Advertisement

Udupi: ಕೊಳಚೆಯಿಂದ ಕಂಗಾಲಾದ ನಿಟ್ಟೂರು, ಕಲ್ಮಾಡಿ

01:13 PM Dec 25, 2024 | Team Udayavani |

ಉಡುಪಿ: ನಿಟ್ಟೂರು, ಕಲ್ಮಾಡಿ ಭಾಗಗಳಲ್ಲಿ ಒಳಚರಂಡಿ ನೀರಿನ ವಾಸನೆಯಿಂದ ರೋಗ-ರುಜಿಗಳು ಆವರಿಸುತ್ತಿವೆ. ಚಹಾ, ಊಟವನ್ನೂ ಮಾಡಲಾಗದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಊರಿನಲ್ಲಿ ಎಲ್ಲ ರೀತಿಯ ಕಾಯಿಲೆಗಳೂ ತಾಂಡವವಾಡುತ್ತಿವೆ ಎಂಬ ಗಂಭೀರ ಸಮಸ್ಯೆ ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.

Advertisement

ಅಧ್ಯಕ್ಷ ಪ್ರಭಾಕರ ಪೂಜಾರಿ ಗುಂಡಿಬೈಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಯಶ್‌ಪಾಲ್‌ ಎ.ಸುವರ್ಣ, ಉಪಾಧ್ಯಕ್ಷೆ ರಜನಿ ಹೆಬ್ಟಾರ್‌ ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿದ ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ ಹಾಗೂ ಸದಸ್ಯ ಸಂತೋಷ್‌ ಜತ್ತನ್ನ ಅವರು ತಮ್ಮ ಭಾಗದ ಸಮಸ್ಯೆಯನ್ನು ತೆರೆದಿಟ್ಟರು.

ನಿಟ್ಟೂರು ಎಸ್‌ಟಿಪಿಗೆ ಕೇಂದ್ರ ಸರಕಾರ 30 ಕೋ.ರೂ.ಅನುದಾನ ಬಿಡುಗಡೆಗೊಳಿಸಿದೆ. ಆದರೆ ಕಾಮಗಾರಿ ಯಾಕೆ ಆರಂಭಿಸಿಲ್ಲ. ಹೀಗಾಗಿಯೇ ಈ ಭಾಗದಲ್ಲಿ ಸಮಸ್ಯೆ ಉಲ್ಬಣಿಸಿದೆ ಎಂದು ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮೂಲಕ ಈ ಕಾಮಗಾರಿ ನಡೆಸಲಾಗುವುದು. ಈಗಾಗಲೇ ಡಿಪಿಆರ್‌ ಅಂತಿಮ ಹಂತದಲ್ಲಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಕನಿಷ್ಠ 6 ತಿಂಗಳು ಟೆಂಡರ್‌ಗೆ ಬೇಕು ಎಂದು ಅಧಿಕಾರಿಗಳು ತಿಳಿಸಿದರು. ಅಲ್ಲಿಯವರೆಗೆ ತಾತ್ಕಾಲಿಕ ಪರಿಹಾರ ಒದಗಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಮತಾಂತರ ಕೇಂದ್ರ: ಆರೋಪ: ನಗರದ ಡಯನಾ ಹೊಟೇಲ್‌ ಮುಂಭಾಗದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಶೀಲನೆ ನಡೆಸಬೇಕು. ಹೌದೆಂದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ವಿಜಯ ಕೊಡವೂರು ಅವರು ಆಗ್ರಹಿಸಿದರು. ಮತಾಂತರ ಕೇಂದ್ರಗಳಿಗೆ ಉಡುಪಿಯಲ್ಲಿ ಅವಕಾಶವಿಲ್ಲ. ಅದು ಮನೆಯೋ, ಸಭಾಭವನವೋ, ಶಿಕ್ಷಣ ಸಂಸ್ಥೆಯೋ ಅಥವಾ ಮತಾಂತರ ಕೇಂದ್ರವೋ ಎಂಬ ಬಗ್ಗೆ ನಗರಸಭೆ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಶಾಸಕರು ತಿಳಿಸಿದರು. ನಗರಸಭೆ ದಾಖಲೆಗಳ ಪ್ರಕಾರ ವಸತಿ ಕಟ್ಟಡ ಎಂದು ಉಲ್ಲೇಖೀಸಲಾಗಿದೆ. 4 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಈ ಕಟ್ಟಡವಿದೆ. ಇಲ್ಲಿರುವ ಪ್ರಚೋದನಕಾರಿ ಪೋಸ್ಟ್‌ಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಪ್ರಮುಖ ಚರ್ಚೆಗಳು
– ತಳ್ಳುಗಾಡಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ
– ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಸಮಸ್ಯೆ ಇತ್ಯರ್ಥಪಡಿಸುವುದು.
– ಕಲ್ಮಾಡಿ-ಗರಡಿಮಜಲು ಭಾಗದಲ್ಲಿ ಬೀದಿದೀಪ ದುರಸ್ತಿಗೆ ಕ್ರಮ ತೆಗೆದುಕೊಳ್ಳುವುದು.
– ಶಾಲೆಯಿಂದ ಹೊರಗುಳಿದ ಮಕ್ಕಳ ರಕ್ಷಣೆ ಸಂಬಂಧ ಇಲಾಖೆಗೆ ಮಾಹಿತಿ ನೀಡುವುದು.
– ನಗರದ 35 ವಾರ್ಡ್‌ಗಳಿಗೆ ಬೇಕಿರುವ ವಿವಿಧ ರೀತಿಯ ಸ್ವತ್ಛತ ಯಂತ್ರಗಳ ಬಗ್ಗೆ ಪಟ್ಟಿ ತಯಾರಿ.
– ತೆರಿಗೆ ವಸೂಲಾತಿಗೆ ಸೂಕ್ತ ಕ್ರಮ ಕೈಗೊಳ್ಳುವುದು.
– ಬಬ್ಬುಸ್ವಾಮಿ ಲೇಔಟ್‌ ನಿರ್ಮಾಣ ಸಂದರ್ಭ ದಲ್ಲಿ ಮೂಲಸೌಕರ್ಯಕ್ಕೆ ಗಮನಹರಿಸದೆ ಸಮಸ್ಯೆ.

Advertisement

ಕಲ್ಸಂಕದಲ್ಲಿ ಫ್ರೀ ಲೆಫ್ಟ್
ನಗರದಲ್ಲಿ ದಿನನಿತ್ಯ ಟ್ರಾಫಿಕ್‌ ದಟ್ಟನೆ ಉಂಟಾಗುತ್ತಿದ್ದು, ಈ ಬಗ್ಗೆ ನಗರಸಭೆ ಏನು ಕ್ರಮ ತೆಗೆದುಕೊಂಡಿದೆ ಎಂದು ಸದಸ್ಯರು ಪ್ರಶ್ನಿಸಿದರು. ಸಂತೆಕಟ್ಟೆ, ಕರಾವಳಿ ಬೈಪಾಸ್‌, ಅಂಬಲಪಾಡಿ, ಮಲ್ಪೆ ಭಾಗದಲ್ಲಿ ರಸ್ತೆ ಕಾಮಗಾರಿ ಹಾಗೂ ವಿವಿಧೆಡೆ ವಾರಾಹಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಕ್ರಿಸ್ಮಸ್‌ ಹಾಗೂ ವರ್ಷಾಂತ್ಯದ ಕಾರಣ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗಿದೆ. ಸಂಚಾರ ದಟ್ಟಣೆೆ ನಿರ್ವಹಣೆ ಬಗ್ಗೆ ಈಗಾಗಲೇ ಟ್ರಾಫಿಕ್‌ ಪೊಲೀಸರಿಗೂ ಸೂಚನೆ ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಡಾ| ಉದಯ ಶೆಟ್ಟಿ ತಿಳಿಸಿದರು. ಕಲ್ಸಂಕದಲ್ಲಿ ಫ್ರೀ ಲೆಫ್ಟ್ ಮಾಡುವ ಜತೆಗೆ ಬ್ರಿಡ್ಜ್ ಮಾಡುವ ಪ್ರಸ್ತಾವನೆ ಇದೆ. ಈಗ ಇರುವ ಸಿಗ್ನಲ್‌ಗ‌ಳನ್ನು ತೆರವುಗೊಳಿಸಿ ಹೊಸ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಅಂಬಲಪಾಡಿ: ಯೋಜನೆಯಂತೆಯೇ ಕಾಮಗಾರಿ
ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುವುದು ಉತ್ತಮವಲ್ಲ. ಮೇಲ್ಸೇತುವೆ ನಿರ್ಮಾಣಕ್ಕೆ ಜನರ ಸಹಕಾರ ಇದೆ. ವ್ಯತಿರಿಕ್ತ ಹೇಳಿಕೆ ನೀಡುವುದು, ಪ್ರತಿಭಟನೆ ಮಾಡುವುದು ಜನರ ಹಿತದೃಷ್ಟಿಯಿಂದ ಉತ್ತಮ ಕ್ರಮವಲ್ಲ. ಯೋಜನೆಯಲ್ಲಿ ಬದಲಾವಣೆ ಬೇಕಿದ್ದರೆ ಟೆಂಡರ್‌ಗೂ ಮುನ್ನವೇ ತಿಳಿಸಬಹುದಿತ್ತು ಎಂದು ಸದಸ್ಯ ಹರೀಶ್‌ ಶೆಟ್ಟಿ ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ ಕಾಂಚನ್‌, ಕಾಮಗಾರಿಗೆ ವಿರೋಧ ಇಲ್ಲ. ಬದಲಾಗಿ ಅಲ್ಲಿ ಎಲಿವೇಟೆಡ್‌ ಫ್ಲೈ ಓವರ್‌ ನಿರ್ಮಾಣ ಮಾಡಬೇಕೆಂದು ತಿಳಿಸಿದ್ದೆ. ಸಂತೆಕಟ್ಟೆ, ಮಲ್ಪೆ, ಇಂದ್ರಾಳಿ, ಪರ್ಕಳದಂತಹ ಸ್ಥಿತಿ ಅಂಬಲಪಾಡಿಗೆ ಬರಬಾರದು. ಈ ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿ ತ್ವರಿತವಾಗಿ ನಡೆಯಬೇಕು ಎಂದರು.

ಶಾಸಕರು ಮಾತನಾಡಿ, ಅಂಬಲಪಾಡಿ ಜಂಕ್ಷನ್‌ನಲ್ಲಿ ಈಗಾಗಲೇ ಹಲವಾರು ಅಪಘಾತಗಳು ನಡೆದಿದ್ದು, ಬ್ಲ್ಯಾಕ್‌ ಲಿಸ್ಟ್‌ನಲ್ಲಿ ಗುರುತಿಸಿಕೊಂಡ ಕಾರಣ ಇಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ರಾ.ಹೆ.ಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಈಗಾಗಲೇ ಹಲವೆಡೆ ಅಭಿವೃದ್ಧಿ ಕಾಮಗಾರಿಗಳು ನಡೆಸಲಾಗುತ್ತಿದೆ. ಈ ಕಾಮಗಾರಿ ಯೋಜನೆಯಂತೆಯೇ ಮುಂದುವರಿಯಲಿದೆ. ಯಾವುದೇ ಬದಲಾವಣೆ ಇಲ್ಲ ಎಂದರು.

ಹಣ ವಿನಿಯೋಗ ಎಷ್ಟು?
ರಾಜ್ಯ ಹಣಕಾಸು ನಿಧಿಯಿಂದ 2024-25ನೇ ಸಾಲಿನಲ್ಲಿ 216 ಲ.ರೂ. ಹಾಗೂ 15ನೇ ಹಣಕಾಸು ನಿಧಿಯಿಂದ 572 ಲ.ರೂ. ಅನುದಾನ ಬಂದಿದೆ ಎಂದು ಸದಸ್ಯೆ ಸುಮಿತ್ರಾ ನಾಯಕ್‌ ಪ್ರಶ್ನೆಗೆ ಪೌರಾಯುಕ್ತರು ಉತ್ತರಿಸಿದರು.

1 ಕೆಜಿ ತ್ಯಾಜ್ಯ ವಿಲೇವಾರಿಗೆ 32 ರೂ.!
ನಗರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಸ್ಯಾನಿಟರಿ ಹಾಗೂ ಬಯೋ ಮೆಡಿಕಲ್‌ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪಡುಬಿದ್ರಿಯ ಸಂಸ್ಥೆಯೊಂದಕ್ಕೆ ಕಾರ್ಯಾದೇಶ ನೀಡಲಾಗಿದೆ. ಅವರು ಪ್ರತಿನಿತ್ಯ ಉತ್ಪತ್ತಿಯಾಗುವ ಸ್ಯಾನಿಟರಿ ತ್ಯಾಜ್ಯ ವಿಲೇವಾರಿ ಮಾಡಿದ್ದು, ಈ ನವೆಂಬರ್‌ ತಿಂಗಳಲ್ಲಿ 14,535 ಕೆಜಿ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ಪ್ರತಿ ಕೆಜಿಗೆ 32 ರೂ.ನಂತೆ 4,29,816 ರೂ.ಬಿಲ್‌ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಕೃಷ್ಣ ರಾವ್‌ ಕೊಡಂಚ 1 ಕೆಜಿ ತ್ಯಾಜ್ಯ ವಿಲೇವಾರಿಗೆ 32 ರೂ. ತೆಗೆದುಕೊಳ್ಳುವುದು ಯಾವ ನಿಯಮ ಎಂದು ಪ್ರಶ್ನಿಸಿದರು. ಈ ಬಗ್ಗೆ ಇತರ ನಗರಗಳಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಸಲು ನಗರಸಭೆ ವ್ಯವಸ್ಥೆ ಕಲ್ಪಿಸಬೇಕೆಂದು ಎಲ್ಲ ಸದಸ್ಯರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next