Advertisement

Udupi: ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ಮುಸುಕುಧಾರಿಗಳು

12:31 AM Aug 03, 2024 | Team Udayavani |

ಉಡುಪಿ: ಉಡುಪಿಯ ಬ್ರಹ್ಮಗಿರಿಯಲ್ಲಿರುವ ಮೂರು ಅಪಾರ್ಟ್‌ಮೆಂಟ್‌ಗಳಿಗೆ 4ರಿಂದ 5 ಮಂದಿ ಮುಸುಕುಧಾರಿಗಳ ತಂಡವು ಮಾರಕಾಯುಧಗಳೊಂದಿಗೆ ತೆರಳಿ ಕಳವು ಮಾಡಿದ ಘಟನೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಮಾತ್ರವಲ್ಲದೇ ಆತಂಕಕ್ಕೂ ಒಳಗಾಗುವಂತೆ ಮಾಡಿದೆ.

Advertisement

ಮುಸುಕುದಾರಿಗಳು ಮಾರಕಾಸ್ತ್ರ ಹಿಡಿದು ಒಳನುಗ್ಗುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಜು.31ರ ತಡರಾತ್ರಿ ಸುಮಾರು 3ರಿಂದ 3.30ರ ನಡುವೆ ಈ ಘಟನೆ ನಡೆದಿದೆ. ಮರುದಿನ ಬೆಳಗ್ಗೆ ಕಳವು ನಡೆದ ಬಗ್ಗೆ ಇತರ ಫ್ಲ್ಯಾಟ್‌ ನಿವಾಸಿಗಳು ಮಾತನಾಡಿಕೊಂಡಿದ್ದು, ಬಳಿಕ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮೂರು ಫ್ಲ್ಯಾಟ್‌ಗಳಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ಕಂಡುಬಂದಿವೆ.

ಖಾಲಿ ಫ್ಲ್ಯಾಟ್‌ಗಳೇ ಟಾರ್ಗೆಟ್‌
ಬ್ರಹ್ಮಗಿರಿಯ ಹೆದ್ದಾರಿ ಬದಿಯಲ್ಲಿ ರುವ ಮೂರು ಅಪಾರ್ಟ್‌ಮೆಂಟ್‌ಗಳಿಗೆ ಕಳ್ಳರು ನುಗ್ಗಿದ್ದಾರೆ. ಮೊದಲಿಗೆ ಹೆದ್ದಾರಿ ಹತ್ತಿರದ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಕಳ್ಳರು ಅನಂತರ ಇತರ ಎರಡು ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದಾರೆ. 3ನೇ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ ನಂಬರ್‌ 202ರ ಮುಖ್ಯದ್ವಾರದ ಬೀಗವನ್ನು ತುಂಡು ಮಾಡಿ ಒಳಪ್ರವೇಶಿಸಿದ್ದರು. ಆ ಫ್ಲ್ಯಾಟ್‌ನಲ್ಲಿದ್ದ ದಂಪತಿ 10 ದಿನಗಳ ಹಿಂದೆ ಮುಂಬಯಿಗೆ ತೆರಳಿದ್ದರು ಎನ್ನಲಾಗಿದೆ. ಪಕ್ಷದ ಫ್ಲ್ಯಾಟ್‌ನವರು ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಮನೆಯಲ್ಲಿ ಚಿನ್ನಾಭರಣ ಇರಲಿಲ್ಲ.

4ರಿಂದ 5 ಸಾವಿರ ನಗದು ಇತ್ತು ಎನ್ನಲಾಗಿದೆ. ಪೊಲೀಸರು ಪರಿಶೀಲಿಸಿದಾಗ ಕಪಾಟುಗಳೆಲ್ಲ ಚೆಲ್ಲಾಪಿಲ್ಲಿ ಆಗಿತ್ತು. ಲ್ಯಾಪ್‌ಟಾಪ್‌ ಇತ್ತಾದರೂ ಅದು ಹಾಗೆಯೇ ಇತ್ತು. ಇನ್ನೆರಡು ಫ್ಲ್ಯಾಟ್‌ನ ಬೀಗ ಮುರಿದು ಒಳಗ್ಗೆ ನುಗ್ಗಿದ ಕಳ್ಳರಿಗೆ ಅಲ್ಲಿ ಕಳ್ಳರಿಗೆ ನಗ ಅಥವಾ ನಗದು ದೊರೆತಿರಲಿಲ್ಲ ಎಂದು ತಿಳಿದುಬಂದಿದೆ.

