ವಿಟ್ಲ: ಉಡುಪಿ – ಕಾಸರಗೋಡು ವಿದ್ಯುತ್ ಮಾರ್ಗ ಜಿಲ್ಲೆಯ ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಕೃಷಿ ಜಮೀನುಗಳನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಮನವಿ ಸ್ವೀಕರಿಸಿದವರೆಲ್ಲ ಕಂಪೆನಿಯ ಏಜೆಂಟರಂತೆ ವರ್ತಿಸುತ್ತಿರುವುದು ಖಂಡನಾರ್ಹವಾಗಿದೆ.
ಕೃಷಿ ಜಮೀನುಗಳನ್ನು ನಾಶ ಮಾಡುವ ಯೋಜನೆ ಬರುತ್ತಿರುವುದನ್ನು ತತ್‌ಕ್ಷಣ ಸ್ಥಗಿತ ಮಾಡಬೇಕು. ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಹುನ್ನಾರ ನಡೆಯುತ್ತಿದ್ದು, ಇದು ಮುಂದುವರಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಅವರು ವಿಟ್ಲದಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ಈ ವಿದ್ಯುತ್ ಮಾರ್ಗ ಖಾಸಗಿ ಕಂಪೆನಿಯ ಯೋಜನೆಯಾಗಿದ್ದು, 2015ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ರೈತರಿಗೆ ನೆಮ್ಮದಿಯಿಲ್ಲ. ಶೇ.80ರಷ್ಟು ರೈತರ ಒಪ್ಪಿಗೆ ಇದ್ದರೆ ಮಾತ್ರ ಯೋಜನೆ ಮಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
400 ಕೆ.ವಿ.ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ, ಯೋಜನೆಗೆ ಪರ್ಯಾಯದ ದಾರಿ
ಯನ್ನು ಹುಡುಕುವಂತೆ ಹೋರಾಟವನ್ನು ಮಾಡಲಾಗುತ್ತಿದೆ. ಸುಳ್ಳನ್ನು ಪದೇಪದೆ ಹೇಳಿ ಸತ್ಯವಾಗಿಸುವ ಕಾರ್ಯ ಮಾಡಲಾಗುತ್ತಿದೆ. ಶೇ.99 ಮಂದಿಯೂ ಯೋಜನೆಗೆ ಒಪ್ಪಿಗೆಯನ್ನು ನೀಡಿಲ್ಲ. ಜಿಲ್ಲಾ ಧಿಕಾರಿಗಳು ಸಭೆ ನಡೆಸಿ ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆದು ರೈತರ ಒಪ್ಪಿಗೆ ಇದೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.
ಕೋಶಾಧಿಕಾರಿ ಚಿತ್ತರಂಜನ್ ಎನ್.ಎಸ್.ಡಿ., ಕಾರ್ಯದರ್ಶಿ ಕೃಷ್ಣ ಪ್ರಸಾದ್, ಲಕ್ಷ್ಮೀನಾರಾಯಣ ಸಹಿತ ಹಲವಾರು ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.