ಇಂದು, ಅ. 6 ಪ್ರೊ| ಯು.ಎಲ್. ಆಚಾರ್ಯರ ಜನ್ಮದಿನದ ಶತಮಾನೋತ್ಸವ. “ಆಚಾರ್ಯ’ ಎಂಬುದಕ್ಕೆ ಗುರು ಎಂಬರ್ಥವಿದೆ. ಅಂಥ ಶ್ರೇಷ್ಠ ಗುರುಗಳಲ್ಲಿ ಒಬ್ಬರಾಗಿದ್ದವರು ಯು.ಎಲ್. ಆಚಾರ್ಯರು. ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗವು ಅವರ ನೆನಪಿಗಾಗಿ ವಿಶೇಷ ಅಂಚೆ ಕವರನ್ನು ಹೊರತರುತ್ತಿದೆ.
ಉಡುಪಿ ಎಂಜಿಎಂ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿ ಸಿದ್ದ ಪ್ರೊ| ಉಡುಪಿ ಲಕ್ಷ್ಮೀನಾರಾಯಣ ಆಚಾರ್ಯರು ಯು. ಎಲ್. ಆಚಾರ್ಯರೆಂದೇ ಚಿರಪರಿಚಿತರು. ಎಂಜಿಎಂ ಕಾಲೇಜು ಆರಂಭದಿಂದಲೇ (1951) ನಿವೃತ್ತಿಯಾಗುವ ವರೆಗೂ (1975) ವಿಭಾಗವನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರು.
ವಿದ್ಯಾರ್ಥಿಗಳಿಗೆ ಪ್ರೀತಿಪಾತ್ರರಾಗಿದ್ದ ಆಚಾರ್ಯರು ಪ್ರತೀ ವಿದ್ಯಾರ್ಥಿಯ ಹೆತ್ತವರೊಂದಿಗೆ ಸಂಪರ್ಕ ವನ್ನು ಇರಿಸಿಕೊಂಡಿದ್ದರು. ನೂರಾರು ವಿದ್ಯಾರ್ಥಿಗಳು ಜೀವನದುದ್ದಕ್ಕೂ ಆಚಾರ್ಯರನ್ನು ಸ್ಮರಿಸಿ ಕೊಳ್ಳುತ್ತಿದ್ದರು. ಭೌತಶಾಸ್ತ್ರದ ಉದ್ದಾಮ ಪ್ರಾಧ್ಯಾಪಕರಾಗಿ, ಆಧುನಿಕ ವಿಜ್ಞಾನಿಗಳ ಸಾಲಿನಲ್ಲಿ ಸೇರಿದವರಾದರೂ ಜ್ಯೋತಿಃಶಾಸ್ತ್ರದಲ್ಲಿಯೂ ಅದರಲ್ಲೂ ವಿಶೇಷವಾಗಿ ಫಲಜೋತಿಷದಲ್ಲಿ ಅವರದು ಎತ್ತಿದಕೈ ಎನ್ನುವುದು ವೈಶಿಷ್ಟé. ಭೌತಶಾಸ್ತ್ರ ಜ್ಞಾನವೂ ಫಲ ಜ್ಯೋತಿಷ ಜ್ಞಾನವೂ ವೈಚಾರಿಕವಾಗಿ ವಿರುದ್ಧ ಎಂದು ಕಂಡು ಬರುವಾಗ ಆಚಾರ್ಯರು ಎರಡರಲ್ಲೂ ನಿಸ್ಸೀಮರಾಗಿದ್ದರು. ಇಂಗ್ಲಿಷ್‌ನಷ್ಟೇ ಕನ್ನಡದಲ್ಲಿಯೂ ಅಧಿಕಾರವಾಣಿಯಿಂದ ಮಾತನಾಡ ಬಲ್ಲವರು, ಬರೆಯಬಲ್ಲವರಾಗಿದ್ದರು. ವಿದ್ಯಾರ್ಥಿಗಳಿಗೆ, ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ವಿಜ್ಞಾನ, ಗಣಿತವನ್ನು ಕಲಿಸುತ್ತಿದ್ದುದು ಅವರ ಇನ್ನೊಂದು ವೈಶಿಷ್ಟé. ಅವರು ಬರೆದ ಸುಲಭ ವಿಜ್ಞಾನದ ಪುಸ್ತಕಗಳನ್ನು ಮೈಸೂರು ವಿ.ವಿ.ಯ ಪ್ರಸಾರಾಂಗವು ಪ್ರಕಟಿಸಿದೆ. ಡಾ| ಶಿವರಾಮ ಕಾರಂತರ “ವಿಜ್ಞಾನ ಪ್ರಪಂಚ’ದ ಭೌತ ವಿಜ್ಞಾನ, ಗಣಿತ ವಿಷಯಗಳ ಕೆಲವು ವಿಭಾಗಗಳನ್ನು ಬರೆದು ಸಹಕರಿಸಿದ್ದನ್ನು ಕಾರಂತರು ಸ್ಮರಿಸಿಕೊಂಡಿರುವುದನ್ನು ಆಚಾರ್ಯರ ಸಹೋದ್ಯೋಗಿಯಾಗಿದ್ದ ಡಾ| ಎನ್.ಟಿ. ಭಟ್ ಉಲ್ಲೇಖೀಸುತ್ತಾರೆ.
