Advertisement

ದಾವೆಗಳ ತ್ವರಿತ ಇತ್ಯರ್ಥ: ನ್ಯಾ|ಅಬ್ದುಲ್‌ ನಜೀರ್‌ ಕರೆ

01:05 AM Feb 20, 2022 | Team Udayavani |

ಉಡುಪಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲಸೌಕರ್ಯಗಳು ಹೆಚ್ಚುತ್ತಿದ್ದರೂ ವಿಲೇವಾರಿಯಾಗ ಬೇಕಿರುವ ದಾವೆ (ಲಿಟಿಗೇಶನ್‌)ಗಳ ಪ್ರಮಾಣ ಕಡಿಮೆಯಾಗುತ್ತಿಲ್ಲ. ದಾವೆಗಳು ಕ್ಯಾನ್ಸರ್‌ ಇದ್ದಂತೆ. ಕ್ಯಾನ್ಸರ್‌ಗೆ ಚಿಕಿತ್ಸೆ ನೀಡದೆ ಮೂಲಸೌಕರ್ಯ ಹೆಚ್ಚಿಸಿದರೆ ಪ್ರಯೋಜನವಿಲ್ಲ. ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾ| ಎಸ್‌. ಅಬ್ದುಲ್‌ ನಜೀರ್‌ ಅಭಿಪ್ರಾಯಪಟ್ಟರು.

Advertisement

ಉಡುಪಿ ಜಿಲ್ಲಾ ನ್ಯಾಯಾಲಯ, ಲೋಕೋಪಯೋಗಿ ಇಲಾಖೆ, ವಕೀಲರ ಸಂಘದಿಂದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ 3ನೇ ಮಹಡಿಯಲ್ಲಿ ನಿರ್ಮಿಸಲಾದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಇ-ಸೇವಾ ಕೇಂದ್ರ, ಹೆಲ್ಪ್ಡೆಸ್ಕ್ ಮತ್ತು ವಿ.ಸಿ. ಕ್ಯಾಬಿನ್‌ಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪೋಕ್ಸೋ ಪ್ರಕರಣ ಇಳಿಕೆ ಅಗತ್ಯ
ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಮೂಲಸೌಕರ್ಯ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಎಲ್ಲ ಮೂಲಸೌಕರ್ಯ ಇದ್ದೂ ದಾವೆಗಳು ಹೆಚ್ಚಾಗುತ್ತಿದ್ದರೆ ಸಮಾಜದಲ್ಲಿ ಶಾಂತಿ ಇಲ್ಲ ಎಂದರ್ಥ. ಪೋಕ್ಸೋ ಕೋರ್ಟ್‌ ಹೆಚ್ಚು ರಚನೆಯಾಗುವುದು ಉತ್ತಮ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಐಎ ಕಡಿಮೆಯಾಗಲಿ
ಮಂಗಳೂರು, ಉಡುಪಿಯ ವಕೀಲರು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನೇ ಹೆಚ್ಚು ಒಪ್ಪಿಕೊಳ್ಳುತ್ತಾರೆ ಎಂಬ ಮಾತಿದೆ. ಆರ್ಡರ್‌ 12 ಸಿಪಿಸಿ (ಇನ್‌ವೆಂಟ್ರಿಸ್‌) ಹೆಚ್ಚು ಉಪಯೋಗ ಮಾಡುವುದು ಉಡುಪಿ, ಮಂಗಳೂರು ವಕೀಲರು. ಹೀಗಾಗಿ ಇಲ್ಲಿನ ವಕೀಲರು ಯಾವ ಕಕ್ಷಿದಾರರನ್ನು ಬಿಟ್ಟುಕೊಡುವುದಿಲ್ಲ. ಒಂದು ಐಎ (ಮಧ್ಯಾಂತರ ಮನವಿ)ಗೂ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ವಕೀಲರು ಐಎ, ರಿವಿಷನ್‌ ಪಿಟಿಶನ್‌ ಹಾಕುವುದನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

