Advertisement

ಜಲಪ್ರಳಯದ ಬಳಿಕ ಸಹಜ ಸ್ಥಿತಿಗೆ ಮರಳಿದ ಉಡುಪಿ ನಗರ

09:27 PM Sep 23, 2020 | mahesh |

ಉಡುಪಿ: ಜಲಪ್ರಳಯವಾಗಿ ಮೂರು ದಿನಗಳು ಕಳೆದಿವೆ. ನಗರದ ಬೀದಿ ಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಪ್ರಾರಂಭಗೊಂಡಿದ್ದು, ಜನರಲ್ಲಿ ಮತ್ತೂಮ್ಮೆ ಬದುಕು ಕಟ್ಟಿಕೊಳ್ಳುವ ತವಕ ಎದ್ದು ಕಾಣುತ್ತಿತ್ತು. ಉಡುಪಿ ನಗರ ಸೆ.20ರ ಜಲಪ್ರಳಯಕ್ಕೆ ಸಂಪೂರ್ಣವಾಗಿ ನಲುಗಿ ಹೋಗಿತ್ತು. ಬಡಗುಪೇಟೆ ಸಾಲು-ಸಾಲು ಅಂಗಡಿಗಳಿಗೆ ಮೂರರಿಂದ ನಾಲ್ಕು ಅಡಿಗಳಷ್ಟು ನೀರು ನುಗ್ಗಿ ದಿನಸಿ ಸಾಮಗ್ರಿ ಸೇರಿದಂತೆ ಔಷಧ ವಸ್ತುಗಳು ಹಾನಿಗೊಂಡಿದ್ದವು. ಕೆಲ ಮನೆಗಳು ಸಂಪೂರ್ಣ ಹಾಗೂ ಭಾಗಶಃ ಹಾನಿಗೊಂಡಿವೆ. ಕೆಲವೆಡೆ ಮನೆಯ ವಸ್ತುಗಳು ಇಂದ್ರಾಣಿ ಮೂಲಕ ಸಮುದ್ರದ ಒಡಲು ಸೇರಿವೆ.

Advertisement

ನಗರ ಸಹಜ ಸ್ಥಿತಿಗೆ
ಈಗ ನೆರೆಯಿಂದ ಆವೃತವಾಗಿದ್ದ ಬಡಗುಪೇಟೆ ಸೇರಿದಂತೆ ವಿವಿಧ ಮಾರ್ಗಗಳು ಸಹಜ ಸ್ಥಿತಿಗೆ ಬಂದಿದೆ. ಅಂಗಡಿಗಳನ್ನು ಸ್ವತ್ಛಗೊಳಿಸಿ ವ್ಯಾಪಾರ ವಹಿವಾಟು ಪ್ರಾರಂಭವಾಗಿದೆ. ಕೆಲ ಅಂಗಡಿಮುಂಗಟ್ಟುಗಳಲ್ಲಿ ಹಾಳಾದ ವಸ್ತುಗಳನ್ನು ಹೊರಗೆಸೆಯುವ ಕೆಲಸಗಳು ಭರದಿಂದ ಸಾಗುತ್ತಿದೆ. ಇನ್ನೂ ಕೆಲವಡೆ ಅಂಗಡಿಗಳು ಬಾಗಿಲು ಹಾಕಿದ ದೃಶ್ಯಗಳು ಕಂಡು ಬರುತ್ತಿವೆ. ಇಂದ್ರಾಣಿ ಶಾಂತವಾಗಿ ಹರಿಯುತ್ತಿದೆ.

ಸೆ.23ರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿಯಲ್ಲಿ 26 ಮಿ.ಮೀ., ಕುಂದಾಪುರ 37 ಮಿ.ಮೀ., ಕಾರ್ಕಳ 26 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 30 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹಲವು ಕಡೆಯಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.
ಸಾಧಾರಣ ಮಳೆ
ಬುಧವಾರ ಉಡುಪಿ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದ ವೇಳೆ ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ನಡುವೆ ಹನಿ ಹನಿ ಮಳೆಯಾಗಿದೆ.

ಗರಿಷ್ಠ ಪರಿಹಾರದ ಭರವಸೆ
ಶ್ರೀ ಕೃಷ್ಣ ಮಠದ ಪಾರ್ಕಿಂಗ್‌ ಏರಿಯಾದಲ್ಲಿ ಜನಸಂಚಾರ ಪ್ರಾರಂಭವಾಗಿದೆ. ಪ್ರವಾಸಿ ವಾಹನಗಳು ಬಾಡಿಗೆ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ, ಶಾಸಕರು, ನಗರಸಭೆ ಅಧಿಕಾರಿಗಳು ನೆರೆ ಪ್ರದೇಶಗಳಿಗೆ ಭೇಟಿ ನೀಡಿ, ಗರಿಷ್ಠ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next