Advertisement

ಉಡುಪಿ: ಹೆಬ್ರಿ-ಮಲ್ಪೆ ಹೆದ್ದಾರಿ ಯೋಜನೆಭೂ ಸ್ವಾಧೀನ ಪ್ರಕ್ರಿಯೆ ವಿಳಂಬ

04:15 PM Jul 05, 2024 | Team Udayavani |

ಉಡುಪಿ: ಮಲ್ಪೆ-ತೀರ್ಥಹಳ್ಳಿ 169ಎ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಭಾಗವಾಗಿ ನಡೆಯುತ್ತಿರುವ ಹೆಬ್ರಿ-ಆತ್ರಾಡಿ, ಮಲ್ಪೆ-ಕರಾವಳಿ ಬೈಪಾಸ್‌ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಕೂಡಿದೆ. ಈ ಮಧ್ಯೆ ಹಲವರು ತಮ್ಮ ಪ್ರಾಪರ್ಟಿ ಉಳಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

Advertisement

ಅಲ್ಲಲ್ಲಿ ಕಾಮಗಾರಿ ಅಪೂರ್ಣಗೊಂಡಿರುವುದು ಯೋಜನೆಗೆ ಹಿನ್ನಡೆಯ ಜತೆಗೆ ವಾಹನ ಸವಾರರಿಗೂ, ಸ್ಥಳೀಯರಿಗೂ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈಗಾಗಲೆ ಆತ್ರಾಡಿ-ಹೆಬ್ರಿ 26 ಕಿ. ಮೀ. ರಸ್ತೆಯಲ್ಲಿ 20 ಕಿ. ಮೀ. ಪೂರ್ಣಗೊಂಡಿದ್ದು, 6 ಕಿ. ಮೀ. ಕಾಮಗಾರಿ ಬಾಕಿ ಇದೆ. ಹಿರಿಯಡಕ ಪೇಟೆ, ಹೆಬ್ರಿ, ಪೆರ್ಡೂರು ಭಾಗದಲ್ಲಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಕಾಮಗಾರಿ ವೇಗ ಪಡೆದುಕೊಳ್ಳದೆ ಅರ್ಧಕ್ಕೆ ಬಾಕಿಯಾಗಿವೆ.

ಇಲ್ಲಿನ ಭೂಸ್ವಾಧೀನ ಪ್ರಕ್ರಿಯೆ ಅಧಿಕಾರವನ್ನು ಕುಂದಾಪುರ ಉಪವಿಭಾಗ ಆಯುಕ್ತರಿಗೆ ನೀಡಲಾಗಿದ್ದು, ಹಂತಹಂತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಸಂತ್ರಸ್ತರಿಗೆ ನೋಟಿಸ್‌ ನೀಡಲಾಗುತ್ತಿದೆ. ಅನಂತರ ಪರಿಹಾರ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.

ಪೇಟೆ, ಅಂಗಡಿ ಉಳಿಸಲು ಕೋರ್ಟ್‌ ಮೊರೆ
ಸಾಕಷ್ಟು ಆರ್ಥಿಕ ಚಟುವಟಿಕೆಗಳಿಂದ ಕೂಡಿರುವ ಹಲವಾರು ವರ್ಷಗಳಿಂದ ವ್ಯಾಪಾರ ಚಟುವಟಿಕೆ ಮಾಡಿಕೊಂಡು
ಬರುತ್ತಿರುವ ಹಿರಿಯಡಕ, ಪೆರ್ಡೂರು, ಹೆಬ್ರಿ ಪೇಟೆಯ 100ಕ್ಕೂ ಅಧಿಕ ಮಂದಿ ನ್ಯಾಯಾಲದ ಮೊರೆ ಹೋಗಿದ್ದಾರೆ. ಹೆದ್ದಾರಿ
ರಸ್ತೆಯನ್ನು ಇನ್ನೊಂದು ಮಾರ್ಗದಲ್ಲಿ ನಿರ್ಮಿಸುವಂತೆ ಪೇಟೆಗಳ ವ್ಯಾಪಾರಸ್ಥರಿಗೆ, ಹಲವಾರು ವರ್ಷಗಳಿಂದ ನೆಲೆಸಿದ
ಕುಟುಂಬಗಳಿಗೆ ಸಮಸ್ಯೆಯಾಗದಂತೆ ರಸ್ತೆ ನಿರ್ಮಿಸಲು ಹೆದ್ದಾರಿ ಸಂತ್ರಸ್ತರು ಕೋರ್ಟ್‌ ಮೆಟ್ಟಿಲೇರಿ ಮನವಿ ಸಲ್ಲಿಸಿದ್ದಾರೆ.