ತಮ್ಮ ಜೀವನಚರಿತ್ರೆಯನ್ನು “ತೇಹಿ ನೋ ದಿವಸಾ ಗತಾ’ ಹೆಸರಿನಲ್ಲಿ ಕನ್ನಡದಲ್ಲಿ, “ಮೆಮೊರೀಸ್ ಆಫ್ ಬೇಗಾನ್ ಡೇಸ್’ ಶೀರ್ಷಿಕೆಯಲ್ಲಿ ಇಂಗ್ಲಿಷ್‌ನಲ್ಲಿ ಪ್ರಕಟಿಸಿದ್ದಾರೆ. ಇಂಗ್ಲಿಷ್‌ನ ಎರಡು ಪ್ರಖ್ಯಾತ ಗ್ರಂಥಗಳನ್ನು “ನಡುಹಗಲಿನ ಕಗ್ಗತ್ತಲೆ’, “ಅವ್ಯಕ್ತ ಮಾನವ’ ಎಂಬ ಹೆಸರಿನಲ್ಲಿ ಕು.ಶಿ. ಹರಿದಾಸ ಭಟ್ಟರ ಜತೆ ಸೇರಿ ಕನ್ನಡಕ್ಕೆ ಅನುವಾದಿಸಿರುವುದು ಆಚಾರ್ಯರ ಇನ್ನೊಂದು ಸಾಧನೆ.
ಯು.ಎಲ್. ಆಚಾರ್ಯರ ಜ್ಯೋತಿಷಜ್ಞಾನ ಅಸಾ ಧಾರಣವಾದುದು. ಬಿ.ವಿ. ಕಾರಂತರು ಭೋಪಾಲ ದಲ್ಲಿ ಪ್ರಕರಣವೊಂದರಲ್ಲಿ ಸಿಲುಕಿದಾಗ ಕು.ಶಿ. ಹರಿದಾಸ ಭಟ್ಟರು ಸಹೋದ್ಯೋಗಿ ಪ್ರೊ| ಹೆರಂಜೆ ಕೃಷ್ಣ ಭಟ್ಟರನ್ನು ಆಚಾರ್ಯರಲ್ಲಿಗೆ ಕಳುಹಿಸಿದರು. ಯಾರ ವಿಷಯವೆಂದು ಹೇಳಿರಲಿಲ್ಲ. ಜಾತಕ ಇಲ್ಲದ ಕಾರಣ ಒಂದು ಸಂಖ್ಯೆ ಹೇಳಲು ತಿಳಿಸಿದರು. ತತ್‌ಕ್ಷಣ ವ್ಯಕ್ತಿ ಜೈಲಿನಲ್ಲಿದ್ದಾನೆ ಎಂಬ ಉದ್ಗಾರ ಬಂತು. ಕು.ಶಿ. ಹರಿದಾಸ ಭಟ್ಟರು ಭೋಪಾಲಕ್ಕೆ ತೆರಳುವವರಿದ್ದರು. ಈ ಕುರಿತು ಕೇಳಿದಾಗ “ಬೇಡ’ ಎಂದಿದ್ದರು. ಅವರ “ಮಳೆ ಜ್ಞಾನ’ ಅದ್ಭುತವಾಗಿತ್ತು. ಮಳೆಗಾಲದಲ್ಲಿ ದಿನ ನಿಗದಿ ಮಾಡಿಕೊಟ್ಟಾಗಲೂ ಮಳೆ ಬರುವುದಿಲ್ಲ ಎಂದು ಹೇಳಿದರೆ ಮಳೆ ಬರುತ್ತಿರಲಿಲ್ಲ. ಉಡುಪಿಯಲ್ಲಿ ಒಮ್ಮೆ ಮಳೆ ಬಂದಿರಲಿಲ್ಲ. ಈ ಬಗ್ಗೆ ಕೇಳಿದಾಗ ಅನಂತೇಶ್ವರ ದೇವಸ್ಥಾನದ ಕೆಲಸಕ್ಕಾಗಿ ಹಾಕಿದ್ದ ಅಟ್ಟಳಿಗೆಯನ್ನು ತೆಗೆಯಲು ಹೇಳಿ ಎಂದರು. ಅಟ್ಟಳಿಗೆ ತೆಗೆದದ್ದೇ ತಡ, ಮಳೆ ಬಂದಿತ್ತು. ಹೀಗೆ ಅನೇಕ ನಿಖರ ಮಾತುಗಳು ಅವರದ್ದಾಗಿದ್ದವು. ಏತನ್ಮಧ್ಯೆ ಹೋಮಿಯೋಪತಿ ಜ್ಞಾನವಿದ್ದು, ಇದ ರಿಂದ ಪ್ರಯೋಜನ ಪಡೆದವರೂ ಅನೇಕರಿದ್ದರು’ ಎಂಬುದನ್ನು ಕೃಷ್ಣ ಭಟ್ ಸ್ಮರಿಸಿಕೊಳ್ಳುತ್ತಾರೆ.
