ಉಡುಪಿ: ಕರ್ತವ್ಯ ಮತ್ತು ಸಂವೇದನೆಯ ಈ ಜಗತ್ತಿನಲ್ಲಿ ಮಾಯೆ, ಮೋಹ ಜೀವನ ಸಾಧನೆಯ ದಿಕ್ಕಿ ಬದಲಿಸಬಾರದು ಹಾಗೂ ಸಂವೇದನೆ, ವ್ಯಕ್ತಿತ್ವ, ಭಾವನೆಗಳನ್ನು ಕಳೆದುಕೊಳ್ಳಬಾರದು. ಕಷ್ಟ, ದುಃಖ ಏನೇ ಬಂದರೂ ಚಿಂತೆ ಮಾಡಬಾರದು. ಗೀತೆ ನಮ್ಮೊಂದಿಗೆ ಇದ್ದರೆ ದೇವರು ಇದ್ದಂತೆ ಎಂದು ಖ್ಯಾತ ಪ್ರವಚನಕಾರ, ದಿಲ್ಲಿಯ ಬಿಎಪಿಎಸ್ ಸ್ವಾಮಿನಾರಾಯಣ ರಿಸರ್ಚ್ ಇನ್ಸ್ಟಿಟ್ಯೂಟ್ನ ಮಹಾ ಮಹೋಪಾ ಧ್ಯಾಯ ಸಾಧು ಶ್ರೀ ಭದ್ರೇಶದಾಸ್ ಹೇಳಿದರು.
ಗೀತಾ ಜಯಂತಿ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದಿಂದ ಬುಧವಾರ ರಾಜಾಂಗಣ ದಲ್ಲಿ ಜರಗಿದ ಬೃಹತ್ ಗೀತೋತ್ಸವ, ಸಹಸ್ರಕಂಠ ಗೀತಾ ಪಾರಾಯಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿ ದಿವ್ಯಭೂಮಿ, ಇಲ್ಲಿಗೆ ಬಂದು ಧನ್ಯತೆ ಲಭಿಸಿದೆ. ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವಿಶ್ವಾದ್ಯಂತ ಗೀತಾ ಪ್ರಸಾರ ಮಾಡುತ್ತಿದ್ದಾರೆ. ಅಮೆರಿಕದ ಅವರ ಶಾಖಾ ಮಠಕ್ಕೂ ಭೇಟಿ ಕೊಟ್ಟಿದ್ದೇನೆ. ವಿದೇಶದಲ್ಲಿರುವ ಭಾರತೀಯರು ಬಯಸುವಂತೆ ಅಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ಉಳಿಸಿ ಬೆಳೆಸುವ ದೊಡ್ಡ ಕಾರ್ಯ ಆಗುತ್ತಿದೆ. ಭಗವದ್ಗೀತೆಯು ಯುನಿ ವರ್ಸಲ್ ಗ್ರಂಥ ಎಂದು ಬಣ್ಣಿಸಿದರು.
ವಿಜಯವು ಲೌಕಿಕ ವಸ್ತುವಿನಿಂದ ಸಿದ್ಧಿಸುತ್ತದೆ ಎನ್ನುವವರು ದುರ್ಯೋ ಧನನಂತೆ. ಭಗವಂತನನ್ನು ಬಯಸು ವವರು ಅರ್ಜುನನಂತೆ. ಅರ್ಜುನ ದೇವರು ನನ್ನ ಜತೆ ಇರುವುದನ್ನು ಮಾತ್ರ ಬಯಸಿದ್ದರಿಂದ ದೇವರು ಅವನ ಜತೆಗಿದ್ದರು. ಕರ್ತವ್ಯದ ಜತೆಗೆ ಸಂವೇ ದನೆಯೂ ಇರಬೇಕು ಎನ್ನುವ ಸಂದೇಶ ಇದರಲ್ಲಿದೆ. ಈಗ ನಾವು ಕರ್ತವ್ಯಕ್ಕೆ ಆದ್ಯತೆ ನೀಡಿ ಸಂವೇದನೆ ಮರೆಯುತ್ತಿದ್ದೇವೆ. ಹೀಗಾಬಾರದು ಎಂದರು. ಮನೆ ಮನೆಯಲ್ಲಿ ಗೀತಾ ಲೇಖನ ಪರ್ಯಾಯ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಮನೆ ಮನೆಯಲ್ಲಿ ಭಗದ್ಗೀತೆ ಲೇಖನ ಯಜ್ಞ ನಡೆಯಬೇಕು. ಭಗವದ್ಗೀತೆಯನ್ನು ಪಾರಾಯಣ ಮಾಡುವವರು ಶ್ರೀಕೃಷ್ಣನ ಪರಮ ಭಕ್ತರು. ಶ್ರೀ ಕೃಷ್ಣನಿಗೂ ಅದೇ ಅಚ್ಚುಮೆಚ್ಚು. ಭಗವದ್ಗೀತೆ ಜಯಂತಿ ಮಾತ್ರ ಆಚರಣೆ ಮಾಡುತ್ತೇವೆ. ವೇದ, ಭಾಗವತ, ಮಹಾಭಾರತ ಅಥವಾ ಇನ್ಯಾವುದೇ ಗಂಥಗಳ ಜಯಂತಿ ಆಚರಣೆ ಮಾಡುವುದಿಲ್ಲ. ಇದು ಭಗವದ್ಗೀತೆಯ ವಿಶೇಷತೆ ಎಂದರು.
ಇದೇ ವೇಳೆ ಪುತ್ತಿಗೆ ಶ್ರೀಪಾದರು ಶ್ರೀ ಭದ್ರೇಶ್ದಾಸ್ ಅವರಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ನೀಡಿದರು. ಶ್ರೀ ಭದ್ರೇಶ್ ದಾಸ್ ವೇದಿಕೆಯಲ್ಲೇ ಗೀತಾ ಲೇಖನ ಯಜ್ಞದ ಪುಸ್ತಕದಲ್ಲಿ ಒಂದು ಶ್ಲೋಕ ಬರೆದು ಗಮನ ಸೆಳೆದರು.
ಅಂಚೆ ಇಲಾಖೆ ಹೊರತಂದ ಗೀತಾ ಜಯಂತಿಯ ವಿಶೇಷ ಅಂಚೆ ಲಕೋಟೆಯನ್ನು ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್ ಬಿಡುಗಡೆ ಮಾಡಿದರು.
ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಮಹಾಭಾರತ ಧಾರಾವಾಹಿಯ ಕೃಷ್ಣ ಪಾತ್ರಧಾರಿ ನಿತೀಶ್ ಭಾರದ್ವಾಜ್, ನಟ, ನಿರೂಪಕ ಮಾಸ್ಟರ್ ಆನಂದ್, ಶತಾವಧಾನಿ ಡಾ| ರಾಮನಾಥ ಆಚಾರ್ಯ ಉಪಸ್ಥಿತರಿದ್ದರು.
ವಿದ್ವಾಂಸರಾದ ಡಾ| ಷಣ್ಮುಖ ಹೆಬ್ಟಾರ್ ಸ್ವಾಗತಿಸಿ, ಡಾ| ಬಿ. ಗೋಪಾಲಾಚಾರ್ಯ ನಿರೂಪಿಸಿದರು.