ನಮಗೆ ಚಿಕ್ಕಪ್ರಾಯದಲ್ಲಿ ಯಕ್ಷಗಾನದ ಹುಚ್ಚು ಇತ್ತು. ಎಲ್ಲರೊಡನೆ ಅದನ್ನೇ ಮಾತನಾಡುತ್ತಿದ್ದೆ. ಕೆರೆಮನೆ ಮಹಾಬಲ ಹೆಗಡೆಯವರ ಅಭಿಮಾನಿಯಾಗಿದ್ದೆ. ಒಬ್ಬೊಬ್ಬರು ಒಂದೊಂದು ಕಲಾವಿದರ ಅಭಿಮಾನಿಗಳು. ಎಲ್ಲರೂ ಅದನ್ನೇ ಮಾತನಾಡುವುದು. ಒಂದು ದಿನ ಅವರ ಮೇಳ ಊರಿಗೆ ಬಂತು.
“ಸಮಗ್ರ ವಿಶ್ವಾಮಿತ್ರ’ ಪ್ರಸಂಗ. ಈಸಿ ಚೆಯರ್ ಟಿಕೆಟ್‌ಗೆ ದುಡ್ಡು ಕೊಡಲು ಅಪ್ಪ ನಿರಾಕರಿಸಿದರು. ನೆಲದ ಮೇಲೆ ಕುಳಿತುಕೊಳ್ಳುವ ಐದು ಪೈಸೆಯನ್ನೂ ಕೊಡಲಿಲ್ಲ, ಬೈದರೂ ಕೂಡ. “ಮಹಾಬಲ ಹೆಗಡೆಯವರನ್ನು ಕಾಣದೆ ಬದುಕಿ ಏನೂ ಪ್ರಯೋಜನವಿಲ್ಲ’ ಎಂಬಂತಾಗಿ ರಾತ್ರಿ ಬಾವಿಗೆ ಹಾರಲು ನಿರ್ಧರಿಸಿದೆ.
ಬಾವಿ ಬಳಿ ಹೋದಾಗ ದೊಡ್ಡ ಕಪ್ಪೆಯೊಂದು ಗುಟುರು ಹಾಕಿತು. ಹೆದರಿ ಕೋಣೆಗೆ ಹೋಗಿ ಮುದುಡಿ ಮಲಗಿದೆ. ನಮ್ಮದೇ ಮೊದಲ ಪರ್ಯಾಯದಲ್ಲಿ ಮಹಾಬಲ ಹೆಗಡೆಯವರ ಯಕ್ಷಗಾನವೂ ಸಹಿತ ಅದೆಷ್ಟೋ ಯಕ್ಷಗಾನ ಪ್ರದರ್ಶನ ನಡೆಯಿತು. ಆ ಸಮಯದಲ್ಲಿ ಮಾತ್ರ ಆ ಘಟನೆ ಗಂಭೀರ ಎಂದು ಕಾಣುತ್ತದೆ. “ಆಗ ಜೀವನವೇ ವೇಸ್ಟ್’ ಎಂದೆನಿಸಿತು.
ಈ ಕಾಲಘಟ್ಟದಲ್ಲಿ ಯೋಚಿಸಿದರೆ ಅದು ಕ್ಷುಲ್ಲಕ ಎಂದೆನಿಸುತ್ತದೆ. ಮನಸ್ಸಿನ ವಿವಿಧ ಪದರಗಳಲ್ಲಿ ಬುದ್ಧಿ ಎಂಬ ಪದರವೇ ಶ್ರೇಷ್ಠವಾದದ್ದು. ಮನಸ್ಸು ಎಂಬುದು ಭಾವನೆಗೆ ಸಂಬಂಧಪಟ್ಟರೆ, ಬುದ್ಧಿ ಎನ್ನುವುದು ಡಿಸಿಶನ್‌ಗೆ ಸಂಬಂಧಿಸಿದ್ದು. ಭಾವನೆಗಿಂತ ವಿಚಾರ ಮುಖ್ಯ. ಭಾವನೆ ತಳಹದಿಯಲ್ಲಿ ಹೋಗದೆ ವಿವೇಕದ ತಳಹದಿಯಲ್ಲಿ ಹೋಗಬೇಕು.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811