ಆಚಾರ್ಯತ್ರಯರಲ್ಲಿ ಗಣಿತ ಪ್ರಾಧ್ಯಾಪಕ ಪ್ರೊ| ಬಿ.ವಿ. ಆಚಾರ್ಯ ಒಬ್ಬರು. ಬಿ.ವಿ. ಆಚಾರ್ಯರೂ ಜೋತಿಷ ಜ್ಞಾನ ಹೊಂದಿದ್ದರು. ಇವರಿಬ್ಬರೂ ವೈಜ್ಞಾನಿಕ ಚಿಂತನೆ ಯವರಾದ ಕಾರಣ ಪರಿಹಾರವನ್ನು ಸೂಚಿಸು ವಾಗ ವ್ಯಕ್ತಿಯು ಸ್ವತಃ ಮಾಡುವ ಪರಿಹಾರವನ್ನೇ ಸೂಚಿಸುತ್ತಿದ್ದರು. ಉದಾಹರಣೆಗೆ, ವಿಷ್ಣುಸಹಸ್ರನಾಮ ಪಾರಾಯಣ, ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಇತ್ಯಾದಿ. ಇದಕ್ಕೆ ಕಾರಣ ತೊಂದರೆ ಬರುವುದು ಕರ್ಮ ಫಲದಿಂದ, ಕರ್ಮ ಫಲ ಸವೆಯಬೇಕಾದರೆ ಸ್ವತಃ ಪರಿಶ್ರಮ ಪಡಬೇಕೆಂದೂ, ಹಣ ಖರ್ಚು ಮಾಡಿ ಇನ್ನೊಬ್ಬರಿಂದ ಮಾಡಿಸುವ ಕರ್ಮಕ್ಕೆ ಒತ್ತು ನೀಡದೆ ಇರುವುದೂ ಅವರಿಬ್ಬರ ನಿಲುವಾಗಿತ್ತು ಎನ್ನುವುದನ್ನು ಬಿ.ವಿ. ಆಚಾರ್ಯರ ಮೊಮ್ಮಗ ಮಹಿತೋಷ ಆಚಾರ್ಯ ಬೆಟ್ಟು ಮಾಡುತ್ತಾರೆ.
“ಎಬಿಸಿ ಆಫ್ ಫಿಸಿಕ್ಸ್’ ಎಂಬ ಪ್ರಸಿದ್ಧ ಪುಸ್ತಕವನ್ನು “ಭೌತಶಾಸ್ತ್ರದ ಅಆಇಈ’ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದರು. “ಇಂತಹ ಒಬ್ಬ ಭೌತಶಾಸ್ತ್ರಜ್ಞನ ಬಳಿ ಅದೆಷ್ಟೋ ಆಧುನಿಕ ವಿಜ್ಞಾನಿಗಳು, ಚಿಂತಕರು ಗುಟ್ಟಾಗಿ ಬಂದು ಜಾತಕ ತೋರಿಸುತ್ತಿದ್ದುದು ನನಗೆ ತಿಳಿದಿದೆ’ ಎಂದು ಭೌತಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಡಾ| ಎ.ಪಿ. ಭಟ್ ಹೇಳುತ್ತಾರೆ.
ಹಲವು ವಿಶಿಷ್ಟ ಗುಣ ಹೊಂದಿರುವುದರಿಂದಲೇ ಯು.ಎಲ್. ಆಚಾರ್ಯರು ಒಬ್ಬ ಅವಧೂತ, ವಿಭೂತಿಪುರುಷ ಎಂದು ಡಾ| ಎನ್.ಟಿ. ಭಟ್ ಬಣ್ಣಿಸುತ್ತಾರೆ.
ಯು. ಎಲ್. ಆಚಾರ್ಯರ ಬಹುಮುಖೀ ವ್ಯಕ್ತಿತ್ವವನ್ನು ಚಿರಸ್ಥಾಯಿಯಾಗಿಸಲು ಮಂಗಳೂರು ಅಂಚೆ ವಿಭಾಗವು ಮಂಗಳೂರು ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿಯಲ್ಲಿ ವಿಶೇಷ ಲಕೋಟೆಯನ್ನು ಅ. 6ರ ಸಂಜೆ 4.30ಕ್ಕೆ ಬಿಡುಗಡೆಗೊಳಿಸುತ್ತಿದೆ.