ಪರ್ಕಳ: ಅಭಿವೃದ್ಧಿಯ ದೃಷ್ಟಿಯಲ್ಲಿ ಉಡುಪಿ ಕ್ಷೇತ್ರ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ. ಕಳೆದ ಐದು ವರ್ಷದಲ್ಲಿ ಸಚಿವನಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮುಂದಿದೆ. ಈ ನೆಲೆಯಲ್ಲಿ ನನಗೆ ಮತದಾನ ಮಾಡುವುದರೊಂದಿಗೆ ಜನಸೇವೆಗೆ ಇನ್ನೊಮ್ಮೆ ಅವಕಾಶ ನೀಡ ಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಪರ್ಕಳದ ಪೇಟೆಯಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಪರ್ಕಳ, ಮಲ್ಪೆ ಪ್ರದೇಶದಲ್ಲಿ ರಸ್ತೆ ಚತುಷ್ಪಥಗೊಳಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವುದನ್ನು ಬಿಜೆಪಿಯ ಈಗಿನ ಅಭ್ಯರ್ಥಿಗಳು ವಿರೋಧಿಸಿ ದ್ದರು. ಕಳೆದ 4 ವರ್ಷಗಳಲ್ಲಿ ಪರ್ಕಳ – ಮಲ್ಪೆ ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ಸರಕಾರದಿಂದ ಅನುದಾನ ತಂದು ಅಭಿವೃದ್ಧಿಪಡಿಸುವಲ್ಲಿ ಸಂಸದರು ಹಾಗೂ ಮಾಜಿ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
ಉಡುಪಿ ಕ್ಷೇತ್ರದ ಉಸ್ತುವಾರಿ ಸಚಿವನಾಗಿ 2,000 ಕೋ.ರೂ.ಗೂ ಮಿಕ್ಕಿ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದೇನೆ. ಕಳೆದೈದು ವರ್ಷ ಅವಧಿಯಲ್ಲಿ 21,000 ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ, ಕೆಲವೊಂದು ತಾಂತ್ರಿಕ ಅಡಚಣೆ ಹೊರತುಪಡಿಸಿ 24 ಗಂಟೆಗಳ ನಿರಂತರ ವಿದ್ಯುತ್ ಒದಗಿಸಲು ಪ್ರಯತ್ನಿಸಿದ್ದೇನೆ. ಹಳ್ಳಿಗಳಿಗೆ ನರ್ಮ್ ಸರಕಾರಿ ಬಸ್, ಸಂಪರ್ಕ ಸೇತುವೆ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಿದ ಸಂತೃಪ್ತಿ ನನಗಿದೆ ಎಂದರು.
ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎ.ಗಪೂರ್, ಎಐಸಿಸಿ ಸದಸ್ಯ ಅಮೃತ್ ಶೆಣೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ನಗರಸಭೆ ಅಧ್ಯಕ್ಷೆ ಮೀನಾಕ್ಷೀ ಮಾಧವ ಬನ್ನಂಜೆ, ದಿವಾಕರ ಕುಂದರ್, ಜನಾರ್ದನ ಭಂಡಾರ್ಕಾರ್ ಪ್ರಖ್ಯಾತ್‌ಶೆಟ್ಟಿ ಉಪಸ್ಥಿತರಿದ್ದರು.