ಮುಖ ಮುಚ್ಚಿದ್ದ ಕಳ್ಳರು
ನಾಲ್ವರು ವ್ಯಕ್ತಿಗಳು ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಫ್ಲ್ಯಾಟ್‌ಗಳಿಗೆ ನುಗ್ಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಎರಡು ಅಪಾರ್ಟ್‌ ಮೆಂಟ್‌ಗಳಲ್ಲಿದ್ದ ಖಾಲಿ ಫ್ಲ್ಯಾಟ್‌ಗೆ ನುಗ್ಗಿ ಇದೇ ರೀತಿ ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಮುಖ್ಯವಾಗಿ ಖಾಲಿ ಫ್ಲ್ಯಾಟ್‌ಗಳನ್ನೇ ಗುರಿಯಾಗಿಸಿಕೊಂಡು ಕೃತ್ಯ ನಡೆಸಿರುವ ಕಳ್ಳರಿಗೆ ಮಾಹಿತಿ ನೀಡಿದವರು ಯಾರು ಎಂಬುದೇ ಪ್ರಶ್ನೆಯಾಗಿದೆ. ಒಂದೇ ರಾತ್ರಿ ಕೆಲವೇ ತಾಸುಗಳ ಅವಧಿಯಲ್ಲಿ ಮೂರು ಅಪಾರ್ಟ್‌ ಮೆಂಟ್‌ಗಳಿಗೆ ನುಗ್ಗಿರುವುದರಿಂದ ಈ ಬಗ್ಗೆ ಮಾಹಿತಿ ಮೊದಲೇ ಮಾಹಿತಿ ಪಡೆದಿರುವ ಸಾಧ್ಯತೆ ಇದೆ.

Advertisement

ನಿದ್ದೆಗೆ ಜಾರಿದ ಭದ್ರತಾ ಸಿಬಂದಿ!
ಅನಾರೋಗ್ಯ ಸಮಸ್ಯೆ ಇದ್ದ ಕಾರಣ 3ನೇ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬಂದಿ ಮಾತ್ರೆ ತೆಗೆದುಕೊಂಡು ಮಲಗಿದ್ದರು. ಅವರಿಗೆ ನಿದ್ರೆ ಆವರಿಸಿದ ಕಾರಣ ಕಳ್ಳರ ಕರಾಮತ್ತು ತಿಳಿಯಲಿಲ್ಲ ಎನ್ನಲಾಗುತ್ತಿದೆ. ಉಳಿದ ಅಪಾರ್ಟ್‌ ಮೆಂಟ್‌ಗಳಲ್ಲಿಯೂ ಭದ್ರತಾ ಸಿಬಂದಿ ಯಿದ್ದು, ಈ ವಿಚಾರ ಅವರಿಗೆ ಯಾಕೆ ತಿಳಿಯಲಿಲ್ಲ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಕಳ್ಳತನ ನಡೆಸಿದ ಬಳಿಕ ಕಳ್ಳರು ಯಾವ ಮಾರ್ಗದಲ್ಲಿ ಹೋಗಿರಬಹುದು ಎಂಬ ನಿಟ್ಟಿನಲ್ಲೂ ತನಿಖೆ ಸಾಗಿದೆ.

ವಿಕೃತಿ ಮೆರದ ಕಳ್ಳರು
ಕಳ್ಳತನಕ್ಕೆ ಬಂದವರು ಫ್ಲ್ಯಾಟ್‌ನ ಬೀಗ ಒಡೆದು ಒಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಮಾತ್ರವಲ್ಲದೇ ಮನೆಯೊಳಗೆ ಗುಟ್ಕ, ಜರ್ದವನ್ನು ತಿಂದು ಉಗುಳಿ ವಿಕೃತಿ ಮೆರೆದಿದ್ದರು. ಸ್ಥಳದಲ್ಲಿ ಸ್ವಲ್ಪ ರಕ್ತ ಕಂಡುಬಂದಿದ್ದು, ಬೀಗ ಒಡೆಯುವ ವೇಳೆ ಗಾಯ ವಾಗಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