75 ವರ್ಷಗಳಲ್ಲೂ ಸರಿಯಾಗಲಿಲ್ಲ
ಕ್ರಿಮಿನಲ್‌ ಕೇಸ್‌ ಹೆಚ್ಚಿದ್ದರೆ ಸಮಾಜದ ಸ್ವಾಸ್ಥ್ಯ ಸರಿಯಲ್ಲ ಎಂದರ್ಥ. ವ್ಯವಸ್ಥೆಯಲ್ಲಿರುವ ಈ ತಪ್ಪನ್ನು 75 ವರ್ಷಗಳಾದರೂ ಸರಿಪಡಿಸಲು ಸಾಧ್ಯವಾಗಿಲ್ಲ. ವ್ಯಾಜ್ಯಗಳ ಶೀಘ್ರ ವಿಲೇವಾರಿ ಮತ್ತು ಪ್ರಕರಣ ಕಡಿಮೆ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿವೆ. ಆದರೆ ವ್ಯಾಜ್ಯ ಬಾಕಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ನಮ್ಮಲ್ಲಿ ಅನೇಕ ರೀತಿಯ ಕಾನೂನು, ಉಪಕಾನೂನುಗಳಿವೆ. ಎಲ್ಲದಕ್ಕೂ ಐಎ ಹಾಕುತ್ತ ಹೋದರೆ ಸರಿಯಾಗುವುದು ಯಾವಾಗ? ಇದಕ್ಕೆ ಪರಿಹಾರ ಹುಡುಕಬೇಕು. ರಾಜ್ಯ ಸರಕಾರ ಇದಕ್ಕೆ ಪ್ರತ್ಯೇಕ ಕಾನೂನು ಮಾಡಬೇಕು ಎಂದರು.

Advertisement

ಕಾರ್ಯಪ್ರಗತಿ ಹೆಚ್ಚಲಿ
ದೇವ ನಗರಿ ಉಡುಪಿ ಅಷ್ಟಮಠಗಳು, ತುಳುನಾಡು, ಬಾರಕೂರು ಕೋಟೆಗೆ ಪ್ರಸಿದ್ಧಿ ಪಡೆದಿದೆ. 11 ಕೋರ್ಟ್‌ಗಳು ಸೇವೆ ಸಲ್ಲಿಸುತ್ತಿವೆ. 4.9 ಕೋ.ರೂ. ಅಂದಾಜಿನಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಇಲ್ಲಿ 3 ಕೋರ್ಟ್‌ ಹಾಲ್‌, ಪೋಕ್ಸೋ ಕೋರ್ಟ್‌ ಹಾಲ್‌, ಮೀಟಿಂಗ್‌ ಹಾಲ್‌ ಎಲ್ಲವೂ ಇದೆ. ನ್ಯಾಯಾಂಗ ವ್ಯವಸ್ಥೆ ಚೆನ್ನಾಗಿ ಕಾರ್ಯ ನಿರ್ವಹಿಸಲು ಸರಕಾರ ಸೂಕ್ತ ಮೂಲಸೌಕರ್ಯ ಒದಗಿಸುತ್ತಿದೆ. ವ್ಯವಸ್ಥೆಯನ್ನು ಸದುಪಯೋಗ ಮಾಡಿಕೊಂಡು, ಹೆಚ್ಚೆಚ್ಚು ಕಾರ್ಯ ಪ್ರಗತಿ ಸಾಧಿಸುವಂತಾಗಲಿ ಎಂದು ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ಶುಭ ಹಾರೈಸಿದರು.

ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾ| ರಂಗಸ್ವಾಮಿ ನಟರಾಜ್‌ ಮೂಲಸೌಕರ್ಯಗಳ ಜತೆಗೆ ಪೂರ್ಣ ಪ್ರಮಾಣದಲ್ಲಿ ಸಿಬಂದಿ ಒದಗಿಸಿದಾಗ ನ್ಯಾಯಾಂಗ ವ್ಯವಸ್ಥೆ ಚೆನ್ನಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ ಎಂದರು.

