Advertisement

ಉಡುಪಿಯ ಸಮಗ್ರ ಗ್ರಾಮೀಣ ಆಶ್ರಮಕ್ಕೆ ಅಂ.ರಾ. ಪ್ರಶಸ್ತಿ

10:05 AM Feb 04, 2020 | sudhir |

ಉಡುಪಿ: ಬ್ರಿಟಿಷ್‌ ಮೂಲದ ವರ್ಲ್ಡ್ ಹ್ಯಾಬಿಟ್ಯಾಟ್‌ ಸಂಸ್ಥೆಯು ಯುಎನ್‌ ಹ್ಯಾಬಿಟ್ಯಾಟ್‌ ಸಹಯೋಗದಲ್ಲಿ ನೀಡುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಹ್ಯಾಬಿಟ್ಯಾಟ್‌ ಗೋಲ್ಡ್‌ ಅವಾರ್ಡ್‌ 16 ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಲಭಿಸಿದೆ. ಇದು ಉಡುಪಿ ಜಿಲ್ಲೆಯಲ್ಲಿ 33 ವರ್ಷಗಳಿಂದ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ “ಸಮಗ್ರ ಗ್ರಾಮೀಣ ಆಶ್ರಮ’ಕ್ಕೆ ದೊರಕಿದೆ.

Advertisement

ಭೂಮಿ, ವಸತಿ ಹೊಂದಲು ನಡೆಸಿದ ವಿಶೇಷ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬುಡಕಟ್ಟು ಸಮುದಾಯ ಜನರ ಅಭಿವೃದ್ಧಿ ಮತ್ತು ಹಕ್ಕುಗಳ ಹೋರಾಟ ಕ್ಕಾಗಿ 1987ರಲ್ಲಿ ದೇವದಾಸ ಶೆಟ್ಟಿ ನೇತೃತ್ವದಲ್ಲಿ ಉಡುಪಿಯ ಶಿರ್ವ ಪೆರ್ನಾಲ್‌ನಲ್ಲಿ “ಸಮಗ್ರ ಗ್ರಾಮೀಣ ಆಶ್ರಮ’ ಪ್ರಾರಂಭಗೊಂಡಿತ್ತು.

ವಿಶೇಷ ಸಾಧನೆ
ರಾಜ್ಯದಲ್ಲಿ ಅಜಲು ನಿಷೇಧ ಕಾಯಿದೆ ಜಾರಿಯಾಗುವಲ್ಲಿಯೂ “ಸಮಗ್ರ ಗ್ರಾಮೀಣ ಆಶ್ರಮ’ದ ಪಾತ್ರ ಪ್ರಮುಖವಾಗಿದೆ. ರಾಜ್ಯದಲ್ಲಿ ಸುಮಾರು 19,000 ಜನರಿಗೆ ಮನೆ ಕಟ್ಟಲು ನೆರವು ನೀಡಿದೆ. 1 ಸಾವಿರ ಜನರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ರೂಪಿಸಿದೆ.

ರಾಜ್ಯಕ್ಕೆ ಮೊದಲ ಪ್ರಶಸ್ತಿ
ಹ್ಯಾಬಿಟ್ಯಾಟ್‌ ಪ್ರಶಸ್ತಿಯು 4ನೇ ಬಾರಿ ಭಾರತಕ್ಕೆ ಲಭಿಸಿದೆ. ಕರ್ನಾಟಕಕ್ಕೆ ದೊರಕಿದ್ದು ಇದೇ ಮೊದಲ ಬಾರಿ.

7.93 ಲ.ರೂ. ಬಹುಮಾನ
ಪ್ರಶಸ್ತಿಯು 10 ಸಾವಿರ ಯೂರೋ (7.93ಲ.ರೂ) ಮತ್ತು ಟ್ರೋಫಿಯನ್ನು ಹೊಂದಿದೆ. ಫೆ. 7ರಿಂದ 11ರ ವರೆಗೆ ಅಬುಧಾಬಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. “ಸಮಗ್ರ ಗ್ರಾಮೀಣ ಆಶ್ರಮ’ದ ಅಧ್ಯಕ್ಷೆ ಶಕುಂತಳಾ ಕೊರಗ ನೇಜಾರು ಮತ್ತು ನಿರ್ದೇಶಕ ಅಶೋಕ್‌ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

Advertisement

ಪ್ರಶಸ್ತಿ ಆಯ್ಕೆ ಹೇಗೆ?
ವರ್ಲ್ಡ್ ಹ್ಯಾಬಿಟ್ಯಾಟ್‌ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ಭೇಟಿ ನೀಡಿ ಸಂಸ್ಥೆ ಅಥವಾ ವ್ಯಕ್ತಿಗಳ ಬಗ್ಗೆ ಅಧ್ಯಯನ ನಡೆಸುತ್ತಾರೆ. ಬಳಿಕ ವರದಿಯನ್ನು ಪ್ರಶಸ್ತಿ ಟ್ರಸ್ಟಿಗಳಿಗೆ ನೀಡುತ್ತಾರೆ. ಪ್ರಶಸ್ತಿ ಆಯ್ಕೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ.

195 ರಾಷ್ಟ್ರ, 3 ಸಾವಿರ ಅರ್ಜಿ
ಜಗತ್ತಿನ 195 ರಾಷ್ಟ್ರಗಳಿಂದ 3 ಸಾವಿರ ಅರ್ಜಿಗಳು ಈ ಪ್ರಶಸ್ತಿಗೆ ಸಲ್ಲಿಕೆಯಾಗಿದ್ದವು. ಅದರಲ್ಲಿ ಹ್ಯಾಬಿಟ್ಯಾಟ್‌ ಗೋಲ್ಡನ್‌ -2019 ಅವಾರ್ಡ್‌ ಸಮಗ್ರ ಗ್ರಾಮೀಣ ಆಶ್ರಮ ಮತ್ತು ಸ್ಪೇಯ್ನನ ವಿವೆಂಡಸ್‌ ಪೆರಲಸ್‌ ಎಂತಿದಾದಿಸ್‌ ಸೋಶಿಯಲ್ಸ್‌ ಸಂಸ್ಥೆ ಪಾಲಾಗಿವೆ. ಒರಿಸ್ಸಾದ “ಲಿವೆಬಲ್‌’ಗೆ ಹ್ಯಾಬಿಟಾಟ್‌ ಕಂಚಿನ ಪ್ರಶಸ್ತಿ ಪಡೆದಿದೆ.

ಬುಡಕಟ್ಟು ಸಮುದಾಯ ದವರ ಉನ್ನತಿ ಮತ್ತು ಅವರಿಗಾಗಿ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನಡೆಸಿದ ಹೋರಾಟವನ್ನು ಗಮನಿಸಿ ಹ್ಯಾಬಿಟ್ಯಾಟ್‌ ಗೋಲ್ಡನ್‌ ಅವಾರ್ಡ್‌ ದೊರಕಿದೆ. ಪ್ರಶಸ್ತಿಯ ಮೊತ್ತವನ್ನು ಸಮುದಾಯದ ಅಭಿವೃದ್ಧಿಗೆ ಬಳಸಲಾಗುತ್ತದೆ.
-ಅಶೋಕ್‌ ಶೆಟ್ಟಿ, ಆಡಳಿತ ನಿರ್ದೇಶಕ, ಸಮಗ್ರ ಗ್ರಾಮೀಣ ಆಶ್ರಮ

Advertisement

Udayavani is now on Telegram. Click here to join our channel and stay updated with the latest news.

Next