“ಬ್ರಹ್ಮಗಿರಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಇನ್‌ಸ್ಪೆಕ್ಟರ್‌ ನೇತೃತ್ವದ ವಿಶೇಷ ತಂಡ ರಚನೆ ಮಾಡಲಾಗಿದೆ. ಅಪಾರ್ಟ್‌ ಮೆಂಟ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಹಾಗೂ ಇತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ವಿಶೇಷ ತನಿಖೆ ನಡೆಸುತ್ತಿದ್ದಾರೆ.” -ಡಾ| ಕೆ.ಅರುಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ವಿವಿಧ ಮಾದರಿಯ ಕಳ್ಳತನ
ಜಿಲ್ಲೆಯಲ್ಲಿ ವಿವಿಧ ನಮೂನೆಯ ಕಳ್ಳತನ ಪ್ರಕರಣಗಳು ವರದಿ ಯಾಗುತ್ತಿವೆ. ವಾರದ ಹಿಂದೆಯಷ್ಟೇ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬೆಳ್ಳಂಬೆಳಗ್ಗೆ ಎರಡು ಕಾರುಗಳಲ್ಲಿ ಆಗಂತುಕರು ಬಂದಿದ್ದರು. ಅದರಲ್ಲಿ ಓರ್ವ ಪೊಲೀಸ್‌ ರೀತಿ ಡ್ರೆಸ್‌ ಹಾಕಿದ್ದ. ಮನೆಯವರು ಬಾಗಿಲು ತೆಗೆಯದೇ ಇದ್ದಾಗ ವಾಪಸ್‌ ಹೋಗಿದ್ದರು. ಈ ಘಟನೆ ಮರೆಮಾಚುವ ಮುನ್ನವೇ ಉಡುಪಿ ನಗರಭಾಗದಲ್ಲಿ ಮುಸುಕುಧಾರಿಗಳಿಂದ ಕೃತ್ಯ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಅನತಿ ದೂರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಹಾಗೂ ರಾ.ಹೆ.ಗೆ ಸನಿಹದಲ್ಲಿಯೇ ಈ ಘಟನೆ ನಡೆದಿರುವುದರಿಂದ ಸ್ಥಳೀಯರೂ ಆತಂಕಗೊಂಡಿದ್ದಾರೆ.

ಸರಣಿ ಪ್ರಕರಣದ ಬಳಿಕವೂ ಎಚ್ಚೆತ್ತುಕೊಂಡಿಲ್ಲ
ಉಡುಪಿ-ಮಣಿಪಾಲ ಮುಖ್ಯರಸ್ತೆಯಲ್ಲಿ ನಡೆದ ಗ್ಯಾಂಗ್‌ವಾರ್‌ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಇದಾದ ಬಳಿಕ ನಗರದೊಳಗೆ ತಲವಾರು ದಾಳಿ ನಡೆದಿತ್ತು. ಮಣೂರಿನಲ್ಲಿ ಉದ್ಯಮಿ ಮನೆಗೆ ನುಗ್ಗಲು ಯತ್ನ ಹೀಗೆ ಸರಣಿ ಪ್ರಕರಣ ನಡೆಯುತ್ತಿದ್ದರೂ ಪೊಲೀಸರು ಎಚ್ಚೆತ್ತುಕೊಳ್ಳುತ್ತಿಲ್ಲ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಉಡುಪಿ ನಗರಸಭೆ ವ್ಯಾಪ್ತಿಯೊಳಗೆಯೇ ಸರಿಯಾಗಿ ಗಸ್ತು ನಡೆಯದಿದ್ದರೆ ಇನ್ನು ಗ್ರಾಮೀಣ ಭಾಗದಲ್ಲಿ ಹೇಗಿರಲು ಸಾಧ್ಯ? ಪೊಲೀಸ್‌ ಗಸ್ತು ಹೆಚ್ಚಿಸಬೇಕು ಎಂಬ ನಾಗರಿಕರ ಆಕ್ರೋಶಕ್ಕೂ ಇಲಾಖೆ ಬೆಲೆ ಕೊಟ್ಟಿಲ್ಲ. ಪೊಲೀಸ್‌ ಇಲಾಖೆ ಇನ್ನಾದರೂ ಬೀಟ್‌ ವ್ಯವಸ್ಥೆಯನ್ನು ಸರಿಮಾಡಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next