹ, ಇತರೆ ತೋಟಗಾರಿಕಾ ಬೆಳೆ ಬೆಳೆಯುವ ಪ್ರದೇಶ ಹೆಚ್ಚಳವಾಗಿದೆ. ಭತ್ತದ ಕೃಷಿ ಕಡಿಮೆಯಾಗಲು ಅನೇಕ ಕಾರಣಗಳಿವೆ. ಆದರೂ ಕೃಷಿಯನ್ನು ಯಾಂತ್ರೀಕರಣಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇಲಾಖೆಯಿಂದ ಶ್ರಮವಹಿಸಲಾಗುತ್ತಿದೆ.
-ಚಂದ್ರಶೇಖರ್‌, ಉಪ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ

ಕಾರಣವೇನು?
ಭತ್ತದ ಕೃಷಿಯಿಂದ ಈ ರೀತಿಯಾಗಿ ವಿಮುಖರಾಗುತ್ತಿರುವುದಕ್ಕೆ ರೈತರೇ ಹಲವಾರು ಕಾರಣಗಳನ್ನು ಕೊಡುತ್ತಾರೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಬೆಲೆ ಕುಸಿತ, ಕುಂದಾಪುರ, ಬೈಂದೂರು ಭಾಗದಲ್ಲಿ ಉಪ್ಪು ನೀರಿನ ಹಾವಳಿ, ಇನ್ನು ಇದಕ್ಕಿಂತ ಹೆಚ್ಚು ಲಾಭದಾಯಕವಾಗಿರುವ ಅಡಿಕೆ, ಕಾಳು ಮೆಣಸು ನಂತಹ ತೋಟಗಾರಿಕಾ ಬೆಳೆಗಳು ಭತ್ತದ ಗದ್ದೆಗಳನ್ನು ಆಕ್ರಮಿಸಿಕೊಂಡಿವೆ. ಇನ್ನು ನಗರಕ್ಕೆ ಸಮೀಪದ ಪ್ರದೇಶಗಳ ಗದ್ದೆಗಳು ಸೈಟ್‌ಗಳಾಗಿ ಪರಿವರ್ತನೆಗೊಂಡು ಲೇಔಟ್‌, ವಾಣಿಜ್ಯ, ವಸತಿ ಸಂಕೀರ್ಣಗಳಾಗಿ ಮಾರ್ಪಡಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next