Advertisement

ಶ್ರೀಕೃಷ್ಣ ಮಠ: ಸ್ವರ್ಣ ಶಿಖರಗಳ ಪ್ರತಿಷ್ಠೆ, ಅಭಿಷೇಕ ಸಂಪನ್ನ

11:31 AM Jun 08, 2019 | Vishnu Das |

ಉಡುಪಿ: ಶ್ರೀಕೃಷ್ಣ ಮಠದ ಸುವರ್ಣ ಗೋಪುರದ ಸಮರ್ಪಣೋತ್ಸವದ ಅಂಗವಾಗಿ ಗುರುವಾರ ಮೂರು ಸ್ವರ್ಣ ಶಿಖರಗಳ ಪ್ರತಿಷ್ಠೆ, 1008 ಕಲಶಗಳ ಅಭಿಷೇಕ ನಡೆಯಿತು.

Advertisement

ಸ್ವರ್ಣ ಗೋಪುರಕ್ಕೆ ಅಟ್ಟಳಿಗೆ ಕಟ್ಟಿ ಅಲ್ಲಿ ನಿಂತು ವಿವಿಧ ಮಠಾಧೀಶರು ಮೂರೂ ಶಿಖರಗಳಿಗೆ ಅಭಿಷೇಕ ಮಾಡಿದರು. ಪರ್ಯಾಯ ಶ್ರೀ ಪಲಿಮಾರು ಮಠದ ಹಿರಿಯ, ಕಿರಿಯ, ಶ್ರೀ ಪೇಜಾವರ ಮಠದ ಹಿರಿಯ, ಕಿರಿಯ, ಶ್ರೀ ಅದಮಾರು ಮಠದ ಹಿರಿಯ, ಕಿರಿಯ, ಶ್ರೀ ಕೃಷ್ಣಾಪುರ, ಶ್ರೀ ಕಾಣಿಯೂರು, ಶ್ರೀ ಸೋದೆ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಗೋಶಾಲೆ ಎದುರು 1008 ಕಲಶಗಳ ಪೂಜೆಯನ್ನು ಪರ್ಯಾಯ ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿಗಳು ನಡೆಸಿದರು. ಎಲ್ಲರಿಗೂ ನೇರ ನೋಡಲು ಅವಕಾಶವಿಲ್ಲದ ಕಾರಣ ಟಿವಿ ಪರದೆ ಮೇಲೆ ವಿವಿಧೆಡೆ ಬಿತ್ತರಿಸಲಾಯಿತು. ಬೆಳಗ್ಗೆ ಸುಮಾರು 5.30ರಿಂದ ಆರಂಭಗೊಂಡ ಕಲಶಾಭಿಷೇಕ ಸುಮಾರು 9 ಗಂಟೆ ವರೆಗೆ ನಡೆಯಿತು. ಶಾಸಕ ಕೆ. ರಘುಪತಿ ಭಟ್‌ ಮೊದಲಾದವರು ಪಾಲ್ಗೊಂಡಿದ್ದರು.

ಶ್ರೀಕೃಷ್ಣ ಮಠದ ಹೊರಗೆ ಜಿಲ್ಲಾ ಭಜನ ಮಂಡಳಿ ಗಳ ಒಕ್ಕೂಟದಿಂದ ಭಜನೆ ನಡೆಯಿತು. ಭಜನ ಕಾರ್ಯಕ್ರಮವನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ ಅವರು ಉದ್ಘಾಟಿಸಿದರು.

Advertisement

ಅತಿ ಹಿರಿಯ- ಅತಿ ಕಿರಿಯ ಸ್ವಾಮಿಗಳು ಸಾಕ್ಷಿ
ಶಿಖರ ಅಭಿಷೇಕದಲ್ಲಿ 88 ವರ್ಷ ಪ್ರಾಯದ ಪೇಜಾವರ ಶ್ರೀಗಳು ಪಾಲ್ಗೊಂಡ ಹಿರಿಯ ರಾದರೆ ಇತ್ತೀಚೆಗೆ ಸನ್ಯಾಸಾಶ್ರಮ ಸ್ವೀಕರಿಸಿದ ಪಲಿಮಾರು ಮಠದ ಕಿರಿಯ ಯತಿಗಳು ಅತಿ ಕಿರಿಯರಾಗಿದ್ದರು.
ವರುಣಾಗಮನಬುಧವಾರ ರಾತ್ರಿಯೇ ಉಡುಪಿ ನಗರದಲ್ಲಿ ಮಳೆ ಬಂದಿತ್ತು. ಗುರುವಾರ ಬೆಳಗ್ಗೆ ಕಲಶಾಭಿಷೇಕ ನಡೆಯುವಾಗ ತುಂತುರು ವೃಷ್ಟಿ ಯಾಯಿತು.

