ಉಡುಪಿ: ಮನೆಮನೆಗಳಲ್ಲಿರುತ್ತಿದ್ದ ಚಿನ್ನವೀಗ ಶ್ರೀಕೃಷ್ಣನ ಗರ್ಭಗುಡಿಯನ್ನೇರಿದೆ. ಸುವರ್ಣ ಗೋಪುರವಿಲ್ಲದಿದ್ದರೆ ಇವುಗಳೆಲ್ಲವೂ ಮನೆಗಳಲ್ಲಿ ಇರುತ್ತಿದ್ದವು. ದೇವರೆಂದರೆ ಬೇರಿದ್ದಂತೆ. ಬೇರಿಗೆ ನೀರೆರೆದರೆ ಕೊಂಬೆ, ಎಲೆಗಳಲ್ಲಿ ಹೂವು, ಹಣ್ಣು ದೊರಕುತ್ತವೆ. ಅದೇ ರೀತಿ ಸುವರ್ಣ ಗೋಪುರದಿಂದ ಮನೆಮನೆಗಳಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣೆ ಅಂಗವಾಗಿ ರವಿವಾರ ನಡೆದ 108 ಕಲಶಗಳ ಅಭಿಷೇಕದ ಬಳಿಕ ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಅವರು, ಭಕ್ತಿ, ತ್ಯಾಗದಿಂದ ಮಾತ್ರ ಇಷ್ಟೊಂದು ಕೆಲಸ ಪಲಿಮಾರು ಶ್ರೀಗಳಿಂದ ಸಾಧ್ಯವಾಯಿತು ಎಂದರು.
ಸಮರ್ಪಣ ಸಂದೇಶ ನೀಡಿದ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಸುವರ್ಣಗೋಪುರದ ನಿಮಿತ್ತ ಧರ್ಮ, ಯೋಗ, ಸಂಸ್ಕೃತ, ಕಲೆ, ವಿಜ್ಞಾನ ಹೀಗೆ ಅನೇಕಾನೇಕ ಗೋಪುರಗಳು ಸಮರ್ಪಣೆಗೊಂಡಿವೆ. ಇಂತಹ ಸತ್ಕಾರ್ಯಗಳು ಭಗವಂತ ನಮ್ಮಿಂದ ಮಾಡಿಸಿಕೊಳ್ಳುತ್ತಿದ್ದಾನೆಂಬ ಅನುಸಂಧಾನ ಇರಬೇಕು ಎಂದರು.
100 ಕೆ.ಜಿ. ಚಿನ್ನದಿಂದ ಗೋಪುರ ನಿರ್ಮಿಸುವ ಕೆಲಸವೆಂದರೆ ಕಷ್ಟಕರವಾದುದು ಎಂದು ಹಲವರು ಹೇಳಿದರು. ನಿಜ, ಇದು ಕಷ್ಟಕರ ಹೌದು ಎಂದು ಗೊತ್ತಿತ್ತು. ಭಗವಂತನಿದ್ದಾನೆನ್ನುವುದಕ್ಕೆ ಈ ಗೋಪುರವೇ ಸಾಕ್ಷಿ. ಹೆಸರು ಮಾತ್ರ ನಮಗೆ ಕೊಟ್ಟು ಆತ ಕೆಲಸ ಮಾಡಿಸಿಕೊಂಡ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ಪಲಿಮಾರು ಮಠದ ಶ್ರೀ ವಿದ್ಯಾರಾಜೇಶ್ವರತೀರ್ಥರು ಉಪಸ್ಥಿತರಿದ್ದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಪ್ರೊ| ಎ. ಹರಿದಾಸ ಭಟ್ ಉಪನ್ಯಾಸ ನೀಡಿದರು. ತಿರುವಾಂಕೂರು ಸಂಸ್ಥಾನದ ಪದ್ಮನಾಭದಾಸ, ಉಚ್ಚ ನ್ಯಾಯಾಲಯದ ನ್ಯಾ| ಮೂ| ದಿನೇಶ ಕುಮಾರ್, ಮೈಸೂರಿನ ಎಂ.ಕೆ. ಪುರಾಣಿಕ್, ಮುಂಬಯಿ ಉದ್ಯಮಿ ಪಲಿಮಾರಿನ ಮೇಗಿನಮನೆ ಸುಧಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
55 ಗ್ರಾಂ. ಚಿನ್ನ ಸಮರ್ಪಿಸಿದ ಬಳಕೆದಾರರ ವೇದಿಕೆ ಸಂಚಾಲಕ ಕೆ. ದಾಮೋದರ ಐತಾಳ ಅವರನ್ನು ಅಭಿನಂದಿಸಲಾಯಿತು. ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಅವರು ಕಾರ್ಯಕ್ರಮ ನಿರ್ವಹಿಸಿದರು.