Advertisement

Udupi: ಪರ್ಮಿಟ್‌ ಇದ್ದರೂ ಓಡದ ಸರಕಾರಿ ಬಸ್‌ಗಳು!

02:58 PM Sep 23, 2024 | Team Udayavani |

ಉಡುಪಿ: ಗ್ರಾಮೀಣ ಭಾಗದ ಜನರಿಗೆ ಸೇವೆ ನೀಡಬೇಕೆಂಬ ಉದ್ದೇಶದಿಂದ ಆರಂಭಗೊಂಡ ಕೆಎಸ್ಸಾರ್ಟಿಸಿ ಬಸ್‌ಗಳು ಈಗ ಸೀಮಿತ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಬೇಡಿಕೆ ಇರುವ ರೂಟ್‌ಗಳಲ್ಲಿ ಬಸ್‌ಗಳೇ ಸಂಚರಿಸುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಇನ್ನು ಕೂಡ ಕಾರ್ಯಗತಗೊಂಡಿಲ್ಲ. ಈ ನಡುವೆ ಮಂಜೂರಾದ ಬಸ್‌ಗಳು ಲಾಭದಾಯಕ ರೂಟ್‌ಗಳಲ್ಲಿ ಸಂಚರಿಸುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಸರಕಾರಿ ಬಸ್‌ ಸೇವೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

Advertisement

ಪೆರ್ಡೂರು- ಕುಕ್ಕೆಹಳ್ಳಿ- ಬೆಳ್ಳಂಪಳ್ಳಿ-  ಕೊಳಲಗಿರಿ- ಶೀಂಬ್ರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ, ಬ್ರಹ್ಮಾವರದ ನೀಲಾವರ ಸಹಿತ ವಿವಿಧ ಭಾಗಗಳಿಗೆ, ಹೆಜಮಾಡಿ, ಮಟ್ಟು ಭಾಗ, ಶಿರ್ವ ಮಂಚಕಲ್‌, ಕಾಪುವಿನ ವಿವಿಧ ಭಾಗಗಳಿಗೆ ಕೆಎಸ್ಸಾರ್ಟಿಸಿ ಬಸ್‌ಗಳು ಓಡಾಟ ಮಾಡದಿರುವ ಬಗ್ಗೆ ಈಗಾಗಲೇ ಪತ್ರಿಕೆಯಲ್ಲಿ ಸರಣಿ ವರದಿಗಳು ಪ್ರಕಟವಾಗಿತ್ತು. ಈ ನಡುವೆ ಕೆಲವೊಂದು ರೂಟ್‌ಗಳಲ್ಲಿ ಬಸ್‌ಗಳು ಸಂಚರಿಸಿದರೂ ಲಾಭದಾಯಿಕ ರೂಟ್‌ಗಳನ್ನು ಕೇಂದ್ರವಾಗಿರಿಸಿಕೊಂಡಿವೆ.  ಕೆಎಸ್ಸಾರ್ಟಿಸಿ ಕಾರ್ಯಾಚರಿಸುವ ಕಾರಣ ಗ್ರಾಮೀಣ ಭಾಗಕ್ಕೆ ಪೂರ್ಣ ಸೇವೆ ಸಿಗದಂತಾಗಿದೆ.

ಚಾಲಕ-ನಿರ್ವಾಹಕರ ಕೊರತೆ
ಒಂದೆಡೆ ಕೆಎಸ್ಸಾರ್ಟಿಸಿಗೆ ಬಸ್‌ಗಳ ಸಮಸ್ಯೆಯಾದರೆ ಮತ್ತೂಂದೆಡೆ ಚಾಲಕರು ಹಾಗೂ ನಿರ್ವಾಹಕರ ಕೊರತೆಯೂ ರಾಜ್ಯಾದ್ಯಂತ ಎದುರಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿಯೂ ಸರಕಾರ ಚಿಂತನೆ ನಡೆಸುತ್ತಿದೆ. ಈ ನಡುವೆ ಲಭ್ಯ ಇರುವ ಕೆಲವೊಂದು ಮಂದಿ ಚಾಲಕ-ನಿರ್ವಾಹಕರನ್ನು ಈ ತಿಂಗಳಾಂತ್ಯದೊಳಗೆ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ ನಿಯೋಜಿಸುವ ಚಿಂತನೆಯೂ ನಡೆದಿದೆ.

ಸರಕಾರಕ್ಕೆ ವರದಿ ಸಲ್ಲಿಕೆ
ಲಭ್ಯ ಇರುವ ವಿವಿಧ ರೂಟ್‌ಗಳಿಗೆ ಬಸ್‌ ಹಾಕುವ ಬಗ್ಗೆ ಈಗಾಗಲೇ ಕೆಎಸ್ಸಾರ್ಟಿಸಿ ಅಧಿಕಾರಿಗಳು ಸಭೆ ನಡೆಸಿದ್ದು, ಪ್ರಸ್ತಾವಿತ ವರದಿಯನ್ನು ಸರಕಾರಕ್ಕೆ ಕಳುಹಿಸಿದ್ದಾರೆ. ಆದರೆ ವಿವಿಧ ಕಾರಣಗಳಿಂದ ಇದಕ್ಕೆ ಇನ್ನೂ ಅನುಮೋದನೆ ದೊರಕಿಲ್ಲ. ಈ ನಡುವೆ ಎಲೆಕ್ಟ್ರಿಕ್‌ ಬಸ್‌ ಸಹಿತ ಹೊಸ ಬಸ್‌ಗಳನ್ನು ಹಾಕುವ ನಿಟ್ಟಿನಲ್ಲಿಯೂ ವಿವಿಧ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗಿದೆಯಾದರೂ ಅಂತಿಮ ಸೂಚನೆ ಇನ್ನಷ್ಟೇ ಲಭ್ಯವಾಗಬೇಕಿದೆ.

ಮಂಜೂರಾದ ರೂಟ್‌ಗಳು
ಉಡುಪಿಯಿಂದ ಕಟಪಾಡಿ, ಕಾಪು, ಪಡುಬಿದ್ರಿ, ಬೆಳ್ಮಣ್‌, ನಿಟ್ಟೆ ಮಾರ್ಗವಾಗಿ ಕಾರ್ಕಳಕ್ಕೆ ಹಾಗೂ ಉಡುಪಿಯಿಂದ ಅಲೆವೂರು, ದೆಂದೂರುಕಟ್ಟೆ ಮಾರ್ಗವಾಗಿ ಮೂಡುಬೆಳ್ಳೆಗೆ ಸಂಚರಿಸಲು ಕೆಎಸ್ಸಾರ್ಟಿಸಿ ಬಸ್‌ಗೆ ಅನುಮತಿ ನೀಡಲಾಗಿದೆ. ಆದರೆ ಬಸ್‌ಗಳು ಮಾತ್ರ ಸಂಚರಿಸುತ್ತಿಲ್ಲ. ಬೆಳಗ್ಗೆ ಹಾಗೂ ಸಂಜೆ ವೇಳೆ ಹಲವಾರು ಮಂದಿ ಪ್ರಯಾಣಿಕರು ಸೂಕ್ತ ಬಸ್‌ ಇಲ್ಲದ ಕಾರಣ ಆಟೋ ರಿಕ್ಷಾಗಳನ್ನೇ ಅವಲಂಬಿಸುತ್ತಿರುವ ದೃಶ್ಯಗಳು ಹಲವೆಡೆ ಕಂಡುಬರುತ್ತಿವೆ.

Advertisement

ಜಿಲ್ಲೆಯ ವಿವಿಧೆಡೆ ಹೆಚ್ಚುವರಿ ಬಸ್‌
ಜಿಲ್ಲೆಯ ವಿವಿಧೆಡೆ ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಹಾಕುವ ಬಗ್ಗೆ ಈಗಾಗಲೇ ಹಲವಾರು ಮನವಿಗಳು ಬಂದಿವೆ. ಇವುಗಳನ್ನು ಪರಿಶೀಲನೆ ನಡೆಸಲಾಗುವುದು. ರೂಟ್‌ ಇದ್ದು ಬಸ್‌ಗಳು ಓಡಾಟ ಮಾಡದಿದ್ದರೆ ಅವುಗಳ ಬಗ್ಗೆ ಗಮನಹರಿಸಿ ಬಸ್‌ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗುವುದು.
-ರಾಜೇಶ್‌ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next