ಉಡುಪಿ: ಶ್ರೀಕೃಷ್ಣ ಮಠದಲ್ಲಿ ನ. 20ರಿಂದ ನಾಲ್ಕು ದಿನಗಳ ಕಾಲ ಲಕ್ಷದೀಪೋತ್ಸವ ನಡೆಯಲಿದೆ. ಈ ಪ್ರಯುಕ್ತ ನ. 20ರ ಮಧ್ಯಾಹ್ನ ಅನ್ನ ಪ್ರಸಾದದ ಬಳಿಕ 1.30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಧಾರ್ಮಿಕ ಸಭೆ, 2.30ಕ್ಕೆ ರಥ ಬೀದಿಯಲ್ಲಿ ಭಜನ ಪ್ರದಕ್ಷಿಣೆ, 3.30ಕ್ಕೆ ಮಧ್ವ ಸರೋವರದ ಸುತ್ತ ಕುಳಿತು ಸಾಮೂಹಿಕ ಗೋಷ್ಠಿ ಗಾನದ ‘ಪ್ರಬೋಧೋತ್ಸವ’ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಡಿ. 2-6: ಧರ್ಮಸ್ಥಳ ಲಕ್ಷದೀಪೋತ್ಸವ
ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಡಿ. 2ರಿಂದ 6ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನದೊಂದಿಗೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿದಿನ ರಾತ್ರಿ 9ರಿಂದ ಡಿ. 2ರಂದು ಹೊಸಕಟ್ಟೆ ಉತ್ಸವ, ಡಿ. 3ರಂದು ಕೆರೆಕಟ್ಟೆ ಉತ್ಸವ, ಡಿ. 4ರಂದು ಲಲಿತೋದ್ಯಾನ ಉತ್ಸವ, ಡಿ. 5ರಂದು ಕಂಚಿಮಾರುಕಟ್ಟೆ ಉತ್ಸವ, ಡಿ. 6ರಂದು ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ. ಡಿ. 5ರಂದು ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾಭವನ ದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಗುಜರಾತ್‌ನ ಸೂರ್ಯಪೀಠದ ಶ್ರೀ ಜಗದ್ಗುರು ಸೂರ್ಯಾಚಾರ್ಯ ಶ್ರೀ ಕೃಷ್ಣ ದೇವನಂದಗಿರಿ ಮಹಾರಾಜ್ ಉದ್ಘಾಟಿಸಲಿದ್ದು, ಶಿಕ್ಷಣ ತಜ್ಞ ಎಂ. ಮಮ್ತಾಜ್ ಅಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ.
ಡಿ. 6ರಂದು ಸಂಜೆ 5ಕ್ಕೆ ಅಮೃತ ವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ ಸಂಕೇಶ್ವರ ಅವರು ಉದ್ಘಾಟನೆ ಹಾಗೂ ಸುವರ್ಣ ಸಂಚಯ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ವಿಮರ್ಶಕ ಪ್ರೊ| ಟಿ.ಪಿ. ಅಶೋಕ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸುಗಮ ಸಂಗೀತ ಜರಗಲಿದೆ. ಜತೆಗೆ ಡಿ. 2ರಿಂದ 6ರ ವರೆಗೆ ವಸ್ತು ಪ್ರದರ್ಶನಮಂಟಪದಲ್ಲಿ ಪ್ರತಿದಿನ ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಡಿ. 4ರಂದು ಸಂಜೆ 3ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿ. 7ರಂದು ಸಂಜೆ 6.30ಕ್ಕೆ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ,
ಯಕ್ಷ- ಜಿನ- ಗಾನ- ವೈಭವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.