ಬೈಪಾಸ್‌-ಮಲ್ಪೆ ಮರು ಸರ್ವೇ ಪೂರ್ಣ
ಕರಾವಳಿ ಬೈಪಾಸ್‌ನಿಂದ -ಮಲ್ಪೆ 3.5 ಕಿ. ಮೀ. ರಸ್ತೆಯಲ್ಲಿನ ಸರಕಾರಿ ಭೂಮಿಯಲ್ಲಿ ರಸ್ತೆ ವಿಸ್ತರೀಕರಣ ನಡೆಯುತ್ತಿದೆ. ಖಾಸಗಿ ಜಾಗದಲ್ಲಿ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ನ್ಯಾಯಯುತ ಪರಿಹಾರ ನೀಡಿಲ್ಲ, ತಾರತಮ್ಯ ಮಾಡಲಾಗಿದೆ ಎಂಬ
ಆರೋಪವನ್ನು ಭೂಮಿ ಕಳೆದುಕೊಳ್ಳುವ ಸಂತ್ರಸ್ತರು ಮಾಡಿದ್ದಾರೆ. ಸರ್ವೇ ಪ್ರಕ್ರಿಯೆ ವ್ಯವಸಿಸ್ಥತವಾಗಿ ನಡೆದಿಲ್ಲ ಎಂಬ ದೂರಿಗೆ ಕಂದಾಯ ಇಲಾಖೆ, ಹೆದ್ದಾರಿ ಪ್ರಾಧಿಕಾರ ಮರು ಸರ್ವೇ ನಡೆಸಿದೆ. ಗರಿಷ್ಠ ಮೊತ್ತದ ಪರಿಹಾರಕ್ಕೆ ಬೇಡಿಕೆ ಇದ್ದು, ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

Advertisement

ಹೆಬ್ರಿ, ಮಲ್ಪೆ ಎಲ್ಲೆಡೆ ಅವ್ಯವಸ್ಥೆ
ಹೆಬ್ರಿ ಕೆಳಪೇಟೆ, ಪೆರ್ಡೂರು, ಹಿರಿಯಡಕ, ಉಡುಪಿ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ ಕೆಲವು ಕಡೆಗಳಲ್ಲಿ ಕಾಮಗಾರಿ ಅಪೂರ್ಣ ಗೊಂಡಿದೆ. ಮಳೆಗಾಲದಲ್ಲಿ ಕೆಸರು, ಗುಂಡಿಗಳಿಂದ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಎಲ್ಲೆಡೆ ಉತ್ತಮ ರಸ್ತೆ ಇದೆ ಎಂದು ಭಾವಿಸುವ ವಾಹನ ಸವಾರರು ಒಮ್ಮೆಲೆ ಅಪೂರ್ಣ ಕಾಮಗಾರಿಯ ಗುಂಡಿಗಳಿಗೆ ಸಿಲುಕಿ ಅಪಘಾತ ಸಂಭವಿಸುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ಮಳೆಗಾಲಕ್ಕೆ ತಾತ್ಕಾಲಿಕ ನೆಲೆಯಲ್ಲಿದಾರೂ ಪರ್ಯಾಯ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಶೀಘ್ರವೇ ಪರಿಹಾರ ಪ್ರಕ್ರಿಯೆ ಆರಂಭ
ಹೆಬ್ರಿ-ಆತ್ರಾಡಿ ಮತ್ತು ಮಲ್ಪೆ ಹೆದ್ದಾರಿ ವಿಸ್ತರೀಕರಣ ಯೋಜನೆ ಸಂಬಂಧಿಸಿ ಹಿರಿಯಡಕ, ಪೆರ್ಡೂರು ಪೇಟೆ ಭಾಗದಲ್ಲಿ 3ಎ ನೋಟಿಫಿಕೇಶನ್‌ ಆಗಿದ್ದು, 3ಡಿ ಪ್ರಕ್ರಿಯೆ ಹಂತದಲ್ಲಿದ್ದು, ಅನಂತರ ಭೂಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಶೀಘ್ರ
ನಡೆಯಲಿದೆ. ಕರಾವಳಿ-ಬೈಪಾಸ್‌-ಮಲ್ಪೆ ಸ್ಥಳೀಯರ ಬೇಡಿಕೆಯಂತೆ ಮರು ಸರ್ವೇ ಪೂರ್ಣಗೊಳಿಸಲಾಗಿದೆ.
*ರಶ್ಮಿ, ಸಹಾಯಕ ಆಯುಕ್ತರು, ಕುಂದಾಪುರ ಉಪ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next