Advertisement

Udupi: ನೇಜಾರು ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಚೌಗುಲೆ ಹಾಜರು

02:10 AM Nov 21, 2024 | Team Udayavani |

ಉಡುಪಿ: ವರ್ಷದ ಹಿಂದೆ ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್‌ ಚೌಗುಲೆ ಪರ ವಕೀಲರು ತಮ್ಮ ವಕಾಲತ್ತನ್ನು ವಾಪಸು ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿಗದಿಯಾಗಿದ್ದ ಸಾಕ್ಷಿಗಳ ವಿಚಾರಣೆ ನ. 21ಕ್ಕೆ ಮುಂದೂಡಲಾಗಿದೆ.

Advertisement

ಅ. 24ರಂದು ನ್ಯಾಯಾಲಯದ ಆದೇಶದಂತೆ ನ. 20ರಂದು 1 ಹಾಗೂ 2 ಮತ್ತು ನ. 21ರಂದು 3 ಹಾಗೂ 4 ನೇ ಸಾಕ್ಷಿಗಳು ವಿಚಾರಣೆಗೆ ಹಾಜರಾಗುವಂತೆ ದಿನಾಂಕ ನಿಗದಿಪಡಿಸಲಾಗಿತ್ತು. ಅದರಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ಪ್ರವೀಣ್‌ ಚೌಗುಲೆಯನ್ನು ಬುಧವಾರ ಉಡುಪಿ ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು.

ತನಿಖಾಧಿಕಾರಿ ಮಲ್ಪೆ ಸಿಪಿಐ ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಆರೋಪಿಯನ್ನು ಹಾಜರುಪಡಿಸಲಾಯಿತು. ಈ ಸಂದರ್ಭ ಆರೋಪಿ ಪರ ವಕೀಲರು, ವಕಾಲತ್ತನ್ನು ವಾಪಸು ಪಡೆದುಕೊಳ್ಳುತ್ತೇವೆ ಎಂದು ಕೋರ್ಟಿಗೆ ತಿಳಿಸಿದರು. ಅದಕ್ಕೆ ಆರೋಪಿ ಚೌಗುಲೆ, ನನ್ನ ಪತ್ನಿ ಹೊಸ ವಕೀಲರನ್ನು ನೇಮಕ ಮಾಡಲಿದ್ದಾರೆ ಎಂದರು. ಕೂಡಲೇ ವಕೀಲರನ್ನು ನೇಮಕ ಮಾಡುವಂತೆ ನ್ಯಾಯಾಧೀಶ ಎ. ಸಮೀವುಲ್ಲಾ  ಅವರು ಆರೋಪಿಗೆ ಸೂಚಿಸಿದರು. ಕೊನೆ ಕ್ಷಣದಲ್ಲಿ ಆರೋಪಿ ಚೌಗುಲೆ ಪರ ವಕೀಲರು ವಕಾಲತ್ತು ವಾಪಸು ಪಡೆದಿರುವುದಕ್ಕೆ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್‌ ಆಳ್ವ ಆಕ್ಷೇಪ ಸಲ್ಲಿಸಿದರು.

ಬುಧವಾರ ನಡೆಯಬೇಕಾಗಿದ್ದ ಸಾಕ್ಷಿಗಳ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಚೌಗುಲೆಯನ್ನು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಹಿರಿಯಡಕ ಜೈಲಿಗೆ ಕರೆದೊಯ್ಯಲಾಗಿದೆ. ಇದೇ ವೇಳೆ ಆತ ಪರಪ್ಪನ ಆಗ್ರಹಾರದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡ ಘಟನೆಯೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next