ಸಮ್ಮಾನ
ಗುತ್ತಿಗೆದಾರರಾದ ಸತ್ಯನಾರಾಯಣ ಶೆಟ್ಟಿಯವರನ್ನು ಸಮ್ಮಾನಿಸ ಲಾಯಿತು. ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌, ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ. ಶಿವಶಂಕರೇಗೌಡ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್‌ ನಾಯ್ಕ, ಲೋಕೋಪಯೋಗಿ ಇಲಾಖೆಯ ಕೇಂದ್ರವಲಯ ಮುಖ್ಯ ಎಂಜಿನಿಯರ್‌ ಕಾಂತರಾಜು ಬಿ.ಟಿ. ಉಪಸ್ಥಿತರಿದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎಸ್‌. ಸ್ವಾಗತಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್‌ ವರದಿ ಮಂಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್‌ ಪ್ರವೀಣ್‌ ಕುಮಾರ್‌ ವಂದಿಸಿದರು. ನ್ಯಾಯವಾದಿ ಮೇರಿ ಶ್ರೇಷ್ಠ ನಿರೂಪಿಸಿದರು.

ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ
ನಮ್ಮ ಇಲಾಖೆಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ. ನಾವು ನಿರ್ಮಿಸುವ ಕಟ್ಟಡ, ರಸ್ತೆ ಸಹಿತ ವಿವಿಧ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಬಾರದು. ಗುಣಮಟ್ಟದಲ್ಲಿ ಅಧಿಕಾರಿಗಳು ರಾಜಿ ಮಾಡಿಕೊಳ್ಳಬಾರದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಹೇಳಿದರು.

ವಕೀಲರ ಸಂಘಕ್ಕೆ ಜಾಗ, ಕಟ್ಟಡ
ಉಡುಪಿಯಲ್ಲಿ ಜಿಲ್ಲಾ ನ್ಯಾಯಾಲಯ, ಉತ್ತಮ ಕಟ್ಟಡ ಎಲ್ಲವೂ ಇದೆ. ಆದರೆ ವಕೀಲರ ಸಂಘಕ್ಕೆ ಪ್ರತ್ಯೇಕ ಕಟ್ಟಡವಿಲ್ಲ. ವಕೀಲಿಕೆ ಬುದ್ಧಿಶಾಲಿಗಳ ಕೆಲಸವಾಗಿದೆ. ವಕೀಲರು ಸಂಘವು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಮಂಗಳೂರಿನಲ್ಲೂ ಇದೇ ಸಮಸ್ಯೆಯಿದೆ ಎಂದು ನ್ಯಾ| ಅಬ್ದುಲ್‌ ನಜೀರ್‌ ಹೇಳುತ್ತಿದ್ದಂತೆ ಸಚಿವ ಸಿ.ಸಿ. ಪಾಟೀಲ್‌ ಎದ್ದು ನಿಂತು, ಶೀಘ್ರದಲ್ಲಿ ವಕೀಲರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುವುದು ಎಂದರು.

ಕುಂದಾಪುರ ಕೋರ್ಟಿನ ಹೊಸ ಕಟ್ಟಡ ಉದ್ಘಾಟನೆ
ಕುಂದಾಪುರ: ಇಲ್ಲಿನ ನ್ಯಾಯಾಲಯ ಆವರಣದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನ್ಯಾಯಾಲಯ, ವಕೀಲರ ಸಂಘದ ನೂತನ ಕಟ್ಟಡವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಶನಿವಾರ ಉದ್ಘಾಟಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅಧ್ಯಕ್ಷತೆ ವಹಿಸಿದ್ದರು. ಉಚ್ಚ ನ್ಯಾಯಾಲಯ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್‌ ಮಾತನಾಡಿದರು.