ಸುವರ್ಣ ಗೋಪುರ ಸುವರ್ಣ ಚಿಂತನೆಗೆ ಪ್ರೇರಣೆ:ಅದಮಾರು ಶ್ರೀ
ಉಡುಪಿ, ಜೂ. 6: ಉಡುಪಿ ಶ್ರೀಕೃಷ್ಣನಿಗೆ ಸಮರ್ಪಣೆಯಾದ ಸುವರ್ಣ ಗೋಪುರ ಭಕ್ತರಲ್ಲಿ ಸುವರ್ಣ ಚಿಂತನೆಗೆ ಪ್ರೇರಣೆಯಾಗಲಿದೆ. ಆ ಮೂಲಕ ಉತ್ತಮ ಸಾಮಾಜಿಕ, ಆಧ್ಯಾತ್ಮಿಕ ಬದುಕು ರೂಪುಗೊಳ್ಳಲಿದೆ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಸುವರ್ಣ ಗೋಪುರ ಸಮರ್ಪಣೋತ್ಸವ ಪ್ರಯುಕ್ತ ಗುರುವಾರ ರಾಜಾಂಗಣದಲ್ಲಿ ಜರಗಿದ “ಧರ್ಮ ಗೋಪುರಂ’ನ ಅಧ್ಯಕ್ಷತೆ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಭಗವಂತನಿಗಾಗಿ ಮಾಡುವ ಕೆಲಸಗಳನ್ನು ಒಳ್ಳೆಯ ವರ್ಣ (ಮನಸ್ಸು)ದಿಂದ ಮಾಡಬೇಕು. ದೇವರಿಗೆ ಮಾಡು (ಛಾವಣಿ) ಮಾಡುವಾಗಲೂ ಒಳ್ಳೆಯ ವರ್ಣದಿಂದಲೇ ಮಾಡಬೇಕು. ಅಂಥ ಕಾರ್ಯ ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶರಿಂದ ನಡೆದಿದೆ. ಸುವರ್ಣ ಗೋಪುರದ ದರುಶನದಿಂದ ಉತ್ತಮ ಚಿಂತನೆಗಳು ದಿನನಿತ್ಯ ಬೆಳೆದಾಗ ಜೀವನ ಹಾಲುಸಕ್ಕರೆಯಂತಾಗುತ್ತದೆ ಎಂದು ಶ್ರೀಗಳು ಹೇಳಿದರು.

ನೀಡಿದ ದಾನ ವಾಪಸು ಪಲಿಮಾರು ಶ್ರೀಗಳು ಪಾಠ, ಪ್ರವಚನದ ಮೂಲಕ ಸಮಾಜಕ್ಕೆ ಸುವರ್ಣ(ಉತ್ತಮ ವಿಚಾರ)ವನ್ನು ದಾನ ಮಾಡಿದರು. ಅದನ್ನು ಭಕ್ತರು ಸುವರ್ಣ (ಚಿನ್ನ) ರೂಪದಲ್ಲಿ ವಾಪಸು ನೀಡಿದರು. ಪ್ರಾಮಾಣಿಕವಾಗಿ ದೇವರಿಗೆ ಅರ್ಪಿಸಿದರೆ ಅದನ್ನು ದೇವರು ಬೇರೊಂದು ರೂಪದಲ್ಲಿ ವಾಪಸು ನೀಡುತ್ತಾನೆ ಎಂಬುದಕ್ಕೆ ಇದು ಸಾಕ್ಷಿ ಎಂದು ಅದಮಾರು ಶ್ರೀಗಳು ಹೇಳಿದರು.

ಶ್ರೀಕೃಷ್ಣನೇ ಮಾಡಿಸಿದ
ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸುವರ್ಣ ಗೋಪುರ ನಮ್ಮಿಂದ ಆಗಿದೆ ಎಂಬ ಭ್ರಮೆ ನಮಗಿಲ್ಲ. ಶ್ರೀಕೃಷ್ಣನೇ ಭಕ್ತರಿಂದ ಇದನ್ನು ಮಾಡಿಸಿದ್ದಾನೆ. ಕೃಷ್ಣನಿಗೆ ಮಾಡುವ ಬೇರೆಲ್ಲ ಅಲಂಕಾರಗಳು ಮರುದಿನ ನಿರ್ಮಾಲ್ಯವಾಗಿ ತೆಗೆಯುತ್ತೇವೆ. ಆದರೆ ಸುವರ್ಣ ಗೋಪುರ ಅಲಂಕಾರ ಶಾಶ್ವತ ಎಂದರು.
ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥರು, ವಿದ್ವಾಂಸರಾದ ವ್ಯಾಸನಕೆರೆ ಪ್ರಭಂಜನಾಚಾರ್ಯ, ತಿರುಪತಿಯ ಆನಂದತೀರ್ಥ ಆಚಾರ್ಯ, ಗುರುರಾಜ ಆಚಾರ್ಯ, ಮಾಜಿ ಸಚಿವ ಅಭಯಚಂದ್ರ ಜೈನ್‌ ಉಪಸ್ಥಿತರಿದ್ದರು.
ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಅವರು ಕಾರ್ಯಕ್ರಮ ನಿರ್ವಹಿಸಿದರು.

ಅಂದು ತಾಳೆಗರಿ… ಇಂದು ಶ್ರೀಕೃಷ್ಣ ಮಠ
ಹೃಷಿಕೇಶತೀರ್ಥರು ಆಚಾರ್ಯ ಮಧ್ವರಿಂದ ಉಕ್ತವಾದ ಸು-ವರ್ಣಗಳನ್ನು ತಾಳೆಗರಿಯಲ್ಲಿ ಲೇಖೀಸಿ ಸುವರ್ಣಮಯ ವನ್ನಾಗಿ ಮಾಡಿದರು. ಅದೇ ಪರಂಪರೆಯಲ್ಲಿ ಬಂದಿರುವ ಶ್ರೀ ವಿದ್ಯಾಧೀಶತೀರ್ಥರು ಸುವರ್ಣ ಗೋಪುರದ ಮೂಲಕ ಶ್ರೀಕೃಷ್ಣ ಮಠವನ್ನೇ ಸುವರ್ಣಮಯವಾಗಿಸಿದರು.
-ಶ್ರೀ ವಿಶ್ವಪ್ರಿಯತೀರ್ಥರು, ಅದಮಾರು ಮಠ

Advertisement

Udayavani is now on Telegram. Click here to join our channel and stay updated with the latest news.

Next