Advertisement

ಮಂಗಳಮುಖಿಯರ ವಾಗ್ವಾದ; ಇಬ್ಬರು ಪಿಂಪ್‌ ಗಳ ಸೆರೆ

01:28 AM Dec 17, 2022 | Team Udayavani |

ಉಡುಪಿ: ಉಡುಪಿ ಸಿಟಿ ಬಸ್‌ ನಿಲ್ದಾಣ ಸಮೀಪ ಮಂಗಳಮುಖಿಯರನ್ನು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಕುರಿತ ದೂರಿನ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಅವರು ಸ್ವತಃ ತಾವೇ ಕಾರ್ಯಾಚರಣೆಗೆ ಇಳಿದು ಎಚ್ಚರಿಕೆ ನೀಡಿ ಇಬ್ಬರು ಮಧ್ಯವರ್ತಿ(ಪಿಂಪ್‌)ಗಳನ್ನು ವಶಕ್ಕೆ ಪಡೆದಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Advertisement

ನಗರದ ಸಿಟಿ ಬಸ್‌ ನಿಲ್ದಾಣ ಹಾಗೂ ಸರ್ವಿಸ್‌ ಬಸ್‌ ನಿಲ್ದಾಣದ ಸಮೀಪ ಅನೈತಿಕ ದಂಧೆಯಲ್ಲಿ ತೊಡಗಿಸಿಕೊಂಡಿರುವ ಕೆಲವು ಮಂಗಳಮುಖಿಯರು, ವಾಹನ ಗಳನ್ನು ಅಡ್ಡ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ದಾರಿ ದೀಪವನ್ನು ಒಡೆದು ಹಾಕಿದ್ದಲ್ಲದೆ ಜನರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಡರಾತ್ರಿ ಪೊಲೀಸರು ಈ ಕಾರ್ಯಾಚರಣೆ ಮಾಡಿದ್ದಾರೆ.

ಮಂಗಳಮುಖಿಯರ ವಾಗ್ವಾದ
ಎಸ್ಪಿ ಎಂಬುದನ್ನು ತಿಳಿಯದ ಕೆಲವು ಮಂಗಳಮುಖಿಯರು ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಎಲ್ಲರನ್ನೂ ಚದುರಿಸಿದರು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರು ಈ ವೇಳೆ ವೀಡಿಯೋ ಚಿತ್ರೀಕರಣ ಮಾಡಿದ್ದು, ಇದಕ್ಕೆ ಮಂಗಳಮುಖಿಯರು ಆಕ್ಷೇಪ ಹಾಕಿದ ಘಟನೆಯೂ ನಡೆಯಿತು. ಈ ವೇಳೆ ಸಾರ್ವಜನಿಕರೂ ಪೊಲೀಸರಿಗೆ ನೆರವಾದರು.

ಇಬ್ಬರು ವಶಕ್ಕೆ
ಗ್ರಾಹಕರನ್ನು ಆಟೋರಿಕ್ಷಾದಲ್ಲಿ ಕರೆ ತಂದು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಇಬ್ಬರು ಮಧ್ಯವರ್ತಿ(ಪಿಂಪ್‌)ಗಳಾದ ಪಿತ್ರೋಡಿಯ ಪ್ರದೀಪ್‌ ಹಾಗೂ ಬೆಳಪುವಿನ ಕಿರಣ್‌ ನನ್ನು ಪೊಲೀಸರು ವಶಕ್ಕೆ ಬಂಧಿಸಿದ್ದಾರೆ.

ಸಾರ್ವಜನಿಕರಿಗೆ ಉಪಟಳ
ಉಡುಪಿ ನಗರದ ಸಿಟಿ ಬಸ್‌ ತಂಗುದಾಣ, ಸರ್ವಿಸ್‌ ಬಸ್‌ ತಂಗುದಾಣ, ಕರಾವಳಿ ಬೈಪಾಸ್‌ಗಳಲ್ಲಿ ಲೈಂಗಿಕ ಕಾರ್ಯಕರ್ತರು ಹಾಗೂ ಮಂಗಳಮುಖಿಯರು ಅಸಭ್ಯ ರೀತಿಯಲ್ಲಿ ವರ್ತಿಸುವ ಕಾರಣ ಸಾರ್ವಜನಿಕರಿಗೆ ರಾತ್ರಿ ವೇಳೆ ನಗರದಲ್ಲಿ ಓಡಾಡಲು ಕಷ್ಟವಾಗುತ್ತಿವೆ ಎಂದು ಸಾರ್ವಜನಿಕ ವಲಯದಲ್ಲಿ ಹಲವಾರು ದೂರುಗಳು ಕೇಳಿಬಂದಿತ್ತು ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾಗಿ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Advertisement

ಪೊಲೀಸ್‌ ತುಕಡಿ ನಿಯೋಜನೆ
ಪೊಲೀಸರು ಮಂಗಳಮುಖಿಯರಿಂದ ಮುಚ್ಚಳಿಕೆ ಬರೆಯಿಸಿ ಕೊಂಡಿದ್ದಾರೆ. ಸೂಕ್ತ ಎಚ್ಚರಿಕೆ ಕ್ರಮವಾಗಿ ಶುಕ್ರವಾರ ಸಿಟಿ ಬಸ್‌ ನಿಲ್ದಾಣದ ಸಮೀಪದಲ್ಲಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

ಎಚ್ಚರಿಕೆ ನೀಡಿದರೂ ಉಲ್ಲಂಘನೆ
ನಗರದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗುವವರಿಗೆ ಈ ಹಿಂದೆಯೂ ಎಚ್ಚರಿಕೆ ನೀಡಲಾಗಿತ್ತು. 2 ತಿಂಗಳ ಹಿಂದಷ್ಟೇ ಅಂದಿನ ನಗರಠಾಣೆಯ ಇನ್‌ಸ್ಪೆಕ್ಟರ್‌ ಪ್ರಮೋದ್‌ ಕುಮಾರ್‌ ಅವರು ಅನಿರೀಕ್ಷಿತವಾಗಿ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದರು. ಅದರೂ ಈ ಘಟನೆಗಳು ಮರುಕಳಿಸುತ್ತಿರುವುದು ಚರ್ಚೆಗೆ ಕಾರಣವಾಗುತ್ತಿದೆ. ಅಲ್ಲದೆ ಸ್ಥಳೀಯ ಲಾಡ್ಜ್  ಗಳಲ್ಲಿ ವೇಶ್ಯಾವಾಟಿಕೆಗಳು ನಡೆಯುತ್ತಿರುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿದ್ದು, ಮುಂದಿನ ದಿನದಲ್ಲಿ ಆ ಬಗ್ಗೆಯೂ ಗಮನಹರಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next