ಬೈಂದೂರು ಸಂಚಾರಿ ಸಿವಿಲ್‌ ಜಡ್ಜ್ ಜೆಎಂಎಫ್‌ಸಿ ಕೋರ್ಟ್‌ ಉದ್ಘಾಟನೆ
ಬೈಂದೂರು: ನೂತನ ಬೈಂದೂರು ಸಂಚಾರಿ ಸಿವಿಲ್‌ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ಸುಪ್ರೀಂ ಕೋರ್ಟ್‌ ನ್ಯಾ| ಎಸ್‌. ಅಬ್ದುಲ್‌ ನಜೀರ್‌ ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನ್ಯಾಯಾಲಯಕ್ಕಾಗಿ ಜನರಲ್ಲ; ಜನರಿಗಾಗಿ ನ್ಯಾಯಾಲಯ ಇದೆ. ಕಕ್ಷಿದಾರರಿಗೆ ಸಮರ್ಪಕ ಮಾರ್ಗದರ್ಶನ, ಸೇವೆ ವಕೀಲರ ಆದ್ಯತೆಯಾಗಿದೆ ಎಂದರು. ನ್ಯಾಯಾಲಯಗಳು ಜನಸ್ನೇಹಿಯಾಗಿದ್ದು, ಕೋವಿಡ್‌ ಸಂದರ್ಭ ವರ್ಚವಲ್‌ ಕಲಾಪ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಅಂತರ್ಜಾಲ ಸೌಲಭ್ಯ, ಸಾಮಾಜಿಕ ಜಾಲತಾಣಗಳು ಜನರಿಗೆ ಎಷ್ಟು ಪೂರಕವೋ ಅಷ್ಟೇ ಮಾರಕ ಆಗಿ ಅಪರಾಧ ಚಟುವಟಿಕೆಗಳಿಗೆ ಆಸ್ಪದವಾಗುತ್ತಿರುವುದು ವಿಷಾದದ ಸಂಗತಿ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಬೈಂದೂರಿನ ಬಹುವರ್ಷದ ಕನಸು ಸಾಕಾರಗೊಂಡಿದೆ. ದೇಶದ ಪ್ರಮುಖ ವಿಷಯಗಳಾದ ಶ್ರೀರಾಮ ಜನ್ಮಭೂಮಿ, ತ್ರಿವಳಿ ತಲಾಖ್‌ ವಿಚಾರದಲ್ಲಿ ನ್ಯಾಯಾಲಯದಲ್ಲಿ ತೀರ್ಪುನ್ನು ನೀಡಿದ ಹೆಗ್ಗಳಿಕೆ ಇರುವ ನ್ಯಾಯಮೂರ್ತಿಗಳು ಬೈಂದೂರಿಗೆ ಬಂದಿರುವುದು ಕ್ಷೇತ್ರದ ಹೆಮ್ಮೆ ಎಂದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ನ್ಯಾ| ರಿತು ರಾಜ್‌ ಅವಸ್ಥಿ, ಉಡುಪಿ ಜಿಲ್ಲೆಯ ನ್ಯಾಯಮೂರ್ತಿಗಳು, ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ರಂಗಸ್ವಾಮಿ ನಟರಾಜ್‌, ಮಹಾ ವಿಲೇಖನಾಧಿಕಾರಿಗಳಾದ ಟಿ.ಜಿ. ಶಿವಶಂಕರೇಗೌಡ, ಹೈಕೋರ್ಟ್‌ ಹಿರಿಯ ವಕೀಲ ಉದಯ ಹೊಳ್ಳ, ಉಡುಪಿ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್‌. ಸ್ವಾಗತಿಸಿದರು. ದೇವಿದಾಸ್‌ ಮೇಸ್ತ ಪ್ರಸ್ತಾವನೆಗೈದರು. ಎನ್‌.ಎಸ್‌.ಆರ